Site icon Vistara News

Independence day 2024: ಮೊದಲ ಸ್ವಾತಂತ್ರ್ಯೋತ್ಸವದಲ್ಲಿ ಗಾಂಧೀಜಿಯೇ ಭಾಗವಹಿಸಲಿಲ್ಲ! ಇಲ್ಲಿವೆ ಸ್ವಾತಂತ್ರ್ಯ ದಿನಾಚರಣೆಯ ಕುತೂಹಲಕರ ಸಂಗತಿಗಳು

Independence Day 2024

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ (World’s largest democracy country) ಭಾರತದಲ್ಲಿ ಸ್ವಾತಂತ್ರ್ಯ ದಿನವು (Independence Day of India) ರಾಷ್ಟ್ರದ ಎಲ್ಲಾ ರಾಜ್ಯಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ ಹಬ್ಬವಾಗಿದೆ (National festival). ಆಗಸ್ಟ್ 15ರಂದು ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನವನ್ನು (Independence day 2024) ಆಚರಿಸಲು ಸಿದ್ಧತೆ ನಡೆಸುತ್ತಿರುವಾಗ ಸ್ವಾತಂತ್ರ್ಯ ದಿನದ ಕುರಿತು ನಾವು ತಿಳಿದುಕೊಳ್ಳಬೇಕಿರುವ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.


ಮೊದಲ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಹಾತ್ಮ ಗಾಂಧಿ ಭಾಗವಹಿಸಿಲ್ಲ!

ದೆಹಲಿಯಲ್ಲಿ ನಡೆದ ಮೊದಲ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಮಹಾತ್ಮಾ ಗಾಂಧಿಗೆ ಸಾಧ್ಯವಾಗಲಿಲ್ಲ. 1947ರ ಆಗಸ್ಟ್ 15ರಂದು ದೇಶವು ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯವನ್ನು ಆಚರಿಸಿದಾಗ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಬಂಗಾಳದಲ್ಲಿ ನಡೆಯುತ್ತಿರುವ ಹಿಂದೂ-ಮುಸ್ಲಿಂ ಗಲಭೆಗಳನ್ನು ಕೊನೆಗೊಳಿಸಲು ಉಪವಾಸ ಆಚರಣೆಯಲ್ಲಿ ತೊಡಗಿದ್ದರು.


ತ್ರಿವರ್ಣ ಧ್ವಜದ ಮೂಲ

ಭಾರತದ ರಾಷ್ಟ್ರಧ್ವಜವಾಗಿರುವ ತ್ರಿವರ್ಣ ಧ್ವಜವು ಸ್ವರಾಜ್ ಧ್ವಜವನ್ನು ಆಧರಿಸಿದೆ. ಇದನ್ನು ಮಚಲಿಪಟ್ಟಣಂನ ರೈತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಪಿಂಗಲಿ ವೆಂಕಯ್ಯ ಅವರು ರೂಪಿಸಿದ್ದರು.


ರಾಷ್ಟ್ರಗೀತೆ ಅಂಗೀಕಾರ

ಭಾರತ ಸ್ವಾತಂತ್ರ್ಯ ಗಳಿಸಿದ ಮೂರು ವರ್ಷಗಳ ಅನಂತರ ಭಾರತದ ರಾಷ್ಟ್ರಗೀತೆಯನ್ನು ಅಂಗೀಕರಿಸಲಾಯಿತು. ಸ್ವಾತಂತ್ರ್ಯದ ಸಮಯದಲ್ಲಿ ಭಾರತವು ಅಧಿಕೃತ ರಾಷ್ಟ್ರಗೀತೆಯನ್ನು ಹೊಂದಿರಲಿಲ್ಲ. ಜನ ಗಣ ಮನವನ್ನು 1911ರಲ್ಲಿ ಬರೆಯಲಾಯಿತು. ಆದರೂ ಇದನ್ನು ಅಧಿಕೃತವಾಗಿ ಅಂಗೀಕರಿಸಿದ್ದು 1950ರ ಜನವರಿ 24ರಂದು.


ಆಗಸ್ಟ್ 15 ಏಕೆ?

ಭಾರತದ ಕೊನೆಯ ಬ್ರಿಟಿಷ್ ವೈಸರಾಯ್ ಮತ್ತು ದೇಶದ ಮೊದಲ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ ಅವರು ಆಗಸ್ಟ್ 15 ಅನ್ನು ಭಾರತದ ಸ್ವಾತಂತ್ರ್ಯವನ್ನು ಘೋಷಿಸಲು ಆಯ್ಕೆ ಮಾಡಿದರು. 1948ರ ಜೂನ್ ನೊಳಗೆ ಭಾರತೀಯರಿಗೆ ಅಧಿಕಾರವನ್ನು ವರ್ಗಾಯಿಸಲು ಬ್ರಿಟಿಷ್ ಪಾರ್ಲಿಮೆಂಟ್ ಅವರಿಗೆ ಅಧಿಕಾರವನ್ನು ನೀಡಿತು. ಆದರೂ ರಕ್ತಪಾತ ಮತ್ತು ಗಲಭೆಗಳನ್ನು ತಪ್ಪಿಸಲು ಅವರು ಅದನ್ನು 1947ರ ಆಗಸ್ಟ್ 15ಕ್ಕೆ ಮುಂದೂಡಿದರು. ಮಿತ್ರ ಪಡೆಗಳ ದಾಳಿಗೆ ಮಣಿದು ಜಪಾನ್ ಶರಣಾದ ಎರಡನೇ ವಾರ್ಷಿಕೋತ್ಸವದ ನೆನಪಿಗಾಗಿ ಅವರು ಈ ದಿನವನ್ನು ಆರಿಸಿಕೊಂಡರು ಎಂದು ಹೇಳಲಾಗುತ್ತದೆ.


ಪಾಕಿಸ್ತಾನಕ್ಕೆ ಸ್ವಾತಂತ್ರ್ಯ

ಕೊನೆಯ ಬ್ರಿಟಿಷ್ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಪಾಕಿಸ್ತಾನವು ಆಗಸ್ಟ್ 14ರಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಿತ್ತು. ಅವಿಭಜಿತ ಭಾರತದ ಕೊನೆಯ ವೈಸರಾಯ್ ಆಗಿ ಮೌಂಟ್ ಬ್ಯಾಟನ್ ಎರಡೂ ದೇಶಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಇದನ್ನೂ ಓದಿ: New Railway Projects: 24,657 ಕೋಟಿ ರೂ. ಮೊತ್ತದ 8 ರೈಲು ಯೋಜನೆಗಳಿಗೆ ಅನುಮೋದನೆ

ಐದು ದೇಶಗಳಿಗೆ ಸ್ವಾತಂತ್ರ್ಯ

ವಿಭಿನ್ನ ವರ್ಷಗಳಲ್ಲಿ ಸ್ವಾತಂತ್ರ್ಯವನ್ನು ಪಡೆದಿರುವ ಬಹರೈನ್ , ಉತ್ತರ ಕೊರಿಯಾ, ದಕ್ಷಿಣ ಕೊರಿಯಾ, ಕಾಂಗೋ ಗಣರಾಜ್ಯ ಮತ್ತು ಲಿಚ್ಟೆನ್‌ಸ್ಟೈನ್ ಈ ಐದು ಇತರ ದೇಶಗಳು ಆಗಸ್ಟ್ 15ರಂದು ಭಾರತದೊಂದಿಗೆ ತಮ್ಮ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತವೆ.

Exit mobile version