ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಸ್ಪಷ್ಟ ಬಹುಮತ ಪಡೆದ ಎನ್‌ಡಿಎ ಮೈತ್ರಿಕೂಟವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಜೆಟ್ ಅನ್ನು ಜನರ ಮುಂದಿಟ್ಟಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಂಗಳವಾರ ಏಳನೇ ಬಾರಿಗೆ ಬಜೆಟ್ (Union Budget 2024) ಮಂಡಿಸಿದರು. ಆದರೆ ಈ ಬಜೆಟ್ ಆಂಧ್ರಪ್ರದೇಶ ಹಾಗೂ ಬಿಹಾರ ಹೊರತುಪಡಿಸಿ ಬೇರೆ ರಾಜ್ಯಗಳಿಗೆ ಬಜೆಟ್‌ನಿಂದ ಯಾವುದೇ ಅನುಕೂಲ ಆಗಿಲ್ಲ ಎಂದು ಆರೋಪಿಸಿರುವ ವಿರೋಧ ಪಕ್ಷದ ಇಂಡಿಯಾ(INDIA) ಒಕ್ಕೂಟ ನಾಳೆ (ಬುಧವಾರ) ಸಂಸತ್ತಿನಲ್ಲಿ ಪ್ರತಿಭಟನೆ(INDIA Bloc To Protest) ನಡೆಸಲು ನಿರ್ಧರಿಸಿದೆ. ಇದೊಂದು “ತಾರತಮ್ಯ”ದ ಬಜೆಟ್ ಎಂದು ಕರೆದಿದೆ.
ಬಜೆಟ್ ಮುಕ್ತಾಯದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Congress chief Mallikarjun Kharge) ಅವರ ನಿವಾಸದಲ್ಲಿ ಭಾರತ ಬ್ಲಾಕ್ ಪಕ್ಷಗಳ ಉನ್ನತ ನಾಯಕರು ಸಭೆ ನಡೆಸಿ ನಾಳೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಸಂಸದರಾದ ರಾಹುಲ್ ಗಾಂಧಿ ಮತ್ತು ಕೆಸಿ ವೇಣುಗೋಪಾಲ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಶಿವಸೇನೆ (ಯುಬಿಟಿ) ಸಂಸದರಾದ ಸಂಜಯ್ ರಾವುತ್ ಮತ್ತು ಅರವಿಂದ್ ಸಾವಂತ್, ಡಿಎಂಕೆ ಸಂಸದರಾದ ಟಿಆರ್ ಬಾಲು ಮತ್ತು ತಿರುಚಿ ಶಿವ, ಜಾರ್ಖಂಡ್ ಮುಕ್ತಿ ಮುಂತಾದ ನಾಯಕರು ಭಾಗವಹಿಸಿದ್ದರು. ಮೋರ್ಚಾ ಸಂಸದ ಮಹುವಾ ಮಜಿ, ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ, ಆಮ್ ಆದ್ಮಿ ಪಕ್ಷದ ಸಂಸದರಾದ ಸಂಜಯ್ ಸಿಂಗ್ ಮತ್ತು ರಾಘವ್ ಚಡ್ಡಾ ಮತ್ತಿತರರು ಭಾಗಿಯಾಗಿದ್ದರು.
