Site icon Vistara News

Independence day speech in Kannada: ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧ ಭಾಷಣ!

Independence day speech in Kannada

ಭಾರತ ಸ್ವಾತಂತ್ರ್ಯ ಪಡೆದ ದಿನವನ್ನು (Independence day speech in Kannada) ಆಗಸ್ಟ್ 15ರಂದು (independence day 2024) ದೇಶಾದ್ಯಂತ ಆಚರಿಸಲು ಸಿದ್ಧತೆ ನಡೆಯುತ್ತಿದೆ. ಈ ದಿನವು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು, ವಸಾಹತುಶಾಹಿ ಆಳ್ವಿಕೆಯಿಂದ ದೇಶದ ವಿಮೋಚನೆಯನ್ನು ಗುರುತಿಸುತ್ತದೆ. ಈ ದಿನ ನಾವು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದವರನ್ನು ಮತ್ತು ದೇಶಕ್ಕೆ ದಣಿವರಿಯಿಲ್ಲದೆ ಸೇವೆ ಸಲ್ಲಿಸಿದವರನ್ನು ಗೌರವಿಸುತ್ತೇವೆ. ಅವರ ಶೌರ್ಯ ಮತ್ತು ಸಮರ್ಪಣೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಲಿ ಎಂದು ಆಶಿಸುತ್ತೇವೆ.

78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ನಾವು ಸಜ್ಜಾಗುತ್ತಿರುವಾಗ ಈ ದಿನದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ನಮ್ಮ ಪೂರ್ವಜರು ಮಾಡಿದ ತ್ಯಾಗವನ್ನು ನೆನಪಿಸಿಕೊಳ್ಳಬೇಕು. ಇದಕ್ಕಾಗಿ ವಿದ್ಯಾರ್ಥಿಗಳಿಗೆ ದೀರ್ಘ ಮತ್ತು ಸಣ್ಣ ಭಾಷಣದ ಸಿದ್ಧ ಪಾಠಗಳು ಇಲ್ಲಿವೆ.


ಸ್ವಾತಂತ್ರ್ಯೋತ್ಸವದ ದಿನ ವಿದ್ಯಾರ್ಥಿಗಳು ಮಾಡಬಹುದಾದ ದೀರ್ಘ ಭಾಷಣ:

ಶುಭೋದಯ ಗುರುಗಳೇ, ಗಣ್ಯ ಅತಿಥಿಗಳೇ ಹಾಗೂ ನನ್ನ ಎಲ್ಲಾ ಆತ್ಮೀಯ ಸಹಪಾಠಿಗಳೇ…

ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವುದು ನಮಗೆಲ್ಲ ಸಂಭ್ರಮದ ಕ್ಷಣ. ದೇಶವು ತನ್ನ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಗಳಿಸಿದ ದಿನವನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತೇವೆ.

ಇಂದು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಒಂದು ಮಹತ್ವದ ಸಂದರ್ಭವನ್ನು ಆಚರಿಸಲು ನಾವೆಲ್ಲರೂ ಒಟ್ಟುಗೂಡಿದ್ದೇವೆ. ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯ ಅನೇಕ ವರ್ಷಗಳ ಬಳಿಕ ಭಾರತವು ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ಅಂದಿನಿಂದ ನಮ್ಮ ದೇಶವು ಕೈಗೊಂಡ ಪ್ರಯಾಣಕ್ಕೆ ಕೃತಜ್ಞತೆಯನ್ನು ಸಲ್ಲಿಸಬೇಕಿದೆ. ಇದು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಸ್ವರಾಜ್ಯವನ್ನು ಸಾಧಿಸುವ ರಾಷ್ಟ್ರದ ಸಂಕಲ್ಪವನ್ನು ಪ್ರತಿನಿಧಿಸುತ್ತದೆ.

ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಸುಭಾಸ್ ಚಂದ್ರ ಬೋಸ್ ಅವರಂತಹ ಪ್ರಮುಖ ನಾಯಕರು ನಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಸಹಕಾರ ಚಳವಳಿ, ಉಪ್ಪಿನ ಯಾತ್ರೆ, ಭಾರತ ಬಿಟ್ಟು ತೊಲಗಿ ಚಳವಳಿಗಳು ನಮ್ಮ ಸ್ವಾತಂತ್ರ್ಯಕ್ಕೆ ದಾರಿಮಾಡಿಕೊಟ್ಟ ಕೆಲವು ಮೈಲುಗಲ್ಲುಗಳು.

