ಛತ್ತೀಸ್ಗಢ್ನ ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 10.30ರ ಹೊತ್ತಿಗೆ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಂಡು (IED Blast in Chhattisgarh)ಸಿಆರ್ಪಿಎಫ್ನ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ನಕ್ಸಲರು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು, ಟೆಕಮೆಟಾ ಬೆಟ್ಟದ ಬಳಿ ಐಇಡಿ ಅಳವಡಿಸಿದ್ದರು. ಅದೇ ಮಾರ್ಗವಾಗಿ ತೆರಳುತ್ತಿದ್ದ, ಸಿಆರ್ಪಿಎಫ್ 85ನೇ ಬೆಟಾಲಿಯನ್ನ ತಂಡದಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಇವರೆಲ್ಲ ತಾವಿದ್ದ ಹಿರೋಲಿಯಿಂದ ಪುಸ್ನರ್ ಶಿಬಿರಕ್ಕೆ ತೆರಳುತ್ತಿದ್ದರು. ಈ ವೇಳೆ ಟೆಕಮೆಟಾ ಬೆಟ್ಟದ ಸಮೀಪ ಐಇಡಿ ಸ್ಫೋಟಗೊಂಡಿದೆ. ಗಾಯಗೊಂಡ ಇಬ್ಬರಿಗೂ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ರಾಯ್ಪುರಕ್ಕೆ ಕರೆದೊಯ್ಯಲಾಗಿದೆ.
ಛತ್ತೀಸ್ಗಢ್ನ ದಂತೇವಾಡಾ ಜಿಲ್ಲೆಯ ಅರನ್ಪುರ ಎಂಬಲ್ಲಿ ಕಳೆದ ತಿಂಗಳು ಇಂಥದ್ದೇ ದುರಂತ ಆಗಿತ್ತು. ಛತ್ತೀಸ್ಗಢ ಜಿಲ್ಲಾ ಮೀಸಲು ಪಡೆಯ ವಾಹನಗಳು ಸಂಚರಿಸುತ್ತಿದ್ದ ರಸ್ತೆಯಲ್ಲಿ ಐಇಡಿ ಅಳವಡಿಸಿ ಇಟ್ಟಿದ್ದರು. ಅದು ಸ್ಫೋಟಗೊಂಡ ಪರಿಣಾಮ 11 ಯೋಧರು ಮೃತಪಟ್ಟಿದ್ದರು. ಅರನ್ಪುರ ಏರಿಯಾದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಛತ್ತೀಸ್ಗಢ್ ಜಿಲ್ಲಾ ಮೀಸಲು ಪಡೆ ಸೈನಿಕರು ಅಲ್ಲಿಗೆ ತೆರಳಿದ್ದರು. ಕಾರ್ಯಾಚರಣೆ ಮುಗಿಸಿಕೊಂಡು ವಾಪಸ್ ಬರುವ ವೇಳೆ ಅವಘಡ ಆಗಿತ್ತು.
ಇದನ್ನೂ ಓದಿ: Chhattisgarh Naxal Attack : ನಕ್ಸಲ್ ದಾಳಿಯ ಮಾಸ್ಟರ್‌ಮೈಂಡ್ ಫೋಟೊ ಬಿಡುಗಡೆ
ಹಾಗೇ, ಇದೇ ಮೇ ತಿಂಗಳ ಪ್ರಾರಂಭದಲ್ಲಿ ಬಿಜಾಪುರದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಕಮಾಂಡೋ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆ್ಯಕ್ಷನ್ನ (ಕೋಬ್ರಾ) ಇಬ್ಬರು ಯೋಧರು ಗಾಯಗೊಂಡಿದ್ದರು. ಅಂದು ಪುನ್ಸಾರ್ ಮತ್ತು ಹಿರೋಲಿ ಗ್ರಾಮಗಳಲ್ಲಿ ನಕ್ಸಲರು ಐಇಡಿ ಸ್ಫೋಟಿಸಲು ಯೋಜನೆ ರೂಪಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿದ್ದರಿಂದ ಕೋಬ್ರಾ ಪಡೆ ಅಲ್ಲಿಗೆ ತೆರಳಿತ್ತು. ಈ ಎನ್ಕೌಂಟರ್ನಲ್ಲಿ ಮೂರ್ನಾಲ್ಕು ನಕ್ಸಲರು ಗಾಯಗೊಂಡಿದ್ದರೆ, ಇಬ್ಬರು ಕೋಬ್ರಾ ಯೋಧರು ತೀವ್ರ ಗಾಯಗೊಂಡಿದ್ದರು.