ಮುಂಬಯಿ: ನಿಮಗೆ 56 ಇಂಚಿನ ಎದೆ ಇರುವುದು ಹೌದಾದರೆ ಜಾವೇದ್ ಅಖ್ತರ್ ಅವರಂತೆ ಪಾಕಿಸ್ತಾನದ ನೆಲಕ್ಕೆ ಹೋಗಿ ಅಲ್ಲಿನ ಭಯೋತ್ಪಾದನ ಚಟುವಿಕೆಯನ್ನು ಪ್ರಶ್ನಿಸಿ ಎಂಬುದಾಗಿ ಶಿವಸೇನೆ (Shiv Sena) ನಾಯಕ ಉದ್ಧವ್ ಠಾಕ್ರೆ ಬಿಜೆಪಿಗೆ ಸವಾಲು ಎಸೆದಿದ್ದಾರೆ. ತಮ್ಮ ಪಕ್ಷದ ಮುಖವಾಣಿ (ಪತ್ರಿಕೆ) ಸಾಮ್ನಾದ ಸಂಪಾದಕೀಯದಲ್ಲಿ ಅವರು ಬಿಜೆಪಿ ನಾಯಕರ ದೇಶ ಭಕ್ತಿಯ ಹಾಗೂ ಪಾಕ್ ವಿರೋಧಿ ನಿಲುವನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಲಾಹೋರ್ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಲ್ಲಿನ ಸರಕಾರದ ಭಯೋತ್ಪಾದಕ ಪರ ನಿಲುವನ್ನು ಖಂಡಿಸಿದ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರನ್ನು ಹೊಗಳಿದ್ದಾರೆ.
ಗುಸ್ಕೆ ಮಾರೇಂಗೆ (ನುಗ್ಗಿ ಹೊಡಿತೇವೆ), ಸರ್ಜಿಕಲ್ ಸ್ಟ್ರೈಕ್ ಎಂಬ ಪದಗಳನ್ನು ಬಳಸಿಕೊಂಡು ರಾಜಕೀಯ ಮಾಡುವುದು ಧೈರ್ಯವಲ್ಲ. ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಸರಕಾರವನ್ನು ನೀವು ಭಯೋತ್ಪಾದನೆಗೆ ಬೆಂಬಲ ಕೊಡುತ್ತಿದ್ದೀರಿ ಎಂದು ಪ್ರಶ್ನಿಸುವುದು ಧೈರ್ಯ ಎಂಬುದಾಗಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಜಾವೆದ್ ಅಖ್ತರ್ ಅವರದ್ದು ನಿಜವಾದ ದೇಶ ಭಕ್ತಿ ಹಾಗೂ ಧೈರ್ಯ ಎಂಬುದಾಗಿ ಸಂಪಾದಕೀಯದಲ್ಲಿ ಬರೆಯಲಾಗಿದೆ.
ಶಿವಸೇನಾ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ಸಂಜಯ್ ರಾವತ್ ಕೂಡ ಜಾವೇದ್ ಅಖ್ತರ್ ಅವರ ಧೈರ್ಯವನ್ನು ಕೊಂಡಾಡಿದ್ದಾರೆ. ಅಲ್ಲದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕೂಡ ಜಾವೇದ್ ಅಖ್ತರ್ಗೆ ಪ್ರಶಂಸೆ ಸಲ್ಲಿಸಬೇಕು ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ : Uddhav Thackeray: ‘ರಾಮನ ಬಾಣ ರಾವಣನ ಕೈಯಲ್ಲಿರುವುದು ಭೂಷಣ ಅಲ್ಲ’, ಉದ್ಧವ್ ಠಾಕ್ರೆ ವ್ಯಂಗ್ಯ
ಭಾರತದಲ್ಲಿ ಹಿಂದೂ- ಮುಸ್ಲಿಮ್ ಹಾಗೂ ಭಾರತ – ಪಾಕಿಸ್ತಾನ ಎಂಬುದು ರಾಜಕೀಯ ವಿಷಯವಾಗಿದೆ. ಗೋಮಾಂಸದ ಹೆಸರಿನಲ್ಲಿಯೇ ಹಲ್ಲೆಗಳು ನಡೆಯುತ್ತಿವೆ. ಆದರೆ, ಬಿಜೆಪಿಯ ನಾಯಕರು ಗೋಮಾಂಸ ತಿನ್ನುವುದಾಗಿ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದಾರೆ ಎಂಬುದಾಗಿ ಸಂಪಾದಕೀಯದಲ್ಲಿ ಬಿಜೆಪಿಯನ್ನು ಟೀಕೆ ಮಾಡಲಾಗಿದೆ.