Site icon Vistara News

Independence Day 2024: ಮನೆಮನೆಯಲ್ಲೂ ಉಲ್ಲಾಸ, ಉತ್ಸಾಹ ತುಂಬುವ ಸ್ವಾತಂತ್ರ್ಯೋತ್ಸವದ ಹಿನ್ನೋಟ

Independence day 2024

ಭಾರತದಾದ್ಯಂತ 78ನೇ ಸ್ವಾತಂತ್ರ್ಯ ದಿನಕ್ಕೆ (Independence day 2024) ಕ್ಷಣಗಣನೆ ಆರಂಭವಾಗಿದೆ. “ವಿಕಸಿತ ಭಾರತ” (Viksit Bharat) ಸಂದೇಶದೊಂದಿಗೆ ಈ ಬಾರಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಭಾರತದ 100ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಂದರೆ 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಗುರಿಯನ್ನು ಇದು ಪ್ರತಿಬಿಂಬಿಸುತ್ತದೆ.

ಸ್ವಾತಂತ್ರ್ಯ ದಿನಾಚರಣೆಯು ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಲು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ಎಲ್ಲಾ ತ್ಯಾಗಗಳನ್ನು ನೆನಪಿಸುತ್ತದೆ. 1947ರ ಆಗಸ್ಟ್ 15ರಂದು ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಮುಕ್ತಗೊಳಿಸಲಾಯಿತು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಮತ ಆಧಾರಿತ ವ್ಯವಸ್ಥೆಯಾಗಿ ಪರಿವರ್ತಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ದೇಶಾದ್ಯಂತ ಸ್ವಾತಂತ್ರ್ಯ ದಿನವನ್ನು ಹೇಗೆ ಆಚರಿಸಲಾಗುತ್ತದೆ, ಇದರ ಇತಿಹಾಸದ ಕುರಿತ ಹಿನ್ನೋಟ ಇಲ್ಲಿದೆ.

ಇತಿಹಾಸ ಅವಲೋಕನ


ಕಠಿಣ ಹೋರಾಟದ ಬಳಿಕ 1947ರ ಆಗಸ್ಟ್ 15ರಂದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಮೊದಲ ಬಾರಿಗೆ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ಇದು ಭಾರತದಲ್ಲಿ 200 ವರ್ಷಗಳಷ್ಟು ಹಳೆಯದಾದ ಬ್ರಿಟಿಷರ ಆಳ್ವಿಕೆಯನ್ನು ಅಧಿಕೃತವಾಗಿ ಕೊನೆಗೊಳಿಸಿತು.

ಬ್ರಿಟಿಷ್ ಆಳ್ವಿಕೆಯಲ್ಲಿ ಪ್ರತಿಯೊಬ್ಬ ಭಾರತೀಯನನ್ನು ಗುಲಾಮರಂತೆ ಪರಿಗಣಿಸಲಾಗುತ್ತಿತ್ತು. ವಾಕ್ ಸ್ವಾತಂತ್ರ್ಯ ಇರಲಿಲ್ಲ. ಬ್ರಿಟಿಷ್ ಶಿಬಿರಗಳಲ್ಲಿ ಭಾರತೀಯ ಹೋರಾಟಗಾರರನ್ನು ಕ್ರೌರ್ಯದಿಂದ ನಡೆಸಿಕೊಳ್ಳಲಾಗುತ್ತಿತ್ತು. ರೈತರು ಬೆಳೆಗಳನ್ನು ಬೆಳೆಯಲು ಸಾಧ್ಯವಾಗದೆ ಹಸಿವಿನಿಂದ ಬಳಲುತ್ತಿದ್ದರು ಮತ್ತು ಗಣನೀಯ ಭೂ ತೆರಿಗೆಯನ್ನು ಪಾವತಿಸಬೇಕಾಗಿತ್ತು.


