Site icon Vistara News

Coronavirus: ಇಂದು 1800ಕ್ಕೂ ಅಧಿಕ ಕೊರೊನಾ ಕೇಸ್​ಗಳು ಪತ್ತೆ; ಏಪ್ರಿಲ್​​ನಲ್ಲಿ 2 ದಿನ ಆಸ್ಪತ್ರೆಗಳಲ್ಲಿ ಅಣುಕು ಕಾರ್ಯಾಚರಣೆ

India records highest daily Covid cases 1800 corona cases in 24hours

#image_title

ನವ ದೆಹಲಿ: ಭಾರತದಲ್ಲಿ 24ಗಂಟೆಯಲ್ಲಿ 1890 ಕೊರೊನಾ ಕೇಸ್​ಗಳು (Coronavirus Cases) ದಾಖಲಾಗಿವೆ. ಇದು ಕಳೆದ 149 ದಿನಗಳಲ್ಲಿಯೇ (ಮೂರುವರೆ ತಿಂಗಳಲ್ಲಿ) ಗರಿಷ್ಠ ಮಟ್ಟದ ಪ್ರಕರಣ ಎಂದು ಆರೋಗ್ಯ ಇಲಾಖೆ ಹೇಳಿದೆ. ಈ ಮೂಲಕ ದೇಶದಲ್ಲಿನ ಸಕ್ರಿಯ ಕೊರೊನಾ ಕೇಸ್​ಗಳ ಸಂಖ್ಯೆ 9433ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 4,47,04,147 ಆಗಿದೆ. ಕೊರೊನಾ ಪ್ರಸರಣ ಕಳೆದ ಒಂದು ವಾರದಿಂದ ಏರುತ್ತಿದ್ದು, ಪ್ರತಿದಿನವೂ ಹೆಚ್ಚೆಚ್ಚು ಕೇಸ್​ಗಳು ದಾಖಲಾಗುತ್ತಿವೆ. ಅದರಲ್ಲೂ ದೆಹಲಿ, ಮುಂಬಯಿಯಗಳಲ್ಲೇ ಹೆಚ್ಚು ಕೇಸ್​ಗಳು ಎನ್ನಲಾಗಿದೆ. ಹಾಗೇ, 24ಗಂಟೆಯಲ್ಲಿ ಏಳು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಅದರಲ್ಲಿ ಗುಜರಾತ್​​ನಿಂದ ಎರಡು, ಮಹಾರಾಷ್ಟ್ರದಿಂದ 2 ಮತ್ತು ಕೇರಳದಿಂದ ಮೂರು ಸಾವುಗಳು ವರದಿಯಾಗಿದೆ.

ಕೊವಿಡ್​ 19 ಕೇಸ್​ಗಳು ಹೀಗೆ ದಿನೇದಿನೆ ಹೆಚ್ಚಾಗುತ್ತಿರುವ ಮತ್ತು ಜತೆಜತೆಗೇ ಎಚ್​​3ಎನ್​2 ಸೇರಿ ಇನ್ನೂ ಕೆಲವು ವೈರಸ್​ಗಳು ಹರಡುತ್ತಿರುವ ಹಿನ್ನೆಲೆಯಲ್ಲಿ, ರಾಷ್ಟ್ರಾದ್ಯಂತ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಏಪ್ರಿಲ್​ 10 ಮತ್ತು 11ರಂದು ಅಣುಕು ಕಾರ್ಯಾಚರಣೆ ನಡೆಸಲು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ನಿರ್ಧರಿಸಿದರೆ. ಅಂದರೆ ಕೊವಿಡ್ 19 ಮತ್ತು ಇನ್ನಿತರ ಜ್ವರದ ಸಂಬಂಧಿ ವೈದ್ಯಕೀಯ ತುರ್ತುಪರಿಸ್ಥಿತಿ ಎದುರಾದರೆ ಹೇಗೆ ಕಾರ್ಯನಿರ್ವಹಿಸಬೇಕು? ಆಸ್ಪತ್ರೆಗಳು ಎಷ್ಟರ ಮಟ್ಟಿಗೆ ಸಜ್ಜಾಗಿರಬೇಕು ಎಂಬ ಬಗ್ಗೆ ಈ ಮಾಕ್​ ಡ್ರಿಲ್ ನಡೆಯಲಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಜಂಟಿಯಾಗಿ ಸಲಹಾ ನೋಟಿಸ್​ ಬಿಡುಗಡೆ ಮಾಡಿವೆ.

