Site icon Vistara News

ಬಿಗಿ ಭದ್ರತೆ ನಡುವೆಯೂ ಕೆನಡಾದಲ್ಲಿ ಖಲಿಸ್ತಾನಿಗಳ ಪ್ರತಿಭಟನೆ; ನಮ್ಮ ದೇಶದಲ್ಲಿರುವ ಹೈಕಮಿಷನರ್​ಗೆ ಸಮನ್ಸ್​ ನೀಡಿದ ಭಾರತ

India Summons Canada High Commissioner Over Khalistan Protests in Canada

#image_title

ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕರು, ಉಗ್ರರ ಪ್ರತಿಭಟನೆ ನಡೆಯಲು (Khalistan Supporters Protests) ಅದು ಹೇಗೆ ಅವಕಾಶ ಸಿಗುತ್ತದೆ. ಪೊಲೀಸ್​, ಇನ್ನಿತರ ರಕ್ಷಣಾ ದಳಗಳ ಬಿಗಿ ಭದ್ರತೆಯ ನಡುವೆಯೂ ಅದು ಹೇಗೆ ಅವರು ತಮ್ಮ ಧ್ವಜ ಹಿಡಿದು, ರಾಜಾರೋಶವಾಗಿ ಪ್ರತಿಭಟನೆ ನಡೆಸುತ್ತಾರೆ ಎಂದು ಪ್ರಶ್ನಿಸಿ, ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಭಾರತ ಸರ್ಕಾರವು ಇಲ್ಲಿರುವ ಕೆನಡಾದ ಹೈಕಮಿಷನರ್​​ಗೆ ಶನಿವಾರ ಸಮನ್ಸ್​ ನೀಡಿದೆ. ‘ಕೆನಡಾದಲ್ಲಿ ಅದು ಹೇಗೆ, ಅಷ್ಟೆಲ್ಲ ಭದ್ರತೆ ನಡುವೆಯೂ ಖಲಿಸ್ತಾನಿ ಹೋರಾಟಗಾರರು ಭಾರತದ ರಾಜತಾಂತ್ರಿಕ ಮಿಷನ್​​ ಮತ್ತು ರಾಯಭಾರಿ ಕಚೇರಿಯ ಆವರಣವನ್ನು ಪ್ರವೇಶಿಸುತ್ತಾರೆ. ಎಲ್ಲ ಭದ್ರತೆಯನ್ನೂ ಅಷ್ಟು ಸುಲಭವಾಗಿ ಹೇಗೆ ಉಲ್ಲಂಘನೆ ಮಾಡುತ್ತಾರೆ’ ಎಂದು ಭಾರತ ಸರ್ಕಾರ ಪ್ರಶ್ನೆ ಮಾಡಿದೆ.

ಈಗ ವಾರದ ಹಿಂದೆ ಕೆನಡಾದ ಪಶ್ಚಿಮ ಪ್ರಾಂತ್ಯವಾದ ಬ್ರಿಟಿಷ್​ ಕೊಲಂಬಿಯಾದಲ್ಲಿರುವ ತಾಜ್ ಪಾರ್ಕ್​​ ಕನ್ವೆನ್ಷನ್​ ಸೆಂಟರ್​​ನಲ್ಲಿ ಒಂದು ಸಮಾರಂಭ ಆಯೋಜಿಸಲಾಗಿತ್ತು. ಕೆನಡಾದಲ್ಲಿರುವ ಭಾರತ ಹೈಕಮಿಷನರ್​ ಸಂಜಯ್​ ಕುಮಾರ್ ವರ್ಮಾ ಅವರು ಬ್ರಿಟಿಷ್​ ಕೊಲಂಬಿಯಾಕ್ಕೆ ಮೊಟ್ಟಮೊದಲ ಬಾರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಖಲಿಸ್ತಾನಿ ಬೆಂಬಲಿಗರು ಅಲ್ಲಿ ದೊಡ್ಡಮಟ್ಟದ ಪ್ರತಿಭಟನೆ ನಡೆಸಿದರು. ಪೊಲೀಸ್ ಬಿಗಿ ಭದ್ರತೆಯ ನಡುವೆಯೂ ತೀವ್ರತರವಾಗಿ ಹೋರಾಟಕ್ಕೆ ಇಳಿದರು. ತತ್ಪರಿಣಾಮ ಸಂಜಯ್​ ಕುಮಾರ್ ವರ್ಮಾ ಅಲ್ಲಿನ ಭೇಟಿ ರದ್ದುಗೊಂಡಿತು. ಅಷ್ಟೇ ಅಲ್ಲ, ಆ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಭಾರತ ಮೂಲದ ಪತ್ರಕರ್ತ ಸಮೀರ್ ಕೌಶಾಲ್​​ ಅವರ ಮೇಲೆ ಕೂಡ ಖಲಿಸ್ತಾನಿಗಳು ದಾಳಿ ನಡೆಸಿದ್ದರು. ಅವರನ್ನು ನಿಂದಿಸಿದ್ದರು. ಈಗ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಭಾರತ ಸರ್ಕಾರ, ಭಾರತದಲ್ಲಿರುವ ಕೆನಡಾದ ಹೈಕಮಿಷನರ್​ಗೆ ಸಮನ್ಸ್ ನೀಡಿದ್ದು, ಉತ್ತರ ಕೊಡುವಂತೆ ಕೇಳಿದೆ.