ಇಂತಹ ಪರಿಸ್ಥಿತಿಯಲ್ಲಿ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಪ್ರಯತ್ನವಿಲ್ಲದೆ ಭಾರತವು ಸ್ವಾತಂತ್ರ್ಯವನ್ನು ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಮೌಲಾನಾ ಅಬುಲ್ ಕಲಾಂ ಆಜಾದ್, ಸರ್ದಾರ್ ಪಟೇಲ್ ಮತ್ತು ಗೋಪಾಲಬಂಧು ದಾಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕುಲ್ಲಾ ಖಾನ್ ಅವರಂತಹ ಅನೇಕ ನಾಯಕರು ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪುರುಷರು ಮಾತ್ರವಲ್ಲ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಹಲವಾರು ಮಹಿಳೆಯರೂ ಮಹತ್ವದ ಪಾತ್ರ ವಹಿಸಿದ್ದಾರೆ. ಸಾವಿತ್ರಿಬಾಯಿ ಫುಲೆ, ಮಹಾದೇವಿ ವರ್ಮಾ, ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್, ರಾಣಿ ಲಕ್ಷ್ಮೀಬಾಯಿ ಮತ್ತು ಬಸಂತಿ ದೇವಿ ಸೇರಿದಂತೆ ಇನ್ನು ಅನೇಕರು ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟಿದ್ದರು.

‘ಒಳ್ಳೆಯ’ ಬ್ರಿಟಿಷ್ ಆಡಳಿತಗಾರರೂ ಇದ್ದರು!

ಎಲ್ಲಾ ಬ್ರಿಟಿಷರು ಕೆಟ್ಟವರಾಗಿರಲಿಲ್ಲ. ಕೆಲವರು ಅನೇಕ ಸುಧಾರಣೆಗಳನ್ನು ತಂದಿದ್ದಾರೆ. ಇವರಲ್ಲಿ ವಾರೆನ್ ಹೇಸ್ಟಿಂಗ್ಸ್ ಅವರು ನ್ಯಾಯಾಲಯದ ಸುಧಾರಣೆಗಳನ್ನು ಅಭಿವೃದ್ಧಿಪಡಿಸಿದರು. ಭಾರತೀಯ ರಾಷ್ಟ್ರೀಯತೆಯನ್ನು ಬೆಂಬಲಿಸಿದ ಫ್ರೆಡಾ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭಿಸಿದ ಅಲನ್ ಆಕ್ಟೇವಿಯನ್ ಹ್ಯೂಮ್ ಇವರಲ್ಲಿ ಪ್ರಮುಖರು.

ಯಾಕೆ ಸ್ವಾತಂತ್ರ್ಯ ದಿನಾಚರಣೆ?

ಭಾರತವು 200 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಸ್ವಾತಂತ್ರ್ಯವನ್ನು ಸಾಧಿಸಿತು. 1947ರ ಆಗಸ್ಟ್ 15ರಂದು ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಗಳಿಸಿತು. ಅದಕ್ಕಾಗಿಯೇ ಭಾರತ ಅಥವಾ ವಿದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಭಾರತೀಯ ಪ್ರಜೆಯ ಹೃದಯದಲ್ಲಿ ಈ ದಿನವು ಪ್ರಾಮುಖ್ಯತೆಯನ್ನು ಪಡೆದಿದೆ. ಈ ದಿನ ಪ್ರತಿಯೊಬ್ಬ ಭಾರತೀಯನೊಳಗೆ ದೇಶಭಕ್ತಿಯನ್ನು ಉದ್ದೀಪಿಸುತ್ತದೆ. ಪ್ರಸ್ತುತ ಪೀಳಿಗೆಗೆ ತಮ್ಮ ಸ್ವಾತಂತ್ರ್ಯದ ಹಿಂದಿರುವ ವ್ಯಕ್ತಿಗಳ ಹೋರಾಟಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸಿಕೊಳ್ಳುವಂತೆ ಮಾಡುತ್ತದೆ.


ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಏನು?

ಬ್ರಿಟಿಷರ ಆಳ್ವಿಕೆಯಿಂದ ನಾವು ಮುಕ್ತವಾದ ಬಳಿಕ ಸ್ವಾತಂತ್ರ್ಯ ದಿನವು ದೇಶಕ್ಕೆ ಸಕಾರಾತ್ಮಕ ಐತಿಹಾಸಿಕ ಘಟನೆಯ ಸಾಕ್ಷಿಯಾಗಿದೆ. ಇದು ದೇಶದಾದ್ಯಂತ ವಿವಿಧ ಜಾತಿ. ಧರ್ಮ, ಜನಾಂಗದ ವ್ಯಕ್ತಿಗಳನ್ನು ಒಂದುಗೂಡಿಸುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ. ಭಾರತದ ಮೂಲಭೂತ ತತ್ವ ಮತ್ತು ಶಕ್ತಿಯನ್ನು ಅರ್ಥಮಾಡಿಸುತ್ತದೆ. ಭಾರತವು ಈ ಭೂಮಿಯ ಮೇಲಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಸ್ವಾತಂತ್ರ್ಯ ದಿನಾಚರಣೆಯು ಪ್ರತಿಯೊಬ್ಬ ಭಾರತೀಯ ಪ್ರಜೆಯ ಜೀವನದಲ್ಲಿ ಒಂದು ಪ್ರಮುಖ ದಿನವಾಗಿದೆ. ಇದು ನಮ್ಮ ಮಾತೃಭೂಮಿಯನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಲು ತಮ್ಮ ಜೀವನವನ್ನು ತ್ಯಾಗ ಮಾಡಿದ ಮತ್ತು ಹೋರಾಡಿದ ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುತ್ತದೆ.


ಸ್ವಾತಂತ್ರ್ಯ ದಿನದ ಚಟುವಟಿಕೆಗಳು ಏನೇನು?

ತ್ರಿವರ್ಣ ಧ್ವಜಾರೋಹಣ ಸ್ವಾತಂತ್ರ್ಯ ದಿನಾಚರಣೆಯ ಕೇಂದ್ರ ಬಿಂದು. ದೆಹಲಿಯ ಕೆಂಪು ಕೋಟೆಯ ಮೇಲೆ ದೇಶದ ಪ್ರಧಾನಮಂತ್ರಿಯವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಕಳೆದ ವರ್ಷದ ಸರ್ಕಾರದ ಸಾಧನೆಗಳನ್ನು ಕೇಂದ್ರೀಕರಿಸುವ ಭಾಷಣ ಮಾಡುತ್ತಾರೆ.

ಇದನ್ನೂ ಓದಿ: Hindus in Bangla: ಬಾಂಗ್ಲಾದಲ್ಲಿ ಹಿಂದೂ ಆಗಿರುವುದೇ ಅಪರಾಧ; ಕರಾಳ ದಿನ ನೆನಪಿಸಿಕೊಳ್ಳುವ ವಲಸಿಗರು; ವಿಡಿಯೊಗಳಿವೆ

ಇನ್ನೂ ಗಮನಹರಿಸಬೇಕಾದ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಮತ್ತಷ್ಟು ಅಭಿವೃದ್ಧಿ ಪ್ರಯತ್ನಗಳಿಗೆ ಕರೆ ನೀಡುತ್ತಾರೆ. ಈ ಸಂದರ್ಭದಲ್ಲಿ ವಿದೇಶಿ ಗಣ್ಯರನ್ನು ಸಹ ಆಹ್ವಾನಿಸಲಾಗುತ್ತದೆ.
ಇದೇ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ರಾಷ್ಟ್ರಧ್ವಜ ಹಾರಿಸುತ್ತಾರೆ. ಶಾಲೆ, ಕಾಲೇಜು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲೂ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಗುತ್ತದೆ.

Exit mobile version