ಸುಮಾರು 200 ವರ್ಷಗಳ ಕಾಲ ಬ್ರಿಟಿಷ್ ಆಳ್ವಿಕೆಯ (British rule in india) ವಿರುದ್ಧ ಹೋರಾಡಿ ಭಾರತೀಯರು ಅಂತಿಮವಾಗಿ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯವನ್ನು ಪಡೆದರು. ಬಳಿಕ ದೇಶದ ಮೊದಲ ಪ್ರಧಾನಿಯಾದ (First PM of India) ಜವಾಹರಲಾಲ್ ನೆಹರು (Jawaharlal Nehru) ಅವರು ಆಗಸ್ಟ್ 15 ಅನ್ನು ಭಾರತದ ಸ್ವಾತಂತ್ರ್ಯ ದಿನ ಎಂದು ಘೋಷಿಸಿದರು. ಅಂದಿನಿಂದ ನಿರಂತರ ದೇಶಾದ್ಯಂತ ಈ ದಿನವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಈ ಬಾರಿ 78ನೇ ಸ್ವಾತಂತ್ರ್ಯ ದಿನದ (Independence day 2024) ಆಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಐತಿಹಾಸಿಕ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವದ ಬಳಿಕ ‘ಹರ್ ಘರ್ ತಿರಂಗ’ ಅಭಿಯಾನವು ಆಗಸ್ಟ್ 13ರಿಂದ 15ರವರೆಗೆ ರಾಷ್ಟ್ರವ್ಯಾಪಿ ನಡೆಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸುವ ಗುರಿಯಾಗಿದೆ.
ಭಾರತದ ರಾಷ್ಟ್ರಧ್ವಜದ ಬಗ್ಗೆ ನಾವು ತಿಳಿದಿರಲೇಬೇಕಾದ 10 ಪ್ರಮುಖ ಸಂಗತಿಗಳಿವೆ.
1. 1906ರ ಆಗಸ್ಟ್ 7ರಂದು ಭಾರತದಲ್ಲಿ ಮೊದಲ ರಾಷ್ಟ್ರಧ್ವಜವನ್ನು ಕೋಲ್ಕತ್ತಾದ ಪಾರ್ಸಿ ಬಗಾನ್ ಚೌಕದಲ್ಲಿ ಹಾರಿಸಲಾಯಿತು. ಧ್ವಜವು ಕೆಂಪು, ಹಳದಿ ಮತ್ತು ಹಸಿರು ಬಣ್ಣಗಳನ್ನು ಹೊಂದಿತ್ತು.
2. 1931ರಲ್ಲಿ ತ್ರಿವರ್ಣ ಧ್ವಜವನ್ನು ನಮ್ಮ ರಾಷ್ಟ್ರಧ್ವಜವಾಗಿ ಅಳವಡಿಸಿಕೊಳ್ಳುವ ಮಹತ್ವದ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಧ್ವಜ ಈಗಿನ ಧ್ವಜಕ್ಕಿಂತ ಕೊಂಚ ಭಿನ್ನವಾಗಿತ್ತು. ಇದರಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣವಿದ್ದು, ಮಧ್ಯೆ ಅಶೋಕ ಚಕ್ರದ ಬದಲಿಗೆ ಮಹಾತ್ಮ ಗಾಂಧಿಯವರು ನೂಲುವ ಚಕ್ರವನ್ನು ಹೊಂದಿತ್ತು.
3. ಕೆಲವು ಮಾರ್ಪಾಡುಗಳೊಂದಿಗೆ ಅಶೋಕ ಚಕ್ರವನ್ನು ಅಧಿಕೃತವಾಗಿ 1947ರ ಜುಲೈ 22ರಂದು ಭಾರತೀಯ ತಿರಂಗದಲ್ಲಿ ಅಳವಡಿಸಲಾಯಿತು. ಇದನ್ನು ಮೊದಲು 1947ರ ಆಗಸ್ಟ್ 15ರಂದು ಹಾರಿಸಲಾಯಿತು.
