Site icon Vistara News

Covid 19 Updates: ಇಂದು 5000ಕ್ಕೂ ಅಧಿಕ ಕೊರೊನಾ ಕೇಸ್​ಗಳು ದಾಖಲು; ಐದು ತಿಂಗಳಲ್ಲೇ ಗರಿಷ್ಠ ಸಂಖ್ಯೆ ಇದು!

Covid 19 Updates: No new wave, need not worry says expert

ನವ ದೆಹಲಿ: ಭಾರತದಲ್ಲಿ ಕೊರೊನಾ ಪರಿಸ್ಥಿತಿ (Covid 19 Updates) ಮಿತಿಮೀರುತ್ತಿದೆ. ಕಳೆದ 24ಗಂಟೆಯಲ್ಲಿ 5335 ಹೊಸ ಕೊವಿಡ್​ 19 ಕೇಸ್​​ಗಳು (Covid 19 Cases Update) ದಾಖಲಾಗಿವೆ. ನಿನ್ನೆ 4435 ಕೊರೊನಾ ಕೇಸ್​ಗಳು ದಾಖಲಾಗಿದ್ದವು. ಅದಕ್ಕಿಂತಲೂ ಇಂದು ಶೇ.20ರಷ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲ, ಕಳೆದ ಐದು ತಿಂಗಳಲ್ಲಿ (163 ದಿನಗಳು)ಯೇ ಇಂದು ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಾಖಲಾಗಿದೆ. ಅಂದರೆ ಕಳೆದ ವರ್ಷ ಸೆಪ್ಟೆಂಬರ್​​ 23ರಂದು 5 ಸಾವಿರಕ್ಕೂ ಅಧಿಕ ಕೇಸ್​ ದಾಖಲಾದ ಮೇಲೆ, ಒಂದು ದಿನದಲ್ಲಿ ಅಷ್ಟೊಂದು ಕಾಣಿಸಿಕೊಂಡಿರಲಿಲ್ಲ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 23,091ಕ್ಕೆ ಏರಿಕೆಯಾಗಿದೆ ಮತ್ತು ಒಟ್ಟಾರೆ ಸೋಂಕಿತರ ಸಂಖ್ಯೆ 4,47,33,719ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಭಾರತದಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಪ್ರಮಾಣ ಶೇ.98.75ರಷ್ಟಿದೆ. ಕಳೆದ 24ಗಂಟೆಯಲ್ಲಿ 2826ಮಂದಿ ಸೋಂಕಿನಿಂದ ಚೇತರಿಸಿಕೊಂಡು ಡಿಸ್​ಚಾರ್ಜ್ ಆಗಿದ್ದಾರೆ. ಅಲ್ಲಿಗೆ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 4,41,82,538. ಹಾಗೇ, ಕಳೆದ 24ಗಂಟೆಯಲ್ಲಿ ಎಂಟು ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕ, ಪಂಜಾಬ್​ ಮತ್ತು ಕೇರಳ ರಾಜ್ಯಗಳಿಂದ ಸಾವಿನ ವರದಿಯಾಗಿದೆ. ದೇಶದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 5,30,929ಕ್ಕೆ ತಲುಪಿದೆ. ದೈನಂದಿನ ಪಾಸಿಟಿವಿಟಿ ರೇಟ್​ 3.32ಕ್ಕೆ ಏರಿಕೆಯಾಗಿದ್ದರೆ, ವಾರದ ಪಾಸಿಟಿವಿಟಿ ರೇಟ್​ ಶೇ.2.89ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ: Covid 19 Updates: ಎಚ್ಚರವಿರಲಿ, ಹೆಚ್ಚುತ್ತಿದೆ ಕೊರೊನಾ; ಇಂದು ದೇಶದಲ್ಲಿ 3824 ಕೊವಿಡ್​ 19 ಕೇಸ್​ಗಳು ದಾಖಲು

ದೇಶದಲ್ಲೀಗ ಕೊರೊನಾ ಹೊಸ ಅಲೆ ಉಂಟಾಗಲು ಕಾರಣ ಕೊವಿಡ್​ 19ನ XBB.1.16 ರೂಪಾಂತರಿ ಎಂದು ವಿಜ್ಞಾನಿಗಳು, ಆರೋಗ್ಯ ತಜ್ಞರು ಹೇಳಿದ್ದಾರೆ. ಹಾಗೇ, ಈ ತಳಿಗೆ ಹೆದರಬೇಕಿಲ್ಲ. ದೇಶದ ಜನರು ಈಗಾಗಲೇ ಮೂರು ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿದೆ. ಸದ್ಯ ಚಾಲ್ತಿಯಲ್ಲಿರುವ ಕೊರೊನಾ ರೂಪಾಂತರಿ ಅಷ್ಟು ಪ್ರಬಲವಾಗಿ ಪರಿಣಾಮ ಬೀರುತ್ತಿಲ್ಲ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ ಎಂದೂ ತಿಳಿಸಿದ್ದಾರೆ. ಆದರೂ ಜನರು ಎಚ್ಚರಿಕೆಯಿಂದ ಇರಬೇಕು. ಇನ್ನೂ ಯಾರಾದರೂ ಲಸಿಕೆ ತೆಗೆದುಕೊಂಡಿಲ್ಲದೆ ಇದ್ದರೆ, ಕೂಡಲೇ ತೆಗೆದುಕೊಳ್ಳಿ. ಜನಸಂದಣಿ ಪ್ರದೇಶಕ್ಕೆ ಹೋಗುವಾಗ ಮಾಸ್ಕ್​ ಕಡ್ಡಾಯವಾಗಿ ಧರಿಸಿ ಎಂದು ಸಲಹೆ ನೀಡಿದ್ದಾರೆ.

Exit mobile version