Site icon Vistara News

Independence day 2024: ಆಗಸ್ಟ್ 15ರಂದು ಪ್ರಧಾನಿ ಮೋದಿ ಭಾಷಣವನ್ನು ಎಷ್ಟು ಹೊತ್ತಿಗೆ, ಎಲ್ಲಿ ವೀಕ್ಷಿಸಬಹುದು?

Independence day 2024

ಭಾರತದಾದ್ಯಂತ ಈ ಬಾರಿ 78ನೇ ಸ್ವಾತಂತ್ರ್ಯ ದಿನವನ್ನು (Independence day 2024) ಆಚರಿಸಲು ಸಿದ್ಧತೆಗಳು ಜೋರಾಗಿವೆ. ಈ ದಿನ ಎಲ್ಲರ ಚಿತ್ತ ಕೆಂಪುಕೋಟೆಯ (delhi Red Fort) ಮೇಲಿರುತ್ತದೆ. ಯಾಕೆಂದರೆ ಇಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಧ್ವಜಾರೋಹಣ ನಡೆಸಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಆಗಸ್ಟ್‌ 15ರಂದು ಬೆಳಗ್ಗೆ 7.30ಕ್ಕೆ ರಾಷ್ಟ್ರಧ್ವಜವನ್ನು ಹಾರಿಸಿ, ಆ ಬಳಿಕ ದೇಶವನ್ನು ಉದ್ದೇಶಿಸಿ ಸತತ 11ನೇ ಸ್ವಾತಂತ್ರ್ಯ ದಿನದ ಭಾಷಣ ಮಾಡಲಿದ್ದಾರೆ.


ಸ್ವಾತಂತ್ರ್ಯ ದಿನದ ನೇರ ಪ್ರಸಾರ ಎಲ್ಲಿ?

ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ನೇರ ಪ್ರಸಾರ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗುತ್ತದೆ. ವಿಸ್ತಾರ ನ್ಯೂಸ್‌ ಟಿವಿ ಮತ್ತು ವಿಸ್ತಾರ ನ್ಯೂಸ್‌ ಯುಟ್ಯೂಬ್‌ ಚಾನೆಲ್‌ ಮೂಲಕವೂ ಮೋದಿಯವರ ಭಾಷಣ ನೇರ ಪ್ರಸಾರ ನೋಡಬಹುದು.

ಅಲ್ಲದೇ ಕಾರ್ಯಕ್ರಮವನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಯೂಟ್ಯೂಬ್ ಚಾನೆಲ್‌ ಜೊತೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಎಕ್ಸ್‌ನಲ್ಲಿ @PIB_India ಮತ್ತು PMO ಟ್ವಿಟರ್ ಹ್ಯಾಂಡಲ್ ಮೂಲಕವೂ ಪ್ರಸಾರ ಮಾಡಲಾಗುತ್ತದೆ.


ಈ ಬಾರಿಯ ಥೀಮ್ ಏನು?

ಈ ಬಾರಿ ಸ್ವಾತಂತ್ರ್ಯ ದಿನದ ಥೀಮ್ “ವಿಕಸಿತ ಭಾರತ”. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ಸರ್ಕಾರದ ದೃಷ್ಟಿಕೋನವನ್ನು ಇದು ಸಾರುತ್ತದೆ. ಈ ವಿಷಯವು ಶಿಕ್ಷಣ, ಆರೋಗ್ಯ ರಕ್ಷಣೆ, ಮೂಲಸೌಕರ್ಯ ಮತ್ತು ತಂತ್ರಜ್ಞಾನದಲ್ಲಿ ಸಮಗ್ರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ. ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಕ ಭಾರತದ ಜಾಗತಿಕ ಸ್ಥಾನಮಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.


ಆಗಸ್ಟ್ 15ರಂದು ಪ್ರಧಾನಿಯವರು ರಾಷ್ಟ್ರವನ್ನು ಉದ್ದೇಶಿಸಿ ಹಿಂದಿನ ಸಾಧನೆಗಳ ಕುರಿತು ವಿವರಿಸಿ, ಭವಿಷ್ಯದ ಗುರಿ ಮತ್ತು ನೀತಿಗಳನ್ನು ವಿವರಿಸುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುತ್ತಾರೆ. ಪ್ರಧಾನಿ ಭಾಷಣದ ಅನಂತರ ಭಾರತದ ಮಿಲಿಟರಿ ಸಾಮರ್ಥ್ಯ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸುವ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ ವೇಳೆ ಪ್ರಮುಖ ಕಟ್ಟಡಗಳು, ಸ್ಮಾರಕಗಳಿಗೆ ದೀಪಾಲಂಕಾರ ಮಾಡಲಾಗಿದ್ದು, ಹಬ್ಬದ ವಾತಾವರಣವನ್ನು ಹೆಚ್ಚಿಸಲಿದೆ.