ಸ್ವಾತಂತ್ರ್ಯ ದಿನವು ಕೇವಲ ರಾಷ್ಟ್ರೀಯ ರಜಾ ದಿನವಲ್ಲ. ಇದು ಪ್ರಜಾಪ್ರಭುತ್ವ, ಏಕತೆ ಮತ್ತು ನ್ಯಾಯದ ತತ್ತ್ವಗಳ ಆಚರಣೆಯಾಗಿದೆ. ರಾಷ್ಟ್ರದ ಸಾರ್ವಭೌಮತ್ವವನ್ನು ಬಿಂಬಿಸಲು ಸ್ವಾತಂತ್ರ್ಯ ದಿನದಂದು ವಿವಿಧ ಸಂಪ್ರದಾಯಗಳನ್ನು ಆಚರಿಸಲಾಗುತ್ತದೆ. ಸಾಮಾನ್ಯ ಚಟುವಟಿಕೆಗಳಲ್ಲಿ ಧ್ವಜಾರೋಹಣ ಸಮಾರಂಭ, ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುವ ಮೆರವಣಿಗೆ, ಸಾಂಸ್ಕೃತಿಕ ಪ್ರದರ್ಶನ ಸೇರಿವೆ. ಇದು ನಾಗರಿಕರನ್ನು ಏಕತೆ ಮತ್ತು ದೇಶಭಕ್ತಿಯಲ್ಲಿ ಒಟ್ಟುಗೂಡಿಸುವ ದಿನವಾಗಿದೆ. ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರದ ಸ್ವಾತಂತ್ರ್ಯದ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ ಮತ್ತು ಉಜ್ವಲ ಭವಿಷ್ಯವನ್ನು ಎದುರು ನೋಡುತ್ತಿದೆ ಎಂಬುದನ್ನು ಸಾರುತ್ತದೆ.

ಎಲ್ಲರೂ ಈ ದಿನವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಜನರು ರಾಷ್ಟ್ರೀಯ ಬಣ್ಣಗಳನ್ನು ಧರಿಸುತ್ತಾರೆ. ಕಟ್ಟಡಗಳನ್ನು ಧ್ವಜ ಮತ್ತು ಬ್ಯಾನರ್‌ಗಳಿಂದ ಅಲಂಕರಿಸುತ್ತಾರೆ. ದೇಶದ ಪರಂಪರೆ ಮತ್ತು ಸಾಧನೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಇಂಥ ಚಟುವಟಿಕೆಗಳಲ್ಲಿ ಭಾಗವಹಿಸುವುದೇ ನಮಗೆಲ್ಲ ಹೆಮ್ಮೆಯ ಕ್ಷಣ.

ಸ್ವಾತಂತ್ರ್ಯ ದಿನವು ರಾಷ್ಟ್ರದ ಇತಿಹಾಸದಲ್ಲಿ ಎದುರಾದ ಸವಾಲುಗಳು ಮತ್ತು ವಿಜಯಗಳನ್ನು ನಮಗೆ ನೆನಪಿಸುತ್ತದೆ. ದೇಶದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಮೂಡುವಂತೆ ಮಾಡುತ್ತದೆ. ದೇಶದ ರಕ್ಷಣೆಗಾಗಿ ಒಟ್ಟಾಗುವಂತೆ ಮಾಡುತ್ತದೆ. ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಏಕತೆಯ ತತ್ತ್ವಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಸ್ವಾತಂತ್ರ್ಯ ದಿನವಾದ ಇಂದು ಹಿಂದಿನದನ್ನು ನೆನಪಿಸಿಕೊಳ್ಳೋಣ, ವರ್ತಮಾನವನ್ನು ಪಾಲಿಸಿ ಶಾಂತಿ ಮತ್ತು ಸಮೃದ್ಧಿಯ ಭವಿಷ್ಯಕ್ಕಾಗಿ ಹಾರೈಸೋಣ. ಮತ್ತಷ್ಟು ಸದೃಢ ದೇಶವನ್ನು ಕಟ್ಟಲು ನಾವೆಲ್ಲ ಪಣ ತೊಡೋಣ.