4. ಈ ಹಿಂದೆ ಆಯ್ದ ಸಂದರ್ಭಗಳಲ್ಲಿ ಹೊರತುಪಡಿಸಿ ಭಾರತೀಯ ನಾಗರಿಕರಿಗೆ ರಾಷ್ಟ್ರಧ್ವಜವನ್ನು ಹಾರಿಸಲು ಅವಕಾಶವಿರಲಿಲ್ಲ. ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಅವರ ದಶಕದ ಸುದೀರ್ಘ ಕಾನೂನು ಹೋರಾಟದ ಅನಂತರ ಇದು ಬದಲಾಯಿತು. 2004ರ ಜನವರಿ 23ರಂದು ಈ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು.
5. 2004ರಲ್ಲಿ ಭಾರತದ ಸಂವಿಧಾನದ 19 (1) (ಎ) ವಿಧಿಯ ಅಡಿಯಲ್ಲಿ ಗೌರವ ಮತ್ತು ಘನತೆಯಿಂದ ರಾಷ್ಟ್ರಧ್ವಜವನ್ನು ಮುಕ್ತವಾಗಿ ಹಾರಿಸುವ ಹಕ್ಕು ಭಾರತೀಯ ನಾಗರಿಕನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಘೋಷಿಸಿತು.
6. 1904ರಲ್ಲಿ ಭಾರತದ ಮೊದಲ ರಾಷ್ಟ್ರಧ್ವಜವನ್ನು ಸ್ವಾಮಿ ವಿವೇಕಾನಂದರ ಶಿಷ್ಯೆ ಸಿಸ್ಟರ್ ನಿವೇದಿತಾ ವಿನ್ಯಾಸಗೊಳಿಸಿದ್ದರು.
7. ರವೀಂದ್ರನಾಥ ಠಾಗೋರ್ ಅವರು 1911ರಲ್ಲಿ ‘ಭರೋತೋ ಭಾಗ್ಯೋ ಬಿಧಾತ’ ಹಾಡನ್ನು ರಚಿಸಿದರು. ಅನಂತರ ಅದನ್ನು ‘ಜನ ಗಣ ಮನ ‘ ಎಂದು ಮರುನಾಮಕರಣ ಮಾಡಲಾಯಿತು.
8. ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಇಡೀ ದೇಶದಲ್ಲಿಯೇ ರಾಷ್ಟ್ರ ಧ್ವಜ ತಯಾರಿಸುವ ಪ್ರಮುಖ ಘಟಕವಾಗಿದೆ.
ಇದನ್ನೂ ಓದಿ: Independence Day 2024: ಹೊಗೆ ಬಂಡಿಯಿಂದ ವಂದೇ ಭಾರತ್‌ವರೆಗೆ; ಭಾರತೀಯ ರೈಲ್ವೆಯ ಅದ್ಭುತ ಪಯಣ!
9. ತಿರಂಗ ಅಥವಾ ತ್ರಿವರ್ಣವು ಮೂರು ಬಣ್ಣಗಳನ್ನು ಹೊಂದಿದ್ದು, ಅದರಲ್ಲಿ ಕೇಸರಿ ಅಗ್ರಸ್ಥಾನದಲ್ಲಿದೆ. ಇದು ದೇಶದ ಶಕ್ತಿ ಮತ್ತು ಧೈರ್ಯವನ್ನು ಸೂಚಿಸುತ್ತದೆ. ಮಧ್ಯದಲ್ಲಿ ಬಿಳಿ ಶಾಂತಿ ಮತ್ತು ಸತ್ಯವನ್ನು ಒಳಗೊಂಡಿರುತ್ತದೆ. ಕೆಳಭಾಗದಲ್ಲಿರುವ ಹಸಿರು ಬಣ್ಣವು ಭೂಮಿಯ ಫಲವತ್ತತೆ, ಬೆಳವಣಿಗೆ ಮತ್ತು ಮಂಗಳಕರತೆಯನ್ನು ತೋರಿಸುತ್ತದೆ.
10. ಇನ್ನೂ ಐದು ರಾಷ್ಟ್ರಗಳು ತಮ್ಮ ಸ್ವಾತಂತ್ರ್ಯ ದಿನವನ್ನು ಭಾರತದೊಂದಿಗೆ ಆಚರಿಸುತ್ತವೆ. ಇದರಲ್ಲಿ ರಿಪಬ್ಲಿಕ್ ಆಫ್ ಕಾಂಗೋ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ಲಿಚ್ಟೆನ್‌ಸ್ಟೈನ್ ಮತ್ತು ಬಹರೈನ್ ಸೇರಿದೆ.