ಇದನ್ನೂ ಓದಿ CM Siddaramaiah: ರೈತರು, ರಾಜ್ಯಕ್ಕೆ ಕೇಂದ್ರ ಪಂಗನಾಮ; ತಿಂಡಿ ತಿನ್ನುತ್ತಲೇ ಬಜೆಟ್ ಬಗ್ಗೆ ಸಿದ್ದರಾಮಯ್ಯ ಆಕ್ರೋಶ
ಮೂಲಗಳ ಪ್ರಕಾರ, ವಿರೋಧ ಪಕ್ಷದ ಸಂಸದರು ಬುಧವಾರ ಬೆಳಗ್ಗೆ 10.30ಕ್ಕೆ ಸಂಸತ್ತಿನ ಮೆಟ್ಟಿಲುಗಳ ಬಳಿ ಪ್ರತಿಭಟನೆ ಆರಂಭಿಸಲಿದ್ದಾರೆ ಎನ್ನಲಾಗಿದೆ. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಸಿ.ವೇಣುಗೋಪಾಲ್, ಈ ಬಾರಿಯ ಕೇಂದ್ರ ಬಜೆಟ್‌ನಿಂದ ಈಗಾಗಲೇ ಬಜೆಟ್ ಪರಿಕಲ್ಪನೆಯನ್ನು ನಾಶಪಡಿಸಿದೆ. ಅವರು ಬಹುತೇಕ ರಾಜ್ಯಗಳನ್ನು ಸಂಪೂರ್ಣವಾಗಿ ತಾರತಮ್ಯ ಮಾಡಿದ್ದಾರೆ, ಆದ್ದರಿಂದ ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಮೋದಿ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ಬಜೆಟ್ಗೆ ಮೆಚ್ಚುಗೆ ಸೂಚಿಸಿದ್ದಾರೆ. “ದೇಶದ ಸರ್ವಾಂಗೀಣ ಏಳಿಗೆಗೆ ಈ ಬಜೆಟ್ ಏಣಿಯಾಗಿದೆ” ಎಂಬುದಾಗಿ ವಿಡಿಯೊ ಸಂದೇಶದ ಮೂಲಕ ಬಣ್ಣಿಸಿದ್ದಾರೆ. “ದೇಶದ ಎಲ್ಲ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಯುವಕರಿಗೆ ಉದ್ಯೋಗ, ಬಡವರಿಗೆ ಮನೆ ನಿರ್ಮಾಣ, ಸಣ್ಣ ಉದ್ಯಮಗಳು, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಲಾಗಿದೆ. ಅಷ್ಟೇ ಅಲ್ಲ, ಭಾರತವು ಮೂಲ ಸೌಕರ್ಯ ಉತ್ಪಾದಿಸುವಲ್ಲಿ ಜಾಗತಿಕ ಮಳಿಗೆಯಾಗುತ್ತದೆ. ಭಾರತದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ. ಅಷ್ಟರಮಟ್ಟಿಗೆ, ಪ್ರಸಕ್ತ ಸಾಲಿನ ಮುಂಗಡಪತ್ರವು ದೇಶದ ಏಳಿಗೆಯನ್ನು ಪ್ರತಿನಿಧಿಸುತ್ತದೆ” ಎಂಬುದಾಗಿ ಹೇಳಿದ್ದಾರೆ.
ಶಿಕ್ಷಣ ಹಾಗೂ ಕೌಶಲ ವೃದ್ಧಿಯ ದೃಷ್ಟಿಯಿಂದಲೂ ಬಜೆಟ್ ಪ್ರಮುಖವಾಗಿದೆ. ಶಿಕ್ಷಣ ಹಾಗೂ ಕೌಶಲಾಭಿವೃದ್ಧಿಯಿಂದ ಮಧ್ಯಮ ವರ್ಗದ ಜನರಿಗೆ ಭಾರಿ ಅನುಕೂಲವಾಗಲಿದೆ. ಅವರಿಗೆ ಹೊಸ ಶಕ್ತಿಯೇ ಸಿಗಲಿದೆ. ದಲಿತರು ಹಾಗೂ ಬುಡಕಟ್ಟು ಸಮುದಾಯದವರಿಗೂ ಇದರಿಂದ ಸಹಕಾರಿಯಾಗಲಿದೆ. ಹಣಕಾಸು ನೆರವು ಕೂಡ ಸಿಗುವುದರಿಂದ ದಮನಿತರು ಏಳಿಗೆಯ ಹಾದಿ ಹಿಡಿಯಲು ಸಾಧ್ಯವಾಗಲಿದೆ” ಎಂದು ತಿಳಿಸಿದರು.