Site icon Vistara News

ವಾಯುಪಡೆ ನಿವೃತ್ತ ಪೈಲಟ್​ ದಲೀಪ್ ಸಿಂಗ್​​​ಗೆ 102 ವರ್ಷದ ಸಂಭ್ರಮ; ಐಎಎಫ್​​ನಿಂದ ಶುಭಾಶಯ

Dalip Singh

ನವ ದೆಹಲಿ: 102ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಿವೃತ್ತ ಸ್ಕ್ವಾಡ್ರನ್​ ಲೀಡರ್​ ದಲೀಪ್ ಸಿಂಗ್ ಮಜಿತಿಯಾ ಅವರಿಗೆ ಭಾರತೀಯ ವಾಯು ಸೇನೆ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಮತ್ತು ಇಡೀ ವಾಯುಪಡೆಯ ಎಲ್ಲ ಸಿಬ್ಬಂದಿ ಶುಭಾಶಯ ಕೋರಿದ್ದಾರೆ. ದಲೀಪ್​ ಸಿಂಗ್​ ಅವರು ಕೇಕ್​ ಕತ್ತರಿಸುತ್ತಿರುವ ಮತ್ತು ವಾಯುಪಡೆಯ ಮೂವರು ಸಿಬ್ಬಂದಿ ಅವರ ಸುತ್ತ ನಿಂತು ಹಾರೈಸುತ್ತಿರುವ ಫೋಟೋವೊಂದನ್ನು ಕೂಡ ಭಾರತೀಯ ವಾಯು ಸೇನೆ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದೆ.

ದಲೀಪ್ ಸಿಂಗ್ ಮಜಿಥಿಯಾ ಅವರು ಭಾರತದ ಅತ್ಯಂತ ಹಳೇ ಫೈಟರ್ ಪೈಲಟ್​ ಎಂದೇ ಖ್ಯಾತರಾಗಿದ್ದಾರೆ. ಇವರು ಸ್ವಾತಂತ್ರ್ಯ ಪೂರ್ವದಲ್ಲಿ ವಾಯುಸೇನೆಯಲ್ಲಿ ಇದ್ದವರು. 1940ರಲ್ಲಿ ತಮ್ಮ 20ನೇ ವರ್ಷದಲ್ಲಿದ್ದಾಗ ಮೊಟ್ಟ ಮೊದಲಿಗೆ ಟೈಗರ್​ ಮಾಥ್​ ತರಬೇತಿ ಏರ್​ಕ್ರಾಫ್ಟ್​ನ್ನು ಲಾಹೋರ್​​ನ ವಾಲ್ಟನ್​ ಏರ್​ಫೀಲ್ಡ್​​ನಿಂದ ಏಕಾಂಗಿಯಾಗಿ ಹಾರಿಸಿದ್ದರು. ಆಗ ಅವರಿಗೆ ಇಬ್ಬರು ಬ್ರಿಟಿಷ್​ ಅಧಿಕಾರಿಗಳು ಮಾರ್ಗದರ್ಶನ ಮಾಡಿದ್ದರು. ಬಳಿಕ 1947ರ ಆಗಸ್ಟ್​ನಲ್ಲಿ ನಿವೃತ್ತರಾಗಿದ್ದಾರೆ.

ತಮ್ಮ 100ನೇ ವರ್ಷದ ಹುಟ್ಟುಹಬ್ಬದ ವೇಳೆಯಲ್ಲಿ ಮಾತನಾಡಿದ್ದ ದಲೀಪ್​ ಸಿಂಗ್​ ಮಜಿಥಿಯಾ, ‘ನನ್ನನ್ನು ಈಗಲೂ ವಾಯುಪಡೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ಮಾಡುತ್ತಾರೆ. ಆಗೆಲ್ಲ ನಾನೂ ಸಹ ಇನ್ನೂ ಭಾರತೀಯ ವಾಯುಪಡೆಯಲ್ಲೇ ಇದ್ದೇನೆ ಎಂಬ ಭಾವ ಮೂಡುತ್ತದೆ. ನನ್ನ ಬ್ಯಾಚ್​​ನವರು ಈಗ ಯಾರೂ ಬದುಕಿಲ್ಲ. ಅವರೆಲ್ಲ ಇದ್ದಾಗ ತುಂಬ ಚೆನ್ನಾಗಿತ್ತು. ಪ್ರತಿವರ್ಷವೂ ಆಗಸ್ಟ್​ 1ರಂದು ನಾವೆಲ್ಲ ಭೇಟಿಯಾಗಿ ಖುಷಿಯಾಗಿ ಕಾಲ ಕಳೆಯುತ್ತಿದ್ದೆವು. ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದೆವು’ ಎಂದು ಹೇಳಿದ್ದರು.

ದಲೀಪ್​ ಸಿಂಗ್ ತಮ್ಮ ವೃತ್ತಿ ಜೀವನದಲ್ಲಿ ಹಲವು ಸಾಧನೆ ಮಾಡಿದ್ದಾರೆ. ಇವರ ವೃತ್ತಿಜೀವನ ನಂಬಿಕೆ, ಧೈರ್ಯ ಮತ್ತು ಸಾಹಸದಿಂದ ಕೂಡಿತ್ತು ಎಂದು ಏರೋಸ್ಪೇಸ್​ ಇತಿಹಾಸಕಾರರು ಹೇಳುತ್ತಾರೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಾಕರ್​ ಹರಿಕೇನ್​ ಯುದ್ಧವಿಮಾನವನ್ನು ಹಾರಿಸಿದ್ದರು. ಅದಾದ ದಶಕಗಳ ಕಾಲ ನೇಪಾಳದ ಖಾಟ್ಮಂಡು ಕಣಿವೆಯಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿದ ಮೊದಲಿಗ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 1979ರಲ್ಲಿ ಕೊನೇ ಬಾರಿಗೆ ಏರ್​ಕ್ರಾಫ್ಟ್ ಹಾರಿಸಿದ್ದಾರೆ.

ಇದನ್ನೂ ಓದಿ: ಬೀದರ್‌ ಏರ್‌ಬೇಸ್‌ನಲ್ಲಿ ಒಟ್ಟಿಗೇ ಯುದ್ಧ ವಿಮಾನ ಹಾರಿಸಿದ ಅಪ್ಪ-ಮಗಳು; ಏರ್‌ಫೋರ್ಸ್‌ನಲ್ಲಿ ಅಪೂರ್ವ ದಾಖಲೆ!

Exit mobile version