ಭಾರತದಲ್ಲಿ ದೇವಾಲಯಗಳು ಈ ಮಣ್ಣಿನ ಸಂಸ್ಕೃತಿ (Hindu Temples In India) ಒಂದು ಭಾಗವೇ ಆಗಿ ಹೋಗಿವೆ. ಒಂದೊಂದು ದೇವಾಲಯ ಹಿಂದೆಯೂ ಒಂದೊಂದು ಇತಿಹಾಸ, ದಂತಕಥೆಗಳು, ಪರಂಪರಾಗತ ಕತೆಗಳು ಇವೆ. ಹಿಂದೂ ರಾಷ್ಟ್ರವಾದ ಭಾರತದಲ್ಲಿ ಅನೇಕಾನೇಕ ದೇವಾಲಯಗಳಿವೆ. ಅದರಲ್ಲೂ ಕೆಲವು ಜಗತ್ಪ್ರಸಿದ್ಧವಾದ ದೇಗುಲಗಳು ಇವೆ. ಕೆಲವು ದೇವಸ್ಥಾನಗಳಂತೂ ಪವಾಡಕ್ಕೆ ಹೆಸರಾಗಿವೆ. ಒಟ್ಟಾರೆ ಭಾರತದಲ್ಲಿ ದೇವಸ್ಥಾನಕ್ಕೆ ಅವುಗಳದ್ದೇ ಆದ ವಿಶೇಷತೆಯಿದ್ದು, ಹಿಂದುಗಳ ಧಾರ್ಮಿಕ ನಂಬಿಕೆಗೆ ಹಿಡಿದ ಕೈಗನ್ನಡಿಯಂತೆ ಇವೆ.
ಭಾರತದಲ್ಲಿ ಎಷ್ಟಿವೆ ದೇವಾಲಯ?
ಇಂಡಿಯಾ ಇನ್ ಪಿಕ್ಸೆಲ್ಸ್ ಶೇರ್ ಮಾಡಿರುವ ಡಾಟಾ ಪ್ರಕಾರ ಭಾರತದಲ್ಲಿ ಸುಮಾರು 6.48 ಲಕ್ಷ ದೇವಸ್ಥಾನಗಳು ಇವೆ. ಅದರಲ್ಲೂ ತಮಿಳುನಾಡಿನಲ್ಲೇ ಹೆಚ್ಚು, ಅಂದರೆ 79,154 ದೇಗುಲಗಳಿವೆ. ಹಾಗೇ, ಅದು ಬಿಟ್ಟರೆ ಎರಡನೇ ಸ್ಥಾನದಲ್ಲಿ ಇರುವುದು ಮಹಾರಾಷ್ಟ್ರ. ಇಲ್ಲಿ 77,283 ದೇಗುಲಗಳು ಇವೆ. ಮೂರನೇ ಸ್ಥಾನದಲ್ಲಿ ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿವೆ. ಮಿಜೋರಾಂ ರಾಜ್ಯ ದೇಶದಲ್ಲಿಯೇ ಅತ್ಯಂತ ಕಡಿಮೆ ಅಂದರೆ, 32 ದೇವಾಲಯಗಳು ಮಾತ್ರ ಇವೆ. ಒಟ್ಟಾರೆ ಹೇಳುವುದಾದರೆ ಭಾರತದಲ್ಲಿ ಪ್ರತಿರಾಜ್ಯದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ 53 ಹಿಂದು ದೇವಸ್ಥಾನಗಳಿವೆ ಎಂದು ಇಂಡಿಯಾ ಇನ್ ಪಿಕ್ಸೆಲ್ಸ್ ತಿಳಿಸಿದೆ.