Site icon Vistara News

Independence Day 2024: ಈ ಬಾರಿ ಆಚರಿಸುತ್ತಿರುವುದು ಎಷ್ಟನೇ ಸ್ವಾತಂತ್ರ್ಯೋತ್ಸವ? 77 or 78?

Independence Day 2024

ದೇಶ ಈಗ ಸ್ವಾತಂತ್ರ್ಯ ದಿನಾಚರಣೆಯ (Independence Day 2024) ಸಂಭ್ರಮದಲ್ಲಿದೆ. ಈ ನಡುವೆ ಈ ಬಾರಿಯದು 77ನೇ ಅಥವಾ 78ನೇ ಸ್ವಾತಂತ್ರ್ಯ ದಿನಾಚರಣೆಯೇ ಎನ್ನುವ ಗೊಂದಲ ಹಲವರನ್ನು ಕಾಡುತ್ತಿದೆ. ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆಯ (Independence day celebration) ಬಗ್ಗೆ ಇಂತಹ ಒಂದು ಗೊಂದಲ ಹಲವರನ್ನು ಕಾಡುವುದು ಸಹಜ. ಯಾಕೆ ಇದು ಎನ್ನುವುದಕ್ಕೆ ಉತ್ತರ ಇಲ್ಲಿದೆ.

1947ರ ಆಗಸ್ಟ್ 15ರಂದು ಭಾರತವನ್ನು ಬ್ರಿಟಿಷ್ ವಸಾಹತುಶಾಹಿಯಿಂದ ಭಾರತವನ್ನು ಸ್ವತಂತ್ರವೆಂದು ಘೋಷಿಸಲಾಯಿತು. ದೇಶದ ನಿಯಂತ್ರಣವನ್ನು ಭಾರತದ ನಾಯಕರಿಗೆ ಹಸ್ತಾಂತರಿಸಲಾಯಿತು. ಬಳಿಕ ದೇಶಾದ್ಯಂತ ಪ್ರತೀ ವರ್ಷ ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಶಾಲೆ, ಕಚೇರಿಗಳು, ಸ್ಥಳೀಯ ಸಂಘ ಸಂಸ್ಥೆಗಳು ಈಗ ಸ್ವಾತಂತ್ರ್ಯ ದಿನವನ್ನು ಆಚರಿಸಲು ತಯಾರಿ ನಡೆಸುತ್ತಿದೆ. ದೇಶಭಕ್ತಿಯ ಉತ್ಸಾಹವು ಎಲ್ಲರಲ್ಲೂ ಮೂಡುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಕೊಡುಗೆಗಳನ್ನು ಗುರುತಿಸಿ, ಗೌರವಿಸುವ ದಿನಕ್ಕಾಗಿ ಎಲ್ಲರೂ ಕಾತರರಾಗಿದ್ದಾರೆ. ಈ ದಿನ ತ್ರಿವರ್ಣವನ್ನು ಹಾರಿಸುವುದು, ದೇಶಭಕ್ತಿ ಗೀತೆಗಳ ಗಾಯನ ಮತ್ತು ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಗುರುತಿಸಲಾಗುತ್ತದೆ.

ಪ್ರತಿ ಬಾರಿಯೂ ಇದು ಎಷ್ಟನೇ ಸ್ವಾತಂತ್ರ್ಯೋತ್ಸವ ಎಂಬ ಪ್ರಶ್ನೆ ಬಂದೇ ಬರುತ್ತದೆ. ಸಾಮಾನ್ಯವಾಗಿ ಒಂದು ವರ್ಷದ ಬಳಿಕ ವಾರ್ಷಿಕೋತ್ಸವ ಆಚರಿಸಲಾಗುತ್ತದೆ. ಹಾಗಾಗಿ ಇದು 77ನೇ ಸ್ವಾತಂತ್ರ್ಯೋತ್ಸವ ಎಂದು ವಾದಿಸುವವರೂ ಇದ್ದಾರೆ. ಆದರೆ ಸ್ವಾತಂತ್ರ್ಯೋತ್ಸವ ವಿಚಾರದಲ್ಲಿ ಹೀಗಲ್ಲ. ಈ ವರ್ಷ ಭಾರತವು ತನ್ನ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಯಾಕೆಂದರೆ 1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಆ ದಿನವೇ ಮೊದಲ ಸ್ವಾತಂತ್ರ್ಯೋತ್ಸವ ಆಚರಿಸಲಾಗಿತ್ತು. ಹಾಗಾಗಿ ಈ ಬಾರಿಯದು 78ನೇ ಸ್ವಾತಂತ್ರ್ಯೋತ್ಸವ. ಇದರ ಜತೆಗೆ ಬೇಕಿದ್ದರೆ ಈ ಬಾರಿಯ ಸ್ವಾತಂತ್ರ್ಯದ ದಿನವನ್ನು 77ನೇ ಸ್ವಾತಂತ್ರ್ಯ ʼವಾರ್ಷಿಕೋತ್ಸವʼ ಎಂದು ಕರೆಯಬಹುದು!


