Site icon Vistara News

Indian Flag: ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಧ್ವಜಾರೋಹಣಗಳ ಪ್ರಕ್ರಿಯೆ ಬೇರೆ ಬೇರೆ ಅನ್ನೋದು ಗೊತ್ತಾ?

ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನ (Independence day) ಮತ್ತು ಜನವರಿ 26 ಗಣರಾಜ್ಯೋತ್ಸವ ದಿನ (Republic Day) ನಾವು ರಾಷ್ಟ್ರ ಧ್ವಜವನ್ನು (Indian Flag) ಹಾರಿಸುತ್ತೇವೆ. ಧ್ವಜಾರೋಹಣ, ಮೆರವಣಿಗೆ, ದೇಶಭಕ್ತಿ ಗೀತೆಗಳ ಗಾಯನ ಸೇರಿದಂತೆ ಈ ಎರಡೂ ಕಾರ್ಯಕ್ರಮಗಳು ಬಹುತೇಕ ಒಂದೇ ರೀತಿ ಎಂದೆನಿಸಿದರೂ ಇದರಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.

ಆಗಸ್ಟ್ 15 ರಂದು ಭಾರತವು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಇದು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಗುರುತಿಸುವ ರಾಷ್ಟ್ರೀಯ ದಿನವಾಗಿದೆ. ಜನವರಿ 26 ಗಣರಾಜ್ಯೋತ್ಸವ. ಇದು ಭಾರತೀಯ ಸಂವಿಧಾನದ ಅಂಗೀಕಾರವನ್ನು ಸೂಚಿಸುವ ದಿನವಾಗಿದೆ.


ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಪ್ರಧಾನ ಮಂತ್ರಿಗಳು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳು ಧ್ವಜಾರೋಹಣ ಮಾಡುತ್ತಾರೆ. ಈ ಎರಡು ವಿಭಿನ್ನ ಆಚರಣೆಗಳು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಯಾಣ ಮತ್ತು ಸಾಂವಿಧಾನಿಕ ತತ್ತ್ವಗಳನ್ನು ಸಂಕೇತಿಸುತ್ತವೆ.

ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಅವರ ಕೊಡುಗೆಗಳನ್ನು ಗೌರವಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತದೆ.

ಸ್ವಾತಂತ್ರ್ಯ ದಿನದಂದು, “ಹೋಸ್ಟಿಂಗ್” ಎಂಬ ಪದವನ್ನು ಬಳಸಲಾಗುತ್ತದೆ. ಯಾಕೆಂದರೆ ಧ್ವಜವು ಕಂಬದ ಕೆಳಭಾಗದಲ್ಲಿರುತ್ತದೆ. ಪ್ರಧಾನ ಮಂತ್ರಿಯವರು ಅದನ್ನು ಮೇಲಕ್ಕೆ ಏರಿಸಿ ಹಾರಿಸುತ್ತಾರೆ. ಈ ಕ್ರಿಯೆಯು ಹೊಸ ರಾಷ್ಟ್ರದ ಉದಯ, ದೇಶಭಕ್ತಿ ಮತ್ತು ವಸಾಹತುಶಾಹಿ ಆಡಳಿತದಿಂದ ಸ್ವಾತಂತ್ರ್ಯವನ್ನು ಸಂಕೇತಿಸುತ್ತದೆ.


1950ರಲ್ಲಿ ಭಾರತೀಯ ಸಂವಿಧಾನದ ಅಂಗೀಕಾರವನ್ನು ಸೂಚಿಸುವ ಗಣರಾಜ್ಯೋತ್ಸವದಂದು ಮೇಲೆ ಕಟ್ಟಿರುವ ಧ್ವಜವನ್ನು ಬಿಚ್ಚಲಾಗುತ್ತದೆ. ಅದು ಕಂಬದ ಮೇಲ್ಭಾಗದಲ್ಲಿ ಮಡಚಿದ ಸ್ಥಿತಿಯಲ್ಲಿ ಇರುತ್ತದೆ. ಬಳಿಕ ಅದನ್ನು ಅನಾವರಣಗೊಳಿಸಲಾಗುತ್ತದೆ. ಇದು ವಸಾಹತುಶಾಹಿ ಆಳ್ವಿಕೆಯಿಂದ ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯಕ್ಕೆ ಪರಿವರ್ತನೆಯನ್ನು ಪ್ರದರ್ಶಿಸುವ ಸಂವಿಧಾನದಲ್ಲಿ ಸೂಚಿಸಲಾದ ತತ್ತ್ವ ಗಳಿಗೆ ಬದ್ಧತೆಯನ್ನು ಪ್ರತಿನಿಧಿಸುತ್ತದೆ.

