ನವ ದೆಹಲಿ: ಭಾರತ ದಿನದಿಂದ ದಿನಕ್ಕೆ ತನ್ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ೨೦೨೧ನೇ ಸಾಲಿನಲ್ಲಿ ತನ್ನ ಸಾಮರ್ಥ್ಯವನ್ನು ೧೫.೪ ಗಿಗಾವ್ಯಾಟ್‌ನಷ್ಟು ಹೆಚ್ಚ್ಸಿಕೊಂಡಿದೆ. ಈ ರೀತಿ ಒಂದೇ ವರ್ಷದಲ್ಲಿ ಸಾಮರ್ಥ್ಯ ವರ್ಧನೆ ಮಾಡಿಕೊಂಡ ರಾಷ್ಟ್ರಗಳ ಸಾಲಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಚೀನಾ (೧೩೬ ಗಿಗಾವ್ಯಾಟ್) ಮತ್ತು ಅಮೆರಿಕ (೪೩ ಗಿಗಾವ್ಯಾಟ್) ಭಾರತಕ್ಕಿಂತ ಮುಂದಿದೆ. ಒಟ್ಟಾರೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲೂ ಚೀನಾ, ಅಮೆರಿಕ ಬಳಿಕ ಭಾರತವೇ ಮೂರನೇ ಸ್ಥಾನದಲ್ಲಿದೆ.
ಈ ಕುರಿತಾದ ಜಾಗತಿಕ ವರದಿಯೊಂದು ಇತ್ತೀಚೆಗೆ ಪ್ರಕಟಗೊಂಡಿದ್ದು, ಸೌರಶಕ್ತಿಯ ಫೋಟೋವೋಲ್ಟಾಯಿಕ್ ಕೋಶಗಳಿಗೆ (ಪಿವಿ) ಭಾರತ ವಿಶ್ವದಲ್ಲೇ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ಹೇಳಲಾಗಿದೆ. ಸೌರಶಕ್ತಿ ಉತ್ಪನ್ನ ಉಪಕರಣಗಳ (೬೦.೪ ಗಿಗಾವ್ಯಾಟ್ ಸಾಮರ್ಥ್ಯ) ಬಳಕೆಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದ್ದು, ಚೀನಾ, (೩೦೫.೯ ಗಿಗಾವ್ಯಾಟ್), ಅಮೆರಿಕ (೧೨೧.೪ ಗಿಗಾವ್ಯಾಟ್) ಮತ್ತು ಜಪಾನ್ (೭೮ ಗಿಗಾವ್ಯಾಟ್) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ. ಇದರಿಂದ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ವಿಷಯದಲ್ಲಿ ಭಾರತವೀಗ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ.
ಇದನ್ನೂ ಓದಿ | ಅದಾನಿ ಗ್ರೂಪ್‌ಗೇ ವಿದ್ಯುತ್ ಯೋಜನೆ ನೀಡಲು ಲಂಕಾದ ಮೇಲೆ ಮೋದಿ ಒತ್ತಡ ಹಾಕಿದ್ರಾ? ಇಲ್ಲ ಎಂದ ರಾಜಪಕ್ಸ
ಭಾರತ ತನ್ನಸೌರಶಕ್ತಿ ಯೋಜನೆಗಳಿಗೆ ೧೮,೦೦೦ ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, ಈ ಪ್ರಯತ್ನದಲ್ಲಿ ಉತ್ತಮ ಯಶಸ್ಸು ಕಂಡಿದೆ. ೨೦೩೦ರ ವೇಳೆಗೆ ವರ್ಷಂಪ್ರತಿ ೪೦ ಗಿಗಾವ್ಯಾಟ್‌ಗಳ ವರ್ಧನೆಯನ್ನು ಕಾಣುವ ಭಾರತದ ಗುರಿ ಸಾಧನೆಯ ಬಗ್ಗೆ ವರದಿ ಆಶಾಭಾವ ವ್ಯಕ್ತಪಡಿಸಿದೆ.