ಸ್ವಾತಂತ್ರ್ಯ ದಿನಾಚರಣೆ 2024ರ ಆಚರಣೆಗಳು ಆಗಸ್ಟ್ 9ರಂದೇ ‘ಹರ್ ಘರ್ ತಿರಂಗ’ ಅಭಿಯಾನದ ಮೂಲಕ ಪ್ರಾರಂಭವಾಗಿದೆ. ಹರ್ ಘರ್ ತಿರಂಗದ ಮೂರನೇ ಸರಣಿಯು 78ನೇ ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್ 15ರವರೆಗೆ ಆಚರಿಸಲಾಗುತ್ತದೆ.


ಪ್ರತಿಯೊಬ್ಬ ಭಾರತೀಯನು ರಾಷ್ಟ್ರಧ್ವಜವನ್ನು ಹಾರಿಸುವಂತೆ ಪ್ರೋತ್ಸಾಹಿಸುವ ಮೂಲಕ ನಾಗರಿಕರಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯ ಮನೋಭಾವವನ್ನು ಮೂಡಿಸುವ ಉದ್ದೇಶವನ್ನು ಇದು ಹೊಂದಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಹೇಳಿದರು. ನಾಗರಿಕರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಮತ್ತು ಧ್ವಜದೊಂದಿಗೆ ಸೆಲ್ಫಿ ಕ್ಲಿಕ್ ಮಾಡಿ ಅದನ್ನು ಹೆಚ್ ಜಿ ಟಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಸಚಿವರು ತಿಳಿಸಿದ್ದಾರೆ.

‘ಹರ್ ಘರ್ ತಿರಂಗ’ ಅಭಿಯಾನವನ್ನು ಸ್ಮರಣೀಯ ಜನಾಂದೋಲನವನ್ನಾಗಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕೂಡ ಜನರಿಗೆ ಕರೆ ನೀಡಿದ್ದಾರೆ. ಅವರು ತಮ್ಮ ಪ್ರೊಫೈಲ್ ಚಿತ್ರವನ್ನು ರಾಷ್ಟ್ರಧ್ವಜದೊಂದಿಗೆ ಬದಲಾಯಿಸಿದ್ದಾರೆ. ಎಲ್ಲರೂ ಅದೇ ರೀತಿ ಮಾಡುವಂತೆ ಹೇಳಿದ್ದಾರೆ.


ಇದನ್ನೂ ಓದಿ: Independence Day 2024: ಮನೆಮನೆಯಲ್ಲೂ ಉಲ್ಲಾಸ, ಉತ್ಸಾಹ ತುಂಬುವ ಸ್ವಾತಂತ್ರ್ಯೋತ್ಸವದ ಹಿನ್ನೋಟ

ಈ ವರ್ಷ ರಕ್ಷಣಾ ಸಚಿವಾಲಯವು ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದ ಅಡಿಯಲ್ಲಿ ರಾಷ್ಟ್ರವ್ಯಾಪಿ 15 ಲಕ್ಷ ಮರಗಳನ್ನು ನೆಡುವ ಅಭಿಯಾನವನ್ನು ಪ್ರಾರಂಭಿಸಿದೆ. ಜೂನ್ 5ರಂದು ವಿಶ್ವ ಪರಿಸರ ದಿನದಂದು ಪ್ರಧಾನಿ ನರೇಂದ್ರ ಮೋದಿ ಅಭಿಯಾನಕ್ಕೆ ಚಾಲನೆ ನೀಡಿದ್ದರು. “ಪ್ಲಾಂಟೇಶನ್ ಡ್ರೈವ್ ‘ಏಕ್ ಪೇಡ್ ಮಾ ಕೆ ನಾಮ್’ – ʼತಾಯಿಯ ಹೆಸರಿನಲ್ಲಿ ಒಂದು ಮರʼ ಅಭಿಯಾನವನ್ನು ಡಿಆರ್‌ಡಿಒ, ರಕ್ಷಣಾ ಪಿಎಸ್‌ಯುಗಳು, ಸಿಜಿಡಿಎ, ಎನ್‌ಸಿಸಿ, ಸೈನಿಕ್‌ನಂತಹ ಸಂಬಂಧಿತ ಸಂಸ್ಥೆಗಳ ಮೂಲಕ ನಡೆಸಲಾಗುವುದು ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

Exit mobile version