ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ನಾಯಕರ ರಾಜೀನಾಮೆ ಪರ್ವ ಆರಂಭವಾಗಿದೆ. ಗುಲಾಂ ನಬಿ ಆಜಾದ್ (Ghulam Nabi Azad) ಅವರು ಪಕ್ಷದಿಂದ ಹೊರಬಂದ ಬಳಿಕ ಕಣಿವೆಯಲ್ಲಿ ಸಾಲು ಸಾಲು ನಾಯಕರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ಇದು ಚುನಾವಣೆಗೂ ಮುನ್ನವೇ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ಉಂಟಾದ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಉತ್ತರ ಜಮ್ಮುವಿನ ಜಿಲ್ಲಾ ಕಾಂಗ್ರೆಸ್ ಸಮಿತಿಯ ೨೦ ಮುಖಂಡರು ರಾಜೀನಾಮೆ ಸಲ್ಲಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ೫೦ ನಾಯಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲಿಗೆ, ಗುಲಾಂ ನಬಿ ಆಜಾದ್ ಅವರು ಪಕ್ಷ ತೊರೆದ ಬಳಿಕ ಇದುವರೆಗೆ ೭೦ ನಾಯಕರು ರಾಜೀನಾಮೆ ನೀಡಿದಂತಾಗಿದೆ.
ಸುಮಾರು ೫ ದಶಕಗಳವರೆಗೆ ಕಾಂಗ್ರೆಸ್‌ನಲ್ಲಿದ್ದ ಗುಲಾಂ ನಬಿ ಆಜಾದ್ ಅವರು ನಾಯಕತ್ವ ಬಿಕ್ಕಟ್ಟಿನಿಂದ ಬೇಸತ್ತು ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಅವರು ನೂತನ ಪಕ್ಷ ಸ್ಥಾಪನೆ ಮಾಡಲಿದ್ದಾರೆ. ಇದೇ ದಿಸೆಯಲ್ಲಿ ಸೆಪ್ಟೆಂಬರ್ ೪ರಂದು ಕಣಿವೆಯಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ. ಇದಕ್ಕೂ ಮುನ್ನವೇ ಅವರ ಆಪ್ತರು ಕಾಂಗ್ರೆಸ್ಸಿಗೆ ವಿದಾಯ ಹೇಳಿದ್ದಾರೆ. ಮುಂದಿನ ವರ್ಷ ಕಣಿವೆಯಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ | ಕಾಂಗ್ರೆಸ್‌ಗೆ ಮತ್ತಷ್ಟು ಹಿನ್ನಡೆ; ಗುಲಾಂ ನಬಿ ಆಜಾದ್ ಬೆನ್ನಲ್ಲೇ ಮತ್ತೂ ಐವರು ಪ್ರಮುಖರ ರಾಜೀನಾಮೆ