೨೦೨೧ರ ಸಾಲಿನ ಉತ್ತರಾರ್ಧದಲ್ಲಿ ಏರಿದ ತೈಲಬೆಲೆ ಮತ್ತು ೨೦೨೨ರ ಪೂರ್ವಾರ್ಧದಲ್ಲಿ ಉಕ್ರೇನ್ ಮೇಲೆ ನಡೆದ ದಾಳಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಶಕ್ತಿಯ ತೀವ್ರ ಕೊರತೆ ಎದುರಾಗಿತ್ತು. ಇದರಿಂದಾಗಿ ನಾನಾ ದೇಶಗಳ ಸರಕಾರಗಳು ಸ್ಥಳೀಯವಾಗಿ ಶಕ್ತಿ ಸಂಚಯಿಸಿಕೊಳ್ಳುವ ಮತ್ತು ಪಳೆಯುಳಿಕೆ ಇಂಧನಗಳ ಆಮದು ಸಾಧ್ಯತೆಗಳ ಹೆಚ್ಚಳದ ಕುರಿತಾದ ಅಲ್ಪಾವಧಿಯ ಕ್ರಮಗಳನ್ನು ಹಮ್ಮಿಕೊಂಡಿದ್ದವು. ಆದರೆ ಇಂಥ ಉಪಕ್ರಮಗಳನ್ನು ತಡೆದು ಜಾಗತಿಕ ತಾಪಮಾನ ಮತ್ತು ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಭೂಮಿಯಲ್ಲಿ ಏರದಂತೆ ತಡೆಯಬೇಕು ಎಂದು ವರದಿ ಕರೆನೀಡಿದೆ.
ʻಶಕ್ತಿ ಕೊರತೆಯ ಈ ಸನ್ನಿವೇಶವು ವಿಶ್ವವನ್ನು ಇನ್ನಷ್ಟು ಆರ್ಥಿಕ, ಭೌಗೋಳಿಕ ಮತ್ತು ರಾಜಕೀಯ ಅಸ್ಥಿರತೆಗಳತ್ತ ದೂಡಿದ್ದು ಮಾತ್ರವಲ್ಲದೆ ಪರಿಸರದ ಪ್ರಕೋಪಗಳಿಗೂ ಕಾರಣವಾಗುತ್ತಿದೆ. ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲಗಳ ಉಗುಳುವಿಕೆಯನ್ನು ಸಂಪೂರ್ಣ ತಡೆಗಟ್ಟಬೇಕೆಂಬ ತತ್ವಕ್ಕೆ ಹೆಚ್ಚಿನ ದೇಶಗಳು ತಾತ್ವಿಕವಾಗಿ ಬದ್ಧವಾಗಿರುವುದು ನಿಜ. ವಾಸ್ತವದಲ್ಲಿ ಆಗಿದ್ದೇನೆಂದರೆ ಬಹಳಷ್ಟು ದೇಶಗಳು ಪಳೆಯುಳಿಕೆ ಇಂಧನ ಉತ್ಪಾದನೆಯ ಮೂಲಕ್ಕೇ ಪುನಃ ಜೋತುಬಿದ್ದು, ಇನ್ನಷ್ಟು ನೈಸರ್ಗಿಕ ಅನಿಲ, ಕಲ್ಲಿದ್ದಲು ಮತ್ತು ಪೆಟ್ರೋಲ್ ಸುಡುವುದಕ್ಕೆ ಕಾರಣವಾಗಿವೆʼ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.
ಈ ವರ್ಷದ ಮೇ ತಿಂಗಳಲ್ಲಿ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ೪೨೧ ಪಿಪಿಎಂ ಗಳಷ್ಟಿತ್ತು. ಔದ್ಯೋಗೀಕರಣದ ಹಿಂದಿನ ಪ್ರಮಾಣಕ್ಕೆ ಹೋಲಿಸಿದರೆ ಇದು ಶೇ. ೫೦ಕ್ಕಿಂತ ಅಧಿಕ ಹೆಚ್ಚಳ. ಕಳೆದ ಲಕ್ಷಾಂತರ ವರ್ಷಗಳಿಂದಲೂ ಈ ಪ್ರಮಾಣದ ಏರಿಕೆಯನ್ನು ಭೂಮಿಯ ವಾತಾವರಣ ದಾಖಲಿಸಿರಲಿಲ್ಲ ಎಂದು ರಾಷ್ಟ್ರೀಯ ಸಾಗರ ಮತ್ತು ಪರ್ಯಾವರಣ ಸಂಸ್ಥೆ ಎಚ್ಚರಿಕೆ ನೀಡಿದೆ.