ಮುಂಬೈ: ಭಾರತದಲ್ಲಿ ಅತಿ ವೇಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು (Indian Railway) ಸಂಚಾರ ಆರಂಭಿಸಿವೆ. ಈ ರೈಲಿಗೆಂದೇ ಹಲವಾರು ಲೋಕೊಮೋಟಿವ್ ಪೈಲಟ್(ಅತಿ ವೇಗದ ರೈಲುಗಳ ಚಾಲಕರು)ಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಇದೀಗ ಮಹಾರಾಷ್ಟ್ರದ ಸುರೇಖಾ ಯಾದವ್ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಚಲಾಯಿಸಿದ್ದು, ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಚಲಾಯಿಸಿದ ಮೊದಲ ಮಹಿಳಾ ಲೋಕೊಮೋಟಿವ್ ಪೈಲಟ್ ಆಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: Loco Pilot: ಇನ್ನೇನು ರೈಲು ಹೊರಡುವಾಗಲೇ ಹಳಿ ದಾಟುತ್ತಿದ್ದ ವೃದ್ಧ ಎಡವಿ ಬಿದ್ದ; ಮುಂದೇನಾಯಿತು?
ಸುರೇಖಾ ಅವರು ಸೋಮವಾರ ಸೊಲಾಪುರದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ನಿಲ್ದಾಣಕ್ಕೆ ವಂದೇ ಭಾರತ್ ರೈಲನ್ನು ಸಂಚರಿಸಿದ್ದಾರೆ. ಸೊಲಾಪುರದಿಂದ ನಿಗದಿತ ಸಮಯಕ್ಕೆ ಹೊರಟ ರೈಲು ಮುಂಬೈ ರೈಲು ನಿಲ್ದಾಣಕ್ಕೆ ನಿಗದಿತ ಸಮಯಕ್ಕಿಂತ ಐದು ನಿಮಿಷ ಮೊದಲೇ ಬಂದಿರುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.
ಸುರೇಖಾ ಅವರ ಕುರಿತಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಟ್ವೀಟ್ ಮಾಡಿದ್ದು, “ನಾರಿ ಶಕ್ತಿಯ ವಂದೇ ಭಾರತ್” ಎಂದು ಹೇಳಿದ್ದಾರೆ. ಸತಾರಾ ಮೂಲದವರಾಗಿರುವ ಸುರೇಖಾ ಅವರು 1988ರಲ್ಲಿ ಭಾರತದ ಮೊದಲ ಮಹಿಳಾ ರೈಲು ಚಾಲಕಿಯಾಗಿ ಹೊರಹೊಮ್ಮಿದವರು. ಅವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.