Site icon Vistara News

Stadium row: ಕ್ರೀಡಾಂಗಣದಲ್ಲಿ ನಾಯಿ ಜತೆ ವಾಕಿಂಗ್‌ ಮಾಡಿದ್ದ ಅಧಿಕಾರಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ!

ದೆಹಲಿ: ದೆಹಲಿಯ ತ್ಯಾಗರಾಜ ಕ್ರೀಡಾಂಗಣದಿಂದ (Delhi’s Thyagraj Stadium) ಕ್ರೀಡಾಳುಗಳನ್ನು ಹೊರಗಟ್ಟಿ ನಾಯಿಯೊಂದಿಗೆ ವಾಕಿಂಗ್‌ ಮಾಡಿದ್ದ ಐಎಎಸ್‌ (IAS) ಅಧಿಕಾರಿ ರಿಂಕು ದುಗ್ಗ (54) ಅವರನ್ನು ಸರ್ಕಾರ ಕಡ್ಡಾಯ ನಿವೃತ್ತಿಗೊಳಿಸಿದೆ. 1994ರ ಬ್ಯಾಚಿನ ಐಎಎಸ್‌ ಅಧಿಕಾರಿಯಾಗಿರುವ ರಿಂಕು ದುಗ್ಗ ಅರುಣಾಚಲ ಪ್ರದೇಶದ ಸ್ಥಳೀಯ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ರಿಂಕು ದುಗ್ಗ ಅವರ ಪತಿ ಸಂಜೀವ್‌ ಖೈರ್ವಾರ್‌ ಕೂಡ 1994ರ ಬ್ಯಾಚ್‌ನ ಐಎಎಸ್‌ ಅಧಿಕಾರಿ. ಅವರನ್ನು ಕಳೆದ ವರ್ಷ ದೆಹಲಿಯಿಂದ ಲಡಾಕ್‌ಗೆ ವರ್ಗಾಯಿಸಲಾಗಿತ್ತು. ಇವರು ತಮ್ಮ ನಾಯಿಯ ಜತೆ ವಾಕಿಂಗ್‌ಗೆ ಹೋಗಲೆಂದು ದೆಹಲಿಯ ತ್ಯಾಗರಾಜ ಸ್ಟೇಡಿಯಂಅನ್ನು ಸಂಜೆ ಏಳು ಗಂಟೆಗೇ ಖಾಲಿ ಮಾಡಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಇಬ್ಬರನ್ನೂ ದೆಹಲಿಯಿಂದ ವರ್ಗಾಯಿಸಿ ಕಳೆದ ವರ್ಷ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿತ್ತು.

ರಿಂಕು ದುಗ್ಗ ಅವರ ಕೆಲಸದ ದಾಖಲೆಗಳನ್ನು ಪರಿಶೀಲಿಸಿ ಕಡ್ಡಾಯ ನಿವೃತ್ತಿಗೆ ಸೂಚಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಸೆಂಟ್ರಲ್‌ ಸಿವಿಲ್‌ ಸರ್ವಿಸಸ್‌ (‌CCS) ಪೆನ್ಶನ್ ರೂಲ್ಸ್‌, 1972ರ ಫಂಡಮೆಂಟಲ್‌ ರೂಲ್ಸ್ (‌FR) 56(j), ರೂಲ್‌ 48 ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ಒಮ್ಮತದ ಅಭಿಪ್ರಾಯ ಇದ್ದರೆ ಯಾವುದೇ ಸರ್ಕಾರಿ ಉದ್ಯೋಗಿಗೆ ಕಡ್ಡಾಯ ನಿವೃತ್ತಿ ಸೂಚಿಸುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಮೂಲಗಳು ತಿಳಿಸಿವೆ. ಸದ್ಯ ರಿಂಕು ದುಗ್ಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿವಾದವೇನು?

ದೆಹಲಿಯ ಕಂದಾಯ ವಿಭಾಗದ ಪ್ರಿನ್ರಿಪಾಲ್‌ ಸೆಕ್ರೆಟರಿ ಅಗಿದ್ದ ಖೈರ್ವಾರ್‌ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತ್ಯಾಗರಾಜ ಸ್ಟೇಡಿಯಂನಿಂದ ಎಲ್ಲ ಕ್ರೀಡಾಳುಗಳನ್ನು ಏಳು ಗಂಟೆಗೆ ಹೊರ ಹೋಗುವಂತೆ ನೋಡಿಕೊಂಡು ಬಳಿಕ ಅವರು ತಮ್ಮ ಪತ್ನಿ ರಿಂಕು ದುಗ್ಗ ಮತ್ತು ನಾಯಿ ಜತೆ ಅಲ್ಲಿ ವಾಕಿಂಗ್‌ ಮಾಡುತ್ತಿದ್ದರು! ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ಕೇಳಿ ಬಂದಿತ್ತು.

ಇದನ್ನೂ ಓದಿ: UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!

ವಿವಾದದ ಬಳಿಕ 1994ರ ಬ್ಯಾಚ್‌ನ ಎಜಿಎಂಯುಟಿ ಕೇಡರ್‌ಗೆ ಸೇರಿದ ರಿಂಕು ದುಗ್ಗ ಅವರನ್ನು 2022ರ ಮೇ ತಿಂಗಳಲ್ಲಿ ಅರುಣಾಚಲ ಪ್ರದೇಶಕ್ಕೆ ನಿಯೋಜಿಸಲಾಗಿತ್ತು. ಅವರನ್ನು ಈಶಾನ್ಯ ರಾಜ್ಯದ ಸ್ಥಳೀಯ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.

ಇನ್ನಷ್ಟು ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

Exit mobile version