ಎರಡೂ ಸಮಾರಂಭಗಳಲ್ಲಿ ತ್ರಿವರ್ಣ ಧ್ವಜವನ್ನು ಹೇಗೆ ಇರಿಸಲಾಗುತ್ತದೆ ಎಂಬುದರಲ್ಲಿ ನಿರ್ಣಾಯಕವಾಗಿದೆ. ಸ್ವಾತಂತ್ರ್ಯ ದಿನದಂದು ಧ್ವಜವನ್ನು ಕಂಬದ ಕೆಳಭಾಗದಲ್ಲಿ ಇರಿಸಿ ಮೇಲಕ್ಕೆ ಏರಿಸಿ ಬಳಿಕ ಅನಾವರಣಗೊಳಿಸಲಾಗುತ್ತದೆ.

ಗಣರಾಜ್ಯ ದಿನದಂದು, ಧ್ವಜವನ್ನು ಮಡಚಿ ಕಂಬದ ಮೇಲ್ಭಾಗದಲ್ಲಿ ಜೋಡಿಸಿಟ್ಟು ಅನಂತರ ಅದನ್ನು ರಾಷ್ಟ್ರಪತಿಗಳು ಅನಾವರಣಗೊಳಿಸುತ್ತಾರೆ. ಇಲ್ಲಿ ಧ್ವಜವನ್ನು ಮೇಲಕ್ಕೆ ಏರಿಸಲಾಗುವುದಿಲ್ಲ.

ಸ್ವಾತಂತ್ರ್ಯ ದಿನದಂದು ಧ್ವಜಾರೋಹಣವು ಸಾಮಾನ್ಯವಾಗಿ ರಾಷ್ಟ್ರೀಯ ಗೀತೆಯನ್ನು ನುಡಿಸುವಾಗ ಧ್ವಜವನ್ನು ಏರಿಸುವ ಮಿಲಿಟರಿ ಅಥವಾ ನಾಗರಿಕ ಗೌರವ ಸಿಬ್ಬಂದಿಯೊಂದಿಗೆ ವಿಧ್ಯುಕ್ತ ಕಾರ್ಯಕ್ರಮವನ್ನು ಒಳಗೊಂಡಿರುತ್ತದೆ. ಈ ಸಾಂಕೇತಿಕ ಕಾರ್ಯವು ಹೊಸ ರಾಷ್ಟ್ರದ ಉದಯವನ್ನು ಸೂಚಿಸುತ್ತದೆ. ದೇಶಭಕ್ತಿಯ ಭಾವನೆಗಳನ್ನು ಜೀವಂತಗೊಳಿಸುತ್ತದೆ ಮತ್ತು ವಸಾಹತುಶಾಹಿ ಆಳ್ವಿಕೆಯ ಅಂತ್ಯವನ್ನು ಗುರುತಿಸುತ್ತದೆ.

ಇದನ್ನೂ ಓದಿ: Independence Day 2024: 2036ರಲ್ಲಿ ಭಾರತದಲ್ಲೇ ಒಲಿಂಪಿಕ್ಸ್ ಕ್ರೀಡಾಕೂಟ? ಪ್ರಧಾನಿ ಮೋದಿ ಮಹತ್ವದ ಘೋಷಣೆ

ರಾಷ್ಟ್ರಪತಿಗಳಿಂದ ಗಣರಾಜ್ಯೋತ್ಸವದ ಧ್ವಜಾರೋಹಣವು ಸಂವಿಧಾನದ ನವೀಕೃತ ಬದ್ಧತೆಯನ್ನು ಒತ್ತಿಹೇಳುತ್ತದೆ. ಧ್ವಜ ಅನಾವರಣವು ಸಾರ್ವಭೌಮ ಮತ್ತು ಪ್ರಜಾಪ್ರಭುತ್ವದ ತತ್ತ್ವಗಳಿಗೆ ದೇಶದ ಸಮರ್ಪಣೆಯನ್ನು ಸಂಕೇತಿಸುತ್ತದೆ.
ಈ ಆಚರಣೆಗಳನ್ನು ಅರ್ಥಮಾಡಿಕೊಳ್ಳುವುದು ಬಹುಮುಖ್ಯ. ಇದು ಭಾರತದ ರಾಷ್ಟ್ರೀಯ ದಿನಗಳ ಮಹತ್ವವನ್ನು ಸಾರುತ್ತದೆ. ಪ್ರತಿಯೊಂದೂ ದೇಶದ ಇತಿಹಾಸ ಮತ್ತು ಅದರ ಮೌಲ್ಯಗಳ ಮಹತ್ವದ ಅಂಶಗಳನ್ನು ಎತ್ತಿ ತೋರಿಸುತ್ತದೆ. “ಧ್ವಜ ಹಾರಿಸುವುದು” ಮತ್ತು “ಧ್ವಜ ಅರಳಿಸುವುದು” ನಡುವಿನ ವ್ಯತ್ಯಾಸವು ಇಲ್ಲಿ ನಾವು ಗಮನಿಸಬೇಕಾಗುತ್ತದೆ.

Exit mobile version