ನವ ದೆಹಲಿ: ಭಾರತೀಯ ವಾಯುಪಡೆಗೆ ಸೇರಿದ 2 ಯುದ್ಧ ವಿಮಾನಗಳು (IAF Fighter Jets Crash), ಮಧ್ಯಪ್ರದೇಶದ ಮೊರೆನಾದಲ್ಲಿರುವ ಪಹಡ್ಗಡ್ ಎಂಬಲ್ಲಿ ಏಕಕಾಲದಲ್ಲಿ ಪತನಗೊಂಡಿವೆ. ಈ ಎರಡೂ ವಿಮಾನಗಳು ಗ್ವಾಲಿಯರ್ನ ವಾಯುನೆಲೆಯಿಂದ ಟೇಕ್ ಆಫ್ ಆಗಿ, ತಾಲೀಮು ಹಾರಾಟ ನಡೆಸುತ್ತಿದ್ದವು ಎಂದು ವರದಿಯಾಗಿದೆ. ವಿಮಾನಗಳು ಪತನಗೊಂಡು ಬೆಂಕಿಯಿಂದ ಹೊತ್ತಿ ಉರಿದಿವೆ. ಅದೃಷ್ಟಕ್ಕೆ ಪೈಲೆಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಇಬ್ಬರೂ ಪೈಲೆಟ್ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಇನ್ನು ವಾಯುಪಡೆಯ ಹೆಚ್ಚಿನ ಸಿಬ್ಬಂದಿ ವಿಮಾನ ಪತನವಾದ ಸ್ಥಳಕ್ಕೆ ಆಗಮಿಸುತ್ತಿದ್ದಾರೆ ಎಂದೂ ವರದಿಯಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಗಾಗಲೇ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.
ಇಂದು ಬೆಳಗ್ಗೆ ಗ್ವಾಲಿಯರ್ ವಾಯುನೆಲೆಯಿಂದ ಇಂದು ಮುಂಜಾನೆ 5.30ರ ಹೊತ್ತಿಗೆ ಟೇಕ್ ಆಫ್ ಆದ ಸುಖೋಯ್-30 ಮತ್ತು ಮಿರಾಜ್ 2000 ಯುದ್ಧ ವಿಮಾನಗಳು ತಾಲೀಮು ಹಾರಾಟ ನಡೆಸುತ್ತಿದ್ದವು. ಆದರೆ ಇವು ಕೆಲವೇ ಹೊತ್ತಲ್ಲಿ ಪತನಗೊಂಡಿವೆ. ಈ ಎರಡೂ ವಿಮಾನಗಳು ಹಾರಾಟ ನಡೆಸುತ್ತಿದ್ದಾಗ ಆಕಾದಲ್ಲಿ ಪರಸ್ಪರ ಡಿಕ್ಕಿಯಾಗಿ ಬಿದ್ದಿವೆಯೋ ಅಥವಾ ಬೇರೆನಾದರೂ ಕಾರಣ ಇದೆಯೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನು ಪರಸ್ಪರ ಡಿಕ್ಕಿಯಾದ ಪರಿಣಾಮ ಎರಡೂ ವಿಮಾನಗಳು ಏಕಕಾಲದಲ್ಲಿ ಪತನಗೊಂಡಿವೆ ಎಂದು ಕೆಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನು ಓದಿ: Plane Crash | ತರಬೇತಿ ವಿಮಾನ ಪತನ, ಹಿರಿಯ ಪೈಲಟ್ ಸಾವು, ಮತ್ತೊಬ್ಬರಿಗೆ ತೀವ್ರ ಗಾಯ