ನವ ದೆಹಲಿ: 2019ರಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ‘ಎಲ್ಲ ಕಳ್ಳರ ಹೆಸರೂ ಮೋದಿ ಎಂಬ ಉಪನಾಮವನ್ನೇ ಹೊಂದಿರುತ್ತಿದೆ’ ಎಂದು ಹೇಳಿದ್ದ ರಾಹುಲ್ ಗಾಂಧಿ ಈಗ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅಷ್ಟೇ ಅಲ್ಲ, ಲೋಕಸಭೆ ಸದಸ್ಯನ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಇದೇ ಹೊತ್ತಲ್ಲಿ ಕಾಂಗ್ರೆಸ್ನ ಹಲವು ನಾಯಕರು ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ತಿರುಗಿಬಿದ್ದಿದ್ದಾರೆ. ಪ್ರಧಾನಿ ಮೋದಿಯವರು ಈ ಹಿಂದೆ ಕಾಂಗ್ರೆಸ್ ನಾಯಕರಿಗೆ ಏನೆಲ್ಲ ಹೇಳಿ ಟೀಕಿಸಿದ್ದಾರೆ ಎಂಬುದನ್ನೆಲ್ಲ ಒಂದೊಂದೇ ನೆನಪಿಸಿಕೊಂಡು ಎತ್ತಾಡುತ್ತಿದ್ದಾರೆ. ಅದರಲ್ಲೀಗ ಕಾಂಗ್ರೆಸ್ ಹಿರಿಯ ನಾಯಕಿ, ಮಾಜಿ ಸಚಿವೆ ರೇಣುಕಾ ಚೌಧರಿ ಅವರು ಟ್ವೀಟ್ ಮಾಡಿ ‘ಪ್ರಧಾನಿ ನರೇಂದ್ರ ಮೋದಿ ನನ್ನನ್ನು ಶೂರ್ಪನಖಿ ಎಂದಿದ್ದರು. ನಾನೀಗ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಕೋರ್ಟ್ಗಳು ಅದೆಷ್ಟು ಶೀಘ್ರವಾಗಿ ವಿಚಾರಣೆ ನಡೆಸಿ, ತೀರ್ಪು ನೀಡುತ್ತವೆ ನೋಡೋಣ’ ಎಂದಿದ್ದಾರೆ. ಅಲ್ಲಿ ಅವರು ಪ್ರಧಾನಿ ಮೋದಿ ಎಂದು ಉಲ್ಲೇಖಿಸುವ ಬದಲು ‘ಸರ್ವಾಧಿಕಾರಿ’ ಎಂದು ಹೇಳಿದ್ದಾರೆ.
ಇದು 2018ರಲ್ಲಿ ನಡೆದಿದ್ದ ಒಂದು ಪ್ರಕರಣ ಆಗಿತ್ತು. ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದು ಗಂಭೀರವಾದ ವಿಷಯ ಮಾತನಾಡುತ್ತಿದ್ದರು. ಆಗ ರೇಣುಕಾ ಚೌಧರಿ ಸುಮ್ಮನೆ ನಗುತ್ತಿದ್ದರು. ಅಂದಿನ ರಾಜ್ಯಸಭಾ ಅಧ್ಯಕ್ಷರಾಗಿದ್ದ ವೆಂಕಯ್ಯ ನಾಯ್ಡು ಅವರು ರೇಣುಕಾ ಚೌಧರಿ ಅವರಿಗೆ, ‘ನಿಮಗೆ ಏನಾಗುತ್ತಿದೆ?, ಇಂಥ ಅಶಿಸ್ತು ಸರಿಯಲ್ಲ’ ಎಂದು ಹೇಳಿದರು. ಆದರೂ ರೇಣುಕಾ ಚೌಧರಿ ಸುಮ್ಮನಾಗಲಿಲ್ಲ. ನಗುವುದನ್ನು ಮುಂದುವರಿಸಿದ್ದರು. ಅದೇ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿ ‘ಸಭಾಪತಿಯವರೇ ಬಿಡಿ, ರೇಣುಕಾ ಜೀ ಅವರು ನಗುವನ್ನು ಮುಂದುವರಿಸಲಿ. ರಾಮಾಯಣ ಧಾರಾವಾಹಿ ಮುಗಿದ ಮೇಲೆ ಇಂಥ ನಗುವನ್ನು ನಾವು ಇಂದೇ ಕೇಳುತ್ತಿದ್ದೇವೆ’ ಎಂದು ಹೇಳಿದ್ದರು. ಆಗ ಬಿಜೆಪಿ ಸಂಸದರು/ಕೇಂದ್ರ ಸಚಿವರೆಲ್ಲ ಜೋರಾಗಿ ಮೇಜು ಕುಟ್ಟಿ, ದೊಡ್ಡದಾಗಿ ನಕ್ಕಿದ್ದರು. ಇದರಿಂದ ರೇಣುಕಾ ಚೌಧರಿ ಮುಜುಗರಕ್ಕೀಡಾಗಿದ್ದರು.
ಇದೇ ಸನ್ನಿವೇಶವನ್ನು ರೇಣುಕಾ ಚೌಧರಿ ಈಗ ನೆನಪಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಶೂರ್ಪನಖಿ ಎಂಬ ಶಬ್ದವನ್ನು ಬಾಯ್ಬಿಟ್ಟು ಹೇಳಿರಲಿಲ್ಲ. ಪರೋಕ್ಷವಾಗಿ ಹೋಲಿಕೆ ಮಾಡಿದ್ದರು. ಆದರೀಗ ರೇಣುಕಾ ಚೌಧರಿ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ. ಅದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಸೇರಿ ಹಲವರು ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.
ರೇಣುಕಾ ಚೌಧರಿ ಶೇರ್ ಮಾಡಿಕೊಂಡಿರುವ ಹಳೇ ವಿಡಿಯೊಕ್ಕೆ ಸುಪ್ರೀಂಕೋರ್ಟ್ ವಕೀಲ ಶಶಾಂಕ್ ಶೇಖರ್ ಝಾ ಪ್ರತಿಕ್ರಿಯೆ ನೀಡಿದ್ದಾರೆ ‘ಮೋದಿಯವರು ನಿಮ್ಮನ್ನು ನೇರವಾಗಿ ಎಲ್ಲಿಯೂ ಶೂರ್ಪನಖಿ ಎಂದು ಸಂಬೋಧಿಸಿಯೇ ಇಲ್ಲ. ಅಷ್ಟಕ್ಕೂ ಸಂಸತ್ತಿನಲ್ಲಿ ಯಾರು ಏನೇ ಹೇಳಿದರೂ, ಅದರ ವಿರುದ್ಧ ಕೋರ್ಟ್ಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ನೀವೀಗ ಗಾಂಧಿ ಕುಟುಂಬದ ಗಮನವನ್ನು ನಿಮ್ಮೆಡೆಗೆ ಸೆಳೆಯುವ ಸಲುವಾಗಿಯಷ್ಟೇ, ಮೋದಿಯವರನ್ನು ಸರ್ವಾಧಿಕಾರಿ ಎಂದು ಕರೆದಿದ್ದೀರಿ ಎಂದು ಹೇಳಿದ್ದಾರೆ. ಅಂದರೆ ಈ ವಿಚಾರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಮತ್ತು ಹಾಕಿದರೆ ಅರ್ಜಿ ತಿರಸ್ಕೃತಗೊಳ್ಳುತ್ತದೆ ಎಂಬುದನ್ನು ಅವರು ಸೂಕ್ಷ್ಮವಾಗಿ ತಿಳಿಸಿದ್ದಾರೆ.