ಇದನ್ನೂ ಓದಿ: Covid 19 Cases: ನಿಧಾನವಾಗಿ ಹೆಚ್ಚುತ್ತಿದೆ ಕೊರೊನಾ; 24ಗಂಟೆಯಲ್ಲಿ ಸಾವಿರಕ್ಕೂ ಹೆಚ್ಚು ಕೇಸ್​ಗಳು ಪತ್ತೆ, 5ಮಂದಿ ಸಾವು

ಹೀಗೆ ಎರಡು ದಿನಗಳ ಅಣುಕು ಕಾರ್ಯಾಚರಣೆ ನಡೆಸಿದರೆ, ಯಾವ ಆಸ್ಪತ್ರೆಗಳಲ್ಲಿ ವೈವಸ್ಥೆಗಳು ಎಷ್ಟರ ಮಟ್ಟಿಗೆ ಇವೆ? ಔಷಧಗಳು, ಬೆಡ್​​​ಗಳು, ವೈದ್ಯಕೀಯ ಉಪಕರಣಗಳು, ಆಕ್ಸಿಜನ್​ಗಳು ಸಾಕಷ್ಟು ಇವೆಯಾ? ಕೊರತೆಯಿದೆಯಾ? ಎಂಬುದೆಲ್ಲ ಗೊತ್ತಾಗುತ್ತದೆ. ಹಾಗೊಮ್ಮೆ ವ್ಯವಸ್ಥೆಗಳಲ್ಲಿ ಏನಾದರೂ ಕುಂದುಕೊರತೆಯಿದ್ದರೆ, ಅದನ್ನು ಸರಿಪಡಿಸಬಹುದು. ಕೊವಿಡ್ 19 ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದರೆ, ಏನೂ ಸಮಸ್ಯೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಅಣುಕು ಕಾರ್ಯಾಚರಣೆಗೆ ಸಂಬಂಧಪಟ್ಟಂತೆ ಎಲ್ಲ ರಾಜ್ಯಗಳೊಂದಿಗೆ ಮಾ.27ರಂದು ವರ್ಚ್ಯುವಲ್ ಮೀಟಿಂಗ್ ನಡೆಸುವುದಾಗಿಯೂ ತಿಳಿಸಿದೆ.

ಪಾಸಿಟಿವಿಟಿ ರೇಟ್ ಎಷ್ಟು?
ಭಾರತದಲ್ಲಿ ಕೊರೊನಾ ಸೋಂಕು ಹರಡುವಿಕೆಯ ದೈನಂದಿನ ಪಾಸಿಟಿವಿಟಿ ರೇಟ್​ ಶೇ. 1.56ರಷ್ಟಿದೆ. ವಾರದ ಪಾಸಿಟಿವಿಟಿ ಪ್ರಮಾಣ ಶೇ.1.29ರಷ್ಟಿದೆ. ಚೇತರಿಸಿಕೊಳ್ಳುವವರ ಪ್ರಮಾಣ ಶೇ. 98.79ರಷ್ಟಿದ್ದು, ಮರಣದ ರೇಟ್​ ಶೇ.1.19 ಇದೆ. ದೇಶದಲ್ಲಿ ಇತ್ತೀಚೆಗೆ ಎಚ್​​3ಎನ್​​2 ವೈರಸ್​ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊವಿಡ್​ 19 ಟೆಸ್ಟ್​ನ್ನೂ ಕೂಡ ಇನ್ನಷ್ಟು ವೇಗವಾಗಿ ಮಾಡಲಾಗುತ್ತಿದೆ. ಹೀಗಾಗಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬರುತ್ತಿದೆ. ಕಳೆದ 24 ಗಂಟೆಯಲ್ಲಿ 1,21,147 ಮಂದಿಗೆ ಕೊರೊನಾ ತಪಾಸಣೆ ಮಾಡಲಾಗಿದೆ ಎಂದು ಹೇಳಿರುವ ಆರೋಗ್ಯ ಇಲಾಖೆ, ಇದುವರೆಗೆ ದೇಶದಲ್ಲಿ ಒಟ್ಟಾರೆ 220.65 ಕೋಟಿ ಮಂದಿ ಕೊವಿಡ್​ 19 ಲಸಿಕೆ ಪಡೆದಿದ್ದಾಗಿ ಮಾಹಿತಿ ನೀಡಿದೆ.

Exit mobile version