ನವ ದೆಹಲಿ: ಭಾರತದಲ್ಲಿ ಇಂದು ಬರೋಬ್ಬರಿ 7240 ಹೊಸ ಕೊರೊನಾ ಪ್ರಕರಣಗಳು (Covid 19 India) ಪತ್ತೆಯಾಗಿವೆ. ನಿನ್ನೆ 5,233 ಹೊಸ ಕೇಸ್‌ಗಳು ದಾಖಲಾಗಿದ್ದವು. ಇಂದು ನಿನ್ನೆಗಿಂತ ಶೇ.40ರಷ್ಟು ಹೆಚ್ಚಾಗಿದ್ದು ಪ್ರತಿದಿನವೂ ಸುಮಾರು 2 ಸಾವಿರಗಳಷ್ಟು ಏರಿಕೆ ಕಂಡುಬರುತ್ತಿದೆ. 24 ಗಂಟೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3641 ಹೆಚಾಗಿದ್ದು ಒಟ್ಟೂ ಸಕ್ರಿಯ ಕೇಸ್‌ಗಳು 32,498 ಆಗಿವೆ. ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 5,24,723 ಆಗಿದೆ. ಚೇತರಿಕೆ ಪ್ರಮಾಣ ಶೇ. 98.72ರಷ್ಟಿದ್ದು, 24ಗಂಟೆಯಲ್ಲಿ 3500 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್‌ಚಾರ್ಜ್ ಆಗಿದ್ದಾರೆ.
ದೇಶದಲ್ಲಿ ಒಟ್ಟಾರೆ ಕೊರೊನಾ ವೈರಸ್ ಪ್ರಸರಣ ಹೆಚ್ಚುತ್ತಿದ್ದರೂ ಅದರಲ್ಲಿ ಕೆಲವೇ ರಾಜ್ಯಗಳದ್ದು ಬಹುಪಾಲು. ಮಹಾರಾಷ್ಟ್ರ ಕಳೆದ 24 ಗಂಟೆಯಲ್ಲಿ ಅತ್ಯಂತ ಹೆಚ್ಚು ಅಂದರೆ 2,701 ಹೊಸ ಕೇಸ್‌ಗಳನ್ನು ದಾಖಲಿಸಿದೆ. ಆದರೆ ಯಾರೂ ಸತ್ತಿಲ್ಲ. ಈ 2 ಸಾವಿರದಲ್ಲೂ ಮುಂಬೈನಲ್ಲಿಯೇ 1765 ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ದೆಹಲಿಯಲ್ಲಿ ಒಂದೇ ದಿನದಲ್ಲಿ 564 ಸೋಂಕಿತರು ಪತ್ತೆಯಾಗಿದ್ದು, ಇಲ್ಲಿ ಪಾಸಿಟಿವಿಟಿ ರೇಟ್ 2.84ಕ್ಕೆ ಏರಿದೆ.
ಇದನ್ನೂ ಓದಿ: ಕೊರೊನಾ ವೈರಸ್ 4ನೇ ಅಲೆ ಭೀತಿ; ಇಂದು 5 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ
ಮೂರು ತಿಂಗಳ ಹಿಂದೆ ತಗ್ಗಿದ್ದ ಕೊರೊನಾ ಪ್ರಸರಣ ಈಗ ಮತ್ತೆ ಜೋರಾಗಿಯೇ ಹರಡುತ್ತಿದೆ. ದೇಶದಲ್ಲಿ ನಾಲ್ಕನೇ ಅಲೆ ಶುರುವಾಯಿತಾ ಎಂಬ ಆತಂಕ ಕಾಡುತ್ತಿದೆ. ದೈನಂದಿನ ಪಾಸಿಟಿವಿಟಿ ರೇಟ್ ಶೇ. 2.13ರಷ್ಟಾಗಿದ್ದು, ವಾರದ ಪಾಸಿಟಿವಿಟಿ ಪ್ರಮಾಣ ಶೇ. 1.31ರಷ್ಟಾಗಿದೆ. ಕೊರೊನಾ ಸಾವಿನ ರೇಟ್ 1.21ರಷ್ಟಿದೆ. ಕೊರೊನಾ ಪ್ರಾರಂಭಿಕ ಅಲೆ ಮತ್ತು ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆ ತುಂಬ ಸೌಮ್ಯವಾಗಿತ್ತು. ಈ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಅತಿ ಕಡಿಮೆಯಾಗಿತ್ತು. ಇದುವರೆಗೆ ದೇಶದಲ್ಲಿ 4,26,40,301 ಮಂದಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇನ್ನೊಂದೆಡೆ ಲಸಿಕೆ ನೀಡಿಕೆಯೂ ವೇಗವಾಗಿಯೇ ನಡೆಯುತ್ತಿದ್ದು, ಇದುವರೆಗೆ 194.59 ಮಂದಿಗೆ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕು; ಈ ಐದು ರಾಜ್ಯಗಳದ್ದೇ ಸಿಂಹಪಾಲು