ನವ ದೆಹಲಿ: ಕೇಂದ್ರ ಬಿಜೆಪಿ ಸಂಸದೀಯ ಮಂಡಳಿಯಿಂದ ಸಚಿವ ನಿತಿನ್ ಗಡ್ಕರಿ ಅವರನ್ನು ಈ ಸಲ ಕೈಬಿಟ್ಟಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಅದರಲ್ಲೂ ಅವರು ಶನಿವಾರ ನಾಗ್ಪುರದಲ್ಲಿ ನಡೆದ ಉದ್ಯಮಿಗಳ ಸಮಾವೇಶವೊಂದರಲ್ಲಿ ಆಡಿದ ಮಾತುಗಳು ಇನ್ನಷ್ಟು ಕುತೂಹಲ ಹುಟ್ಟಿಸಿದೆ. ಈ ಹಿಂದೆ ಹಲವು ದಿನಗಳಿಂದಲೂ ಪಕ್ಷಕ್ಕೆ ಮುಜುಗರ ತರುವ ಮಾತುಗಳನ್ನೇ ಆಡುತ್ತ ಬಂದಿರುವ ನಿತಿನ್ ಗಡ್ಕರಿ ಈಗ ‘ಯಾವುದೇ ವ್ಯಕ್ತಿಯನ್ನು ಬಳಸುವಷ್ಟು ಬಳಸಿಕೊಂಡು, ನಂತರ ಕೆಲಸ ಮುಗಿದ ತಕ್ಷಣ ಪೂರ್ತಿಯಾಗಿ ಬಿಟ್ಟು ಬಿಡಬಾರದು’ ಎಂದು ಹೇಳಿದ್ದಾರೆ.
‘ಉದ್ಯಮದಲ್ಲಾಗಲಿ, ಸಾಮಾಜಿಕ ಕೆಲಸಗಳಲ್ಲೇ ಇರಲಿ ಅಥವಾ ರಾಜಕೀಯವೇ ಇರಲಿ, ಮನುಷ್ಯ ಸಂಬಂಧಗಳು ಅತಿದೊಡ್ಡ ಬಲವಾಗಿರುತ್ತವೆ. ಹೀಗಾಗಿ ಬೇಕಾದಾಗ ಬಳಸಿಕೊಂಡು, ಅಗತ್ಯವಿಲ್ಲದಾಗ ದೂರ ತಳ್ಳುವ ಪ್ರವೃತ್ತಿ ಒಳ್ಳೆಯದಲ್ಲ. ಒಮ್ಮೆ ಒಬ್ಬರ ಕೈಯನ್ನು ನೀವು ಹಿಡಿದಿದ್ದೀರಿ ಅಂದರೆ, ಕಷ್ಟ ಬರಲಿ, ಸುಖವೇ ಇರಲಿ ಅದನ್ನೆಂದೂ ಬಿಡಬಾರದು. ಉದಯಿಸುವ ಸೂರ್ಯನನ್ನು, ನಿಮ್ಮ ಪರಿಸ್ಥಿತಿಗೆ ತಕ್ಕಂತೆ ಪೂಜಿಸುವ ಪರಿಪಾಠ ಒಳ್ಳೆಯದಲ್ಲ’ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಇದೇ ವೇಳೆ ತನಗೆ ಹಿಂದೊಮ್ಮೆ ಕಾಂಗ್ರೆಸ್ ಸೇರುವಂತೆ ಆಫರ್ ಬಂದಿದ್ದರ ಬಗ್ಗೆಯೂ ಮಾತನಾಡಿದ ನಿತಿನ್ ಗಡ್ಕರಿ ‘ನನ್ನ ಸ್ನೇಹಿತ ಶ್ರೀಕಾಂತ್ ಜಿಚ್ಕಾರ್ ಕಾಂಗ್ರೆಸ್ನಲ್ಲಿದ್ದರು. ಹಿಂದೊಮ್ಮೆ ನನ್ನ ಬಳಿ, ನೀವು ತುಂಬ ಒಳ್ಳೆಯ ವ್ಯಕ್ತಿ, ಆದರೆ ನೀವಿರುವ ಪಕ್ಷ ನಿಮಗೆ ಸೂಕ್ತವಲ್ಲ. ನೀವು ಕಾಂಗ್ರೆಸ್ಗೆ ಸೇರಿ, ನಿಮ್ಮ ಭವಿಷ್ಯ ಇನ್ನಷ್ಟು ಉತ್ತಮವಾಗಿರುತ್ತದೆ ಎಂದು ಹೇಳಿದ್ದರು. ಆದರೆ ನಾನು ಒಪ್ಪಿರಲಿಲ್ಲ. ಬಾವಿಗೆ ಬೇಕಾದರೂ ಬೀಳುತ್ತೇನೆ, ಕಾಂಗ್ರೆಸ್ ಸೇರುವುದಿಲ್ಲ ಎಂದಿದ್ದೆ. ನನಗೆ ಕಾಂಗ್ರೆಸ್ ಪಾರ್ಟಿಯ ಸಿದ್ಧಾಂತ ಸ್ವಲ್ಪವೂ ಹಿಡಿಸುವುದಿಲ್ಲ’ ಎಂದೂ ಇದೇ ವೇಳೆ ಹೇಳಿದ್ದಾರೆ. ಅಷ್ಟೇ ಅಲ್ಲ, ‘ಒಬ್ಬ ವ್ಯಕ್ತಿ ಯುದ್ಧ ಭೂಮಿಯಲ್ಲಿ ಸೋತಾಕ್ಷಣ ಅವನು ಸತ್ತಂತೆ ಎಂದು ಭಾವಿಸಬೇಕಿಲ್ಲ. ಆದರೆ ಅದೇ ವ್ಯಕ್ತಿ ಯುದ್ಧವನ್ನೇ ಮಾಡುವುದಿಲ್ಲ ಎಂದು ಕೈಬಿಟ್ಟಾಗ ಅವನು ಇದ್ದೂ ಇಲ್ಲದಂತೆ ಎನ್ನಿಸಿಕೊಳ್ಳುತ್ತಾನೆ. ಪ್ರತಿಯೊಬ್ಬರಿಗೂ ಸಕಾರತ್ಮಕತೆ ಮತ್ತು ಆತ್ಮವಿಶ್ವಾಸ ಬೇಕೇ ಹೊರತು, ದುರಹಂಕಾರ ಅಲ್ಲ’ ಎಂಬ ಮಾತುಗಳನ್ನೂ ಹೇಳಿದರು.
ನಿತಿನ್ ಗಡ್ಕರಿಯನ್ನು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯಿಂದ ಕೈಬಿಡಲು ಸೂಚಿಸಿದ್ದೇ ಆರ್ಎಸ್ಎಸ್ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ನಿತಿನ್ ಗಡ್ಕರಿ ಇತ್ತೀಚೆಗೆ ಪದೇಪದೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಸಾಧನೆಗಳಿಗೆ ವಿರುದ್ಧವಾಗಿ ಮಾತನಾಡುತ್ತಿದ್ದರು. ಹೀಗಾಗಿ ಆರ್ಎಸ್ಎಸ್ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿತ್ತು ಎನ್ನಲಾಗಿದೆ. ಅದೇನೇ ಆದರೂ ನಿತಿನ್ ಗಡ್ಕರಿಯನ್ನು ಸಂಸದೀಯ ಮಂಡಳಿ ಮತ್ತು ಚುನಾವಣಾ ಪ್ರಚಾರ ಸಮಿತಿಯಿಂದ ಕೈಬಿಟ್ಟ ಬೆನ್ನಲ್ಲೇ ಅನೇಕ ಪ್ರಶ್ನೆಗಳು ಎದ್ದಿದ್ದಂತೂ ನಿಜ.
ಇದನ್ನೂ ಓದಿ: ಆರ್‌ಎಸ್‌ಎಸ್‌ಗೆ ಮುಜುಗರ ತಂದದ್ದೇ ನಿತಿನ್ ಗಡ್ಕರಿ ಪದಚ್ಯುತಿಗೆ ಕಾರಣವೇ?