ಶ್ರೀನಗರ: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಇಂದು ಮತ್ತೊಂದು ಅನಾಹುತ ಆಗಿದೆ. ಭಾನುವಾರವಷ್ಟೇ ಇಲ್ಲಿ ಇಬ್ಬರು ಉಗ್ರರು, ರಾಮಮಂದಿರದ ಬಳಿ ಹಲವು ಹಿಂದುಗಳ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಒಂಭತ್ತು ಮಂದಿ ಗಾಯಗೊಂಡಿದ್ದಾರೆ. ಅದರಲ್ಲೂ ಒಂದಷ್ಟು ಜನರ ಪರಿಸ್ಥಿತಿ ಗಂಭೀರವಾಗಿದ್ದು, ರಾಜೌರಿ ಸರ್ಕಾರಿ ಆಸ್ಪತ್ರೆಯಿಂದ ಜಮ್ಮುವಿಗೆ ಏರ್ಲಿಫ್ಟ್ ಮಾಡಲಾಗಿದೆ.
ಈಗ ರಾಜೌರಿಯಲ್ಲಿ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟವಾಗಿದೆ. ಮೊನ್ನೆ ಉಗ್ರದಾಳಿಯಾದ ಸ್ಥಳದ ಸಮೀಪವೇ ಐಇಡಿ ಬ್ಲಾಸ್ಟ್ ಆಗಿದೆ. ಈ ದುರ್ಘಟನೆಯಲ್ಲಿ ಒಂದು ಮಗು ಮೃತಪಟ್ಟಿದ್ದು, ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ. ಹಾಗೇ, ಮತ್ತೂ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಾಧ್ಯಮ ಸಿಬ್ಬಂದಿ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿ ಮುಕೇಶ್ ಸಿಂಗ್ ತಿಳಿಸಿದ್ದಾರೆ.
ಭಾನುವಾರ ಮೂರು ಮನೆಗಳ ಮೇಲೆ ದಾಳಿ ಮಾಡಿದ ಉಗ್ರರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಅವರೇ ಈ ಐಇಡಿ ಇಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ನಾವು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಮುಕೇಶ್ ಸಿಂಗ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಭಾನುವಾರ ದಾಳಿ ಮಾಡಿದ ಉಗ್ರರು ಗುಂಡಿನ ದಾಳಿ ನಡೆಸುವುದಕ್ಕೂ ಪೂರ್ವ ಅಲ್ಲಿದ್ದವರ ಹೆಸರು ಕೇಳಿಕೊಂಡು, ಐಡಿ ಕಾರ್ಡ್ ಚೆಕ್ ಮಾಡಿದ್ದಾರೆ. ಹಿಂದುಗಳು ಎಂಬುದನ್ನು ದೃಢಪಡಿಸಿಕೊಂಡೇ ಗುಂಡು ಹಾರಿಸಿದ್ದಾರೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Rajouri Terror Attack | ಉಗ್ರದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆ; ಇಂದು ರಾಜೌರಿ ಬಂದ್ಗೆ ಕರೆ