ಅಂದಹಾಗೇ, ಅಂದು (ಭಾನುವಾರ-ಮಾ.19) ಕಾರ್ಯಕ್ರಮ ನಡೆಯಬೇಕಿದ್ದ ಕನ್ವೆನ್ಷನ್​ ಸೆಂಟರ್ ಇದ್ದಿದ್ದು ಬ್ರಿಟಿಷ್​ ಕೊಲಂಬಿಯಾದ ವ್ಯಾಂಕವರ್​ ನಗರದಲ್ಲಿ. ನೂರಾರು ಖಲಿಸ್ತಾನಿ ಪ್ರತಿಭಟನಾಕಾರರು ಅಲ್ಲಿ ಸೇರಿ, ಖಲಿಸ್ತಾನಿ ಬಾವುಟಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿದ್ದರು. ಬರಿ ಅಲ್ಲಿ ಮಾತ್ರವಲ್ಲದೆ ಗುರುವಾರ ಒಟ್ಟಾವಾದಲ್ಲಿ ಕೂಡ ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದ ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಖಲಿಸ್ತಾನಿಗಳು ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ. ಅವರು ಹೆಚ್ಚಾಗಿ ಭಾರತೀಯರು, ಭಾರತೀಯ ರಾಯಭಾರಿ ಕಚೇರಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಹೀಗಾಗಿ ಅಲ್ಲಿನ ಭದ್ರತೆಯನ್ನು ಹೆಚ್ಚಿಸಲು ನಾವು ಕ್ರಮಕೈಗೊಳ್ಳಲು ಬದ್ಧರಾಗಿದ್ದೇವೆ’ ಎಂದು ಹೇಳಿತ್ತು.

ಇದನ್ನೂ ಓದಿ: Viral Video: ಮಿತಿಮೀರಿದೆ ಖಲಿಸ್ತಾನಿಗಳ ಕುಕೃತ್ಯ; ಯುಎಸ್​​ನಲ್ಲಿ ಭಾರತದ ಪತ್ರಕರ್ತನ ಮೇಲೆ ಹಲ್ಲೆ, ಅಶ್ಲೀಲ ಪದಗಳಿಂದ ನಿಂದನೆ

ಭಾರತದಲ್ಲಿ ಅಮೃತ್​ಪಾಲ್​​ಗಾಗಿ ಬಲೆ ಬೀಸಿದ ಬೆನ್ನಲ್ಲೇ ಯುಕೆ, ಕೆನಡಾ, ಯುಎಸ್​ಗಳಲ್ಲಿ ಖಲಿಸ್ತಾನಿಗಳ ಪುಂಡಾಟ ಹೆಚ್ಚಿದೆ. ಆ ದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳು, ಹೈಕಮಿಷನ್​ಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಲಂಡನ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲಿದ್ದ ಭಾರತದ ಧ್ವಜವನ್ನು ಕೆಳಗೆ ಇಳಿಸಿದ್ದರು. ಭಾರತ ಇದನ್ನು ತೀಕ್ಷ್ಣವಾಗಿ ಖಂಡಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಕೂಡ ಖಡಕ್ ಸಂದೇಶ ನೀಡಿದ್ದಾರೆ. ಖಲಿಸ್ತಾನಿಗಳ ಕೃತ್ಯವನ್ನು ನಾವು ಸಹಿಸಿಕೊಂಡು ಖಂಡಿತ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದಿದ್ದಾರೆ.

Exit mobile version