ಜೈ ಹಿಂದ್!


ಸ್ವಾತಂತ್ರ್ಯೋತ್ಸವದ ದಿನ ವಿದ್ಯಾರ್ಥಿಗಳು ಮಾಡಬಹುದಾದ ಸಂಕ್ಷಿಪ್ತ ಭಾಷಣ:

ಶುಭೋದಯ ಗುರುಗಳೇ, ಗಣ್ಯ ಅತಿಥಿಗಳೇ ಮತ್ತು ನನ್ನ ಎಲ್ಲಾ ಆತ್ಮೀಯ ಸಹಪಾಠಿಗಳೇ,

ಪ್ರತಿ ವರ್ಷದಂತೆ ಈ ಬಾರಿಯೂ ನಾವು ಸ್ವಾತಂತ್ರ್ಯ ದಿನವನ್ನು ಅಭಿಮಾನದಿಂದ ಮತ್ತು ಹೆಮ್ಮೆಯಿಂದ ಆಚರಿಸುತ್ತಿದ್ದೇವೆ. ದೇಶವು ತನ್ನ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಗಳಿಸಿದ ಈ ದಿನವನ್ನು ಗೌರವಿಸುವ ಸಲುವಾಗಿ ಅತ್ಯಂತ ಸಂಭ್ರಮದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಸ್ವಾತಂತ್ರ್ಯ, ಏಕತೆ ಮತ್ತು ಸಮಾನತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ದಿನವನ್ನು ಗೌರವಿಸಬೇಕಿದೆ. ನಮ್ಮ ದೇಶವನ್ನು ಎಲ್ಲರಿಗೂ ಸೌಹಾರ್ದಯುತ ಸ್ಥಳವನ್ನಾಗಿ ಮಾಡಲು ನಾವು ಶ್ರಮಿಸಬೇಕಿದೆ. ನಮ್ಮ ಪೂರ್ವಜರು ಪ್ರಾರಂಭಿಸಿದ ಪ್ರಯಾಣವನ್ನು ಮುಂದುವರಿಸುವ ಪ್ರತಿಜ್ಞೆಯನ್ನು ನಾವು ಕೈಗೊಳ್ಳಬೇಕಿದೆ.

ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳನ್ನು ಆಚರಿಸಲು ಈ ವಿಶೇಷ ದಿನದಂದು ನಾವೆಲ್ಲರೂ ಒಂದಾಗುತ್ತೇವೆ. ಇದಕ್ಕಾಗಿ ವಿವಿಧ ಚಟುವಟಿಕೆಗಳ ಮೂಲಕ ನಾವು ನಮ್ಮ ವೈವಿಧ್ಯಮಯ ರಾಷ್ಟ್ರದ ಸೌಂದರ್ಯವನ್ನು ಪ್ರದರ್ಶಿಸುತ್ತೇವೆ. ಈ ಮೂಲಕ ನಾಗರಿಕರಲ್ಲಿ ಸಾಮರಸ್ಯ ಮತ್ತು ಏಕತೆಯನ್ನು ಬೆಳೆಸುವ ಉದ್ದೇಶವಿದೆ.

ಸ್ವಾತಂತ್ರ್ಯ ದಿನಾಚರಣೆ 2024 ಕೇವಲ ಆಚರಣೆಯ ಸಮಯವಲ್ಲ. ಸ್ವತಂತ್ರ ರಾಷ್ಟ್ರದ ನಾಗರಿಕರಾಗಿ ನಮ್ಮ ಕರ್ತವ್ಯಗಳನ್ನು ನೆನಪಿಸುವ ದಿನವಾಗಿದೆ. ನಮ್ಮ ಸ್ವಾತಂತ್ರ್ಯವನ್ನು ಗೌರವಿಸೋಣ. ಅದರ ತತ್ವಗಳನ್ನು ಎತ್ತಿ ಹಿಡಿಯೋಣ. ಎಲ್ಲರಿಗೂ ಉಜ್ವಲವಾದ, ಹೆಚ್ಚು ಒಳಗೊಳ್ಳುವ ಭವಿಷ್ಯಕ್ಕಾಗಿ ಕೆಲಸ ಮಾಡೋಣ.

