ಇಂದು ಮಧ್ಯಪ್ರದೇಶದ ಮೊರೆನಾ ಬಳಿ ವಾಯುಪಡೆಯ ಎರಡು ಯುದ್ಧ ವಿಮಾನಗಳು ಮತ್ತು ರಾಜಸ್ಥಾನದ ಭರತ್ಪುರದಲ್ಲಿ ಒಂದು ಚಾರ್ಟರ್ಡ್ ವಿಮಾನ ಸೇರಿ ಒಟ್ಟು ಮೂರು ವಿಮಾನಗಳು ಪತನ (Plane Crashes)ಗೊಂಡಿವೆ ಎಂದು ಹೇಳಲಾಗಿತ್ತು. ಆದರೆ ಈಗ ಸ್ಪಷ್ಟ ಮಾಹಿತಿ ಬಂದಿದ್ದು, ಅಪಘಾತಕ್ಕೀಡಾಗಿದ್ದು ಮೂರು ವಿಮಾನಗಳಲ್ಲ, ಎರಡೇ ವಿಮಾನ ಮತ್ತು ಇವೆರಡೂ ಭಾರತೀಯ ವಾಯುಸೇನೆಯ ಫೈಟರ್ ಜೆಟ್ಗಳು ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಈಗ ಒಬ್ಬ ಪೈಲೆಟ್ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶ ಗ್ವಾಲಿಯರ್ ವಾಯುನೆಲೆಯಿಂದ ಮುಂಜಾನೆ 5.30ಕ್ಕೆ ಟೇಕ್ ಆಫ್ ಆದ ಸುಖೋಯ್ 30 ಮತ್ತು ಮಿರಾಜ್ 2000 ಯುದ್ಧ ವಿಮಾನಗಳು ತಾಲೀಮು ಹಾರಾಟ ನಡೆಸುತ್ತಿದ್ದವು. ಸುಖೋಯ್ ವಿಮಾನದಲ್ಲಿ ಇಬ್ಬರು ಪೈಲೆಟ್ಗಳು ಇದ್ದರೆ, ಮಿರಾಜ್ನಲ್ಲಿ ಒಬ್ಬ ಪೈಲೆಟ್ ಇದ್ದ. ಈ ಎರಡೂ ವಿಮಾನಗಳೂ ಹಾರಾಟ ಶುರು ಮಾಡಿದ ಕೆಲವೇ ಹೊತ್ತಲ್ಲಿ ಪತನಗೊಂಡಿವೆ. ಇದರಲ್ಲಿ ಸುಖೋಯ್ 30 ವಿಮಾನ ಮಧ್ಯಪ್ರದೇಶದ ಮೊರೆನಾ ಬಳಿಯೇ ಬಿದ್ದಿದ್ದರೆ, ಇಲ್ಲಿಂದ 100 ಕಿಮೀ ದೂರದಲ್ಲಿರುವ ರಾಜಸ್ಥಾನದ ಭರತ್ಪುರದಲ್ಲಿ ಮಿರಾಜ್ 2000 ವಿಮಾನ ಬಿದ್ದು, ಬೆಂಕಿ ಹೊತ್ತಿ ಉರಿದಿದೆ. ಮಿರಾಜ್ ವಿಮಾನದಲ್ಲಿದ್ದ ಪೈಲೆಟ್ ಮೃತಪಟ್ಟಿದ್ದಾರೆ ಮತ್ತು ಸುಖೋಯ್ನಲ್ಲಿದ್ದ ಇಬ್ಬರೂ ಪೈಲೆಟ್ಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎರಡೂ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಬಿದ್ದಿವೆ ಎಂದೇ ಹೇಳಲಾಗುತ್ತಿದ್ದರೂ ಅದಿನ್ನೂ ದೃಢಪಟ್ಟಿಲ್ಲ.
ಮೊರೆನಾ ಮತ್ತು ಭರತ್ಪುರ ವಿಮಾನ ಪ್ರಯಾಣದಲ್ಲಿ ತುಂಬ ದೂರವೇನೂ ಅಲ್ಲ. ವಾಯುಸೇನೆ ವಿಮಾನಗಳು ಈ ಪ್ರದೇಶದಲ್ಲಿ ಹಾರಾಡುವುದು ಸಾಮಾನ್ಯವೂ ಹೌದು. ಎಂದಿನಂತೆ ಈ ಯುದ್ಧ ವಿಮಾನಗಳೂ ಕೂಡ ಅತ್ಯಂತ ವೇಗದಲ್ಲಿ ತಾಲೀಮು ಹಾರಾಟ ನಡೆಸುತ್ತಿದ್ದವು. ಹೀಗಾಗಿ ಆಕಾಶದಲ್ಲಿ ಡಿಕ್ಕಿಯಾಗಿರಬಹುದಾದ ಸಾಧ್ಯತೆಯೇ ಹೆಚ್ಚು ಎಂದು ಮೂಲಗಳು ತಿಳಿಸಿವೆ.
ಘಟನೆ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ವಾಯು ಸೇನಾಪಡೆ (IAF), ‘ವಾಯುಸೇನೆಯ ಎರಡು ವಿಮಾನಗಳು ಎಂದಿನಂತೆ ತಾಲೀಮು ಹಾರಾಟ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಎರಡೂ ವಿಮಾನಗಳೂ ಪತನಗೊಂಡಿವೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದೆ. ಘಟನೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅವರಿಂದ ಮಾಹಿತಿ ಪಡೆದಿದ್ದಾರೆ.