ನವ ದೆಹಲಿ: ಭಾರತ ತನ್ನ ಸ್ವಾತಂತ್ರ್ಯದ ನೂರನೇ ವರ್ಷಕ್ಕೆ ಅಡಿ ಇಡುವಷ್ಟರಲ್ಲಿ ಸಾಧಿಸಬೇಕಾದ ಲಕ್ಷ್ಯಗಳ ಬಗ್ಗೆ ಚರ್ಚಿಸಿರುವ ಕೇಂದ್ರ ಸರ್ಕಾರ, ೨೦೪೭ರ ಹೊತ್ತಿಗೆ ರಕ್ಷಣಾ ವಿಭಾಗದಲ್ಲಿ ರಫ್ತು ಸಾಮರ್ಥ್ಯವನ್ನು ೨.೬ ಲಕ್ಷ ಕೋಟಿ ರೂ.ಗಳಿಗೆ ವೃದ್ಧಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ, ನರೇಂದ್ರ ಮೋದಿ ಸರಕಾರದ ʻವಿಷನ್@೨೦೪೭ʼ ಕುರಿತಾಗಿ ವಿವರವಾಗಿ ಚರ್ಚಿಸಲಾಗಿದೆ. ೨೦೪೭ರ ಹೊತ್ತಿಗೆ, ಸಾಧ್ಯವಾದ ಎಲ್ಲಾ ಕ್ಷೇತ್ರಗಳಲ್ಲೂ ಆತ್ಮ ನಿರ್ಭರತೆಯನ್ನು ಭಾರತ ಸಾಧಿಸಬೇಕಿರುವ ಅಗತ್ಯವನ್ನು ಒತ್ತಿ ಹೇಳಲಾಗಿದೆ. ಇದಲ್ಲದೆ, ರಕ್ಷಣಾ ಕ್ಷೇತ್ರದಲ್ಲಿನ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಂಖ್ಯೆಯನ್ನು ಈಗಿರುವ ೧೫,೦೦೦ದಿಂದ ೪೫,೦೦೦ಕ್ಕೆ ಏರಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.
ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ದೇಶದ ಆರ್ಥಿಕತೆಯನ್ನು ಈಗಿನ ಶೇ. ೨ರಿಂದ ಶೇ. ೧೫ಕ್ಕೇರಿಸುವ ಬಗ್ಗೆಯೂ ಮಾತುಕತೆ ನಡೆಸಲಾಗಿದೆ. ಈ ಕ್ಷೇತ್ರದಲ್ಲಿ ನವೋದ್ಯಮಗಳಿಂದ ದೊಡ್ಡ ಹೂಡಿಕೆ ನಿರೀಕ್ಷಿಸಲಾಗುತ್ತಿದ್ದು, ಒಟ್ಟು ೧ ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಸೃಷ್ಟಿಸುವ ಉದ್ದೇಶವನ್ನು ಹೊಂದಲಾಗಿದೆ. ೨೦೨೦-೨೧ರ ಸಾಲಿನಲ್ಲಿ, ಭಾರತದ ರಕ್ಷಣಾ ವಿಭಾಗದ ರಫ್ತು ೧೩,೦೦೦ ಕೋಟಿ ರೂ.ಗಳಷ್ಟಿದ್ದು, ೨೦೪೭ರ ವೇಳೆಗೆ ಇದನ್ನು ಸುಮಾರು ೨೦ ಪಟ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ರಕ್ಷಣಾ ಉತ್ಪಾದನೆ ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ಸಂಜಯ್ ಜಾಜು ತಿಳಿಸಿದ್ದಾರೆ.
ಆಸಕ್ತ ರಾಷ್ಟ್ರಗಳಿಗೆ ಎಚ್‌ಎಎಲ್ ನಿರ್ಮಿತ ತೇಜಸ್ ಲಘು ಯುದ್ಧವಿಮಾನ ಮತ್ತು ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಜ್ ಕ್ಷಿಪಣಿಗಳನ್ನು ರಫ್ತು ಮಾಡುವುದು ಇದರಲ್ಲಿ ಪ್ರಮುಖವಾದದ್ದು. ಸುಧಾರಿತ ಲಘು ಹೆಲಿಕಾಪ್ಟರ್ ಮಾರ್ಕ್ ಅನ್ನು ಫಿಲಿಪ್ಪೀನ್ಸ್‌ಗೂ ಮತ್ತು ಲಘು ಯುದ್ಧವಿಮಾನ ತೇಜಸ್ ಅನ್ನು ಮಲೇಷ್ಯಾಗೂ ರಫ್ತು ಮಾಡುವ ಬಗ್ಗೆ ಅಂತಿಮ ಸುತ್ತಿನ ಮಾತುಕತೆ ನಡೆಯುತ್ತಿದೆ. ಬ್ರಹ್ಮೋಸ್ ಬಗ್ಗೆ ಇಂಡೋನೇಷ್ಯಾ ಸಹ ಆಸಕ್ತಿ ತೋರಿದೆ. ರಕ್ಷಣಾ ಕ್ಷೇತ್ರದಲ್ಲಿ ಉತ್ಪಾದನಾ ಘಟಕಗಳನ್ನು ನಿರ್ಮಿಸುವ ಸಂಬಂಧವಾಗಿ ಈಜಿಪ್ಟ್ ಜೊತೆಗೆ ಮಾತುಕತೆ ಜಾರಿಯಲ್ಲಿದ್ದು, ಆಫ್ರಿಕಾ ದೇಶಗಳ ಮಾರುಕಟ್ಟೆಯ ಮೇಲೂ ಭಾರತ ಲಕ್ಷ್ಯ ಇರಿಸಿದೆ ಎನ್ನಲಾಗಿದೆ.
ಕಳೆದ ಐದು ವರ್ಷಗಳಲ್ಲಿ, ದೇಶದ ರಕ್ಷಣಾ ರಫ್ತು ಸುಮಾರು ಆರು ಪಟ್ಟು ಹೆಚ್ಚಿದ್ದು, ೧,೫೦೦ ಕೋಟಿ ರೂ.ಗಳಿಂದ ೯,೦೦೦ ಕೋಟಿ ರೂ.ಗಳಿಗೆ ಏರಿದೆ. ೮೪ ದೇಶಗಳ ಮಾರುಕಟ್ಟೆಯನ್ನು ಈ ರಫ್ತು ಪ್ರಧಾನವಾಗಿ ಅವಲಂಬಿಸಿದೆ. ಇದರಿಂದಾಗಿ, ರಕ್ಷಣಾ ಕ್ಷೇತ್ರದ ರಫ್ತು ವಿಭಾಗದಲ್ಲಿ, ವಿಶ್ವದ ಮೊದಲ ೨೫ ದೇಶಗಳ ಪೈಕಿ ಭಾರತವೂ ಒಂದು ಎನಿಸಿದೆ.
ಇದನ್ನೂ ಓದಿ: Agnipath | ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಕ್ಷಣಾ ಇಲಾಖೆ