ಭಾರತದಲ್ಲಿ ಕಳೆದ 24ಗಂಟೆಯಲ್ಲಿ 10,158 ಕೊರೊನಾ ಕೇಸ್ಗಳು (Covid 19 Updates) ದಾಖಲಾಗಿವೆ. ನಿನ್ನೆ 7830 ಪ್ರಕರಣಗಳು ಪತ್ತೆಯಾಗಿದ್ದವು. ಅದಕ್ಕಿಂತ ಇಂದು ಶೇ.30ರಷ್ಟು ಜಾಸ್ತಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 44,998ಕ್ಕೆ ಏರಿಕೆಯಾಗಿದೆ. ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 4,42,10,127ಕ್ಕೆ ತಲುಪಿದೆ. ದೈನಂದಿನ ಪಾಸಿಟಿವಿಟಿ ರೇಟ್ ಶೇ.4.42ಕ್ಕೆ ತಲುಪಿದ್ದು, ವಾರದ ಪಾಸಿಟಿವಿಟಿ ದರ ಶೇ.4.02 ಆಗಿದೆ. ಒಟ್ಟಾರೆ ಸೋಂಕಿನ ಶೇ.0.10ರಷ್ಟು ಸಕ್ರಿಯ ಪ್ರಕರಣಗಳು ಇವೆ. ದೇಶಾದ್ಯಂತ ಒಟ್ಟಾರೆ ಚೇತರಿಕೆ ಪ್ರಮಾಣ ಶೇ.98.71ರಷ್ಟಿದ್ದು, ಮರಣದ ರೇಟ್ ಶೇ.1.19 ಆಗಿದೆ ಎಂದು ಆರೋಗ್ಯ ಇಲಾಖೆ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Covid 19 Updates: 7ತಿಂಗಳ ಬಳಿಕ ಇಂದು 7 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ ದಾಖಲು; 16ಸೋಂಕಿತರು ಸಾವು
ಭಾರತದಲ್ಲಿ ಸದ್ಯ ಕೊವಿಡ್ 19 ಎಂಡಮಿಕ್ ಹಂತದಲ್ಲಿದೆ. ಅಂದರೆ ಸ್ಥಳೀಯವಾಗಿ ಜೋರಾಗಿ ಹರಡುತ್ತಿದೆ. ಇನ್ನು 10-12 ದಿನಗಳ ಕಾಲ ಹೀಗೆ ಅತಿಯಾಗಿ ಏರಿಕೆಯಾಗಬಹುದು. ಬಳಿಕ ಕಡಿಮೆಯಾಗಲಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಇನ್ನೊಂದೆಡೆ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನವೂ ನಡೆಯುತ್ತಿದೆ. ಇದುವರೆಗೆ 220.66 ಕೋಟಿ ಡೋಸ್ಗಳನ್ನು ನೀಡಲಾಗಿದೆ. ಸದ್ಯ ಕೊರೊನಾ ವೈರಸ್ನ ಒಮಿಕ್ರಾನ್ನ ಉಪತಳಿಯಾಗಿರುವ XBB.1.16 ಸಿಕ್ಕಾಪಟೆ ಹರಡುತ್ತಿದೆ. ಇದ್ದುದರಲ್ಲೇ ಇದು ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ಸೇರುವ ಪ್ರಮಾಣ ಕಡಿಮೆ ಇದೆ.
XBB.1.16 ಸೋಂಕಿನ ಏರಿಕೆ ಫೆಬ್ರವರಿಯಲ್ಲಿ ಶೇ.21.6ರಷ್ಟು ಏರಿಕೆಯಾಗಿದ್ದು, ಮಾರ್ಚ್ನಲ್ಲಿ ಶೇ.35.6ರಷ್ಟು ಹೆಚ್ಚಳವಾಗಿದೆ. ದೆಹಲಿ, ಮುಂಬಯಿ, ಕೇರಳ, ತಮಿಳುನಾಡು ರಾಜ್ಯಗಳೆಲ್ಲಲ್ಲ ಕೊರೊನಾ ಏರಿಕೆಯಾಗುತ್ತಿದೆ. ಹೀಗೆ ಸೋಂಕು ಸತತವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲ ಆಸ್ಪತ್ರೆಗಳಲ್ಲಿ ಏಪ್ರಿಲ್ 10 ಮತ್ತು 11ರಂದು ಅಣಕು ಕಾರ್ಯಾಚರಣೆ ನಡೆಸಲಾಗಿತ್ತು. ದೇಶದಲ್ಲಿ ಕೊವಿಡ್ 19 ಪರಿಸ್ಥಿತಿ ಎದುರಿಸಲು ಎಲ್ಲ ವ್ಯವಸ್ಥೆಗಳೂ ಇವೆ. 10 ಲಕ್ಷಕ್ಕೂ ಅಧಿಕ ಬೆಡ್ಗಳು ಇವೆ. ಅದರಲ್ಲಿ 3 ಲಕ್ಷಕ್ಕೂ ಹೆಚ್ಚು ಆಕ್ಸಿಜನ್ ಬೆಡ್ಗಳು, 90,785 ಐಸಿಯು ಬೆಡ್ಗಳು, 54,040 ಐಸಿಯು-ವೆಂಟಿಲೇಟರ್ ಬೆಡ್ಗಳು ಲಭ್ಯ ಇವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.