ಜೈ ಹಿಂದ್!

ಭಾಷಣದ ವಿಷಯಗಳ ಆಯ್ಕೆ ಹೇಗಿರಬೇಕು?

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾಡುವ ದೀರ್ಘ ಭಾಷಣದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅನುಭವಿಸಿದ ಕಷ್ಟಗಳನ್ನು ಹೇಳಬಹುದು. ನಮ್ಮ ದೇಶದಲ್ಲಿ ಏಕತೆ ಮತ್ತು ವೈವಿಧ್ಯತೆಯ ಮಹತ್ವವನ್ನು ತಿಳಿಸಬಹುದು. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ನಾಗರಿಕರಾಗಿ ನಾವು ಹೊಂದಿರುವ ಕರ್ತವ್ಯಗಳ ಬಗ್ಗೆ ಮಾತನಾಡಬಹುದು. ಈ ಭಾಷಣವು ವಿದ್ಯಾರ್ಥಿಗಳು ತಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವಂತೆ ಮತ್ತು ರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುವಂತೆ ಪ್ರೇರೇಪಿಸಬೇಕು.

ಕಿರು ಭಾಷಣದಲ್ಲಿ ದೇಶಭಕ್ತಿ, ಏಕತೆ ಮತ್ತು ರಾಷ್ಟ್ರವನ್ನು ನಿರ್ಮಿಸುವಲ್ಲಿ ಯುವಜನರ ಪಾತ್ರದಂತಹ ಅಗತ್ಯ ವಿಷಯಗಳ ಮೇಲೆ ಬೆಳಕು ಚೆಲ್ಲಬಹುದು. ಸ್ವಾತಂತ್ರ್ಯ ಪಡೆದ ಅನಂತರ ಭಾರತ ಸಾಧಿಸಿದ ಪ್ರಗತಿ ಮತ್ತು ನಾವು ಇನ್ನೂ ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಬಹುದು. ಚಿಕ್ಕ ಭಾಷಣವು ಕೇಳುಗರಲ್ಲಿ ಸ್ಮರಣೀಯವಾದ ಪ್ರಭಾವವನ್ನು ಬಿರುವಂತಿರಬೇಕು.

ಇದನ್ನೂ ಓದಿ: Independence Day 2024: ಈ ಬಾರಿ ಆಚರಿಸುತ್ತಿರುವುದು ಎಷ್ಟನೇ ಸ್ವಾತಂತ್ರ್ಯೋತ್ಸವ? 77 or 78?

ಸ್ವಾತಂತ್ರ್ಯ ದಿನವು ಕೇವಲ ಆಚರಣೆಯಲ್ಲ. ಇದು ಸ್ಮರಣೆ ಮತ್ತು ಪ್ರತಿಬಿಂಬದ ಸಮಯ. ನಮ್ಮ ಸ್ವಾತಂತ್ರ್ಯವನ್ನು ಗೆಲ್ಲಲು ತ್ಯಾಗ ಮಾಡಿದ ಅನೇಕ ಜೀವಗಳನ್ನು ನೆನಪಿಸುತ್ತದೆ. ಈ ದಿನ ನಾವು ಮಾಡುವ ಭಾಷಣಗಳು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರಾಗಿ ಸಮಾಜಕ್ಕೆ ಧನಾತ್ಮಕ ಕೊಡುಗೆ ನೀಡಲು ಋಣಿಯಾಗಿರುವಂತೆ ಮಾಡುತ್ತದೆ. ನಾವು ಆನಂದಿಸುತ್ತಿರುವ ಸ್ವಾತಂತ್ರ್ಯಕ್ಕಾಗಿ 2024ರ ಸ್ವಾತಂತ್ರ್ಯ ದಿನವನ್ನು ಹೆಮ್ಮೆ ಮತ್ತು ಕೃತಜ್ಞತೆಯಿಂದ ಆಚರಿಸೋಣ.

Exit mobile version