ʼಹರ್ ಘರ್ ತಿರಂಗʼ ಅಭಿಯಾನ

‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಆಗಸ್ಟ್ 9ರಿಂದ 15ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ಉಪಕ್ರಮವು ಪ್ರತಿಯೊಬ್ಬ ಭಾರತೀಯನನ್ನು ರಾಷ್ಟ್ರಧ್ವಜವನ್ನು ಹಾರಿಸಲು ಪ್ರೋತ್ಸಾಹಿಸುವ ಮೂಲಕ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಅಭಿಯಾನದ ಮಹತ್ವವನ್ನು ತಿಳಿಸಿದ್ದು, ಪ್ರತಿಯೊಬ್ಬ ಭಾರತೀಯನೂ ರಾಷ್ಟ್ರಧ್ವಜವನ್ನು ಹಾರಿಸಲು ಪ್ರೋತ್ಸಾಹಿಸುವ ಮೂಲಕ ನಾಗರಿಕರಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯ ಮನೋಭಾವವನ್ನು ಹುಟ್ಟುಹಾಕುವ ಉದ್ದೇಶವನ್ನು ಈ ಉಪಕ್ರಮವು ಹೊಂದಿದೆ ಎಂದು ಹೇಳಿದ್ದಾರೆ.

Independence day 2024


“ಏಕ್ ಪೇಡ್ ಮಾ ಕೆ ನಾಮ್” ಅಭಿಯಾನ

ಸ್ವಾತಂತ್ರ್ಯ ದಿನಾಚರಣೆಯ ಜೊತೆಗೆ, ರಕ್ಷಣಾ ಸಚಿವಾಲಯವು ‘ಏಕ್ ಪೇಡ್ ಮಾ ಕೆ ನಾಮ್’ ತಾಯಿಯ ಹೆಸರಲ್ಲಿ ಒಂದು ಮರ ಅಭಿಯಾನದ ಅಡಿಯಲ್ಲಿ ರಾಷ್ಟ್ರವ್ಯಾಪಿ ಮರ ನೆಡುವ ಅಭಿಯಾನವನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: Independence Day 2024: ಸ್ವಾತಂತ್ರ್ಯ ದಿನಾಚರಣೆಗೆ ಮಾಣಿಕ್‌ ಷಾ ಮೈದಾನ ಸಿದ್ಧ; ಪಾರ್ಕಿಂಗ್‌ ಮತ್ತಿತರ ವಿವರ ಇಲ್ಲಿದೆ

ಜೂನ್ 5ರಂದು ವಿಶ್ವ ಪರಿಸರ ದಿನದಂದು ಪ್ರಧಾನಿ ಮೋದಿ ಅವರು ಪ್ರಾರಂಭಿಸಿರುವ ಈ ಅಭಿಯಾನವು ಭಾರತದಾದ್ಯಂತ 1.5 ಕೋಟಿ ಮರಗಳನ್ನು ನೆಡುವ ಗುರಿಯನ್ನು ಹೊಂದಿದೆ. ಈ ಪ್ರಯತ್ನವು ಮೂರು ಸಶಸ್ತ್ರ ಸೇವೆಗಳು ಮತ್ತು ಡಿಆರ್‌ಡಿಒ, ರಕ್ಷಣಾ ಪಿಎಸ್‌ಯುಗಳು, ಸಿಜಿಡಿಎ, ಎನ್‌ಸಿಸಿ, ಸೈನಿಕ ಶಾಲೆಗಳು ಮತ್ತು ಆರ್ಡನೆನ್ಸ್ ಫ್ಯಾಕ್ಟರಿಗಳು ಸೇರಿದಂತೆ ವಿವಿಧ ಸಂಬಂಧಿತ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುತ್ತಿದೆ.

Exit mobile version