ನವ ದೆಹಲಿ: ಒಡಿಶಾದ ಬಹನಾಗದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟಿರುವ ತಮ್ಮ ಸಂಬಂಧಿಕರನ್ನು ಹುಡುಕುತ್ತಿರುವ ಕುಟುಂಬಗಳಿಗೆ ಸಹಾಯ ಮಾಡಲು ಭಾರತೀಯ ರೈಲ್ವೆ ಒಡಿಶಾ ಸರ್ಕಾರದ ಸಹಯೋಗದೊಂದಿಗೆ ವ್ಯವಸ್ಥೆ ಕಲ್ಪಿಸಿದೆ. ಇದೇ ವೇಳೆ ರೈಲ್ವೆ ಅಧಿಕಾರಿಗಳು ಮೃತರ ಸಂಬಂಧಿಕರನ್ನು ಪತ್ತೆಹಚ್ಚಲು ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆ 139 ಮತ್ತು ಭುವನೇಶ್ವರ ನಗರಪಾಲಿಕೆ ಸಹಾಯವಾಣಿ ಸಂಖ್ಯೆ -18003450061/1929ಕ್ಕೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.
ಒಡಿಶಾ ಸರ್ಕಾರದ ಬೆಂಬಲದೊಂದಿಗೆ, ಮೃತರ ಫೋಟೋಗಳು, ಆಸ್ಪತ್ರೆಗಳಿಗೆ ದಾಖಲಾದವರು ಮತ್ತು ಅಪರಿಚಿತ ಶವಗಳ ಕುರಿತ ಮಾಹಿತಿ ಲಭ್ಯವಾಗುವಂತೆ ಮಾಡಲಾಗಿದೆ. ಮೃತರ ಫೋಟೋಗಳು, ಆಸ್ಪತ್ರೆಗೆ ದಾಖಲಾದ ಪ್ರಯಾಣಿಕರ ಪಟ್ಟಿಗಳು ಮತ್ತು ಪೀಡಿತ ಪ್ರಯಾಣಿಕರ ಕುಟುಂಬಗಳು, ಸ್ನೇಹಿತರು ಮತ್ತು ಹಿತೈಷಿಗಳು ಹಾಗೂ ಅಪರಿಚಿತ ಶವಗಳ ಮಾಹಿತಿಯನ್ನು ಈ ಲಿಂಕ್ನಲ್ಲಿ ನೀಡಲಾಗಿದೆ.
ರೈಲ್ವೆ ಸಹಾಯವಾಣಿ ಸಂಖ್ಯೆ 139ರ ಮೂಲಕ ಪ್ರಯಾಣಿಕರ ಕುಟುಂಬಗಳು ಮತ್ತು ಸಂಬಂಧಿಕರರನ್ನು ಸಂಪರ್ಕಿಸಬಹುದು. ಹಿರಿಯ ರೈಲ್ವೆ ಅಧಿಕಾರಿಗಳು ಸಹಾಯವಾಣಿಯನ್ನು ನಿರ್ವಹಿಸುತ್ತಿದ್ದಾರೆ.
ಭುವನೇಶ್ವರದ ಮುನ್ಸಿಪಲ್ ಕಮಿಷನರ್ ಕಚೇರಿಯ ಅಧಿಕಾರಿಗಳು ಮತ್ತು ವಾಹನಗಳ ಸಹಾಯದಿಂದ ಜನರನ್ನು ಅಗತ್ಯಕ್ಕೆ ತಕ್ಕಂತೆ ಆಸ್ಪತ್ರೆಗಳು ಅಥವಾ ಶವಾಗಾರಗಳಿಗೆ ಕಳುಹಿಸುವುದಕ್ಕೆ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.
ಟಿಕೆಟ್ ರಹಿತರಿಗೆ ಪರಿಹಾರ
ಒಡಿಶಾದಲ್ಲಿ ಸಂಭವಿಸಿದ ಅಪಘಾತದಲ್ಲಿ (Odisha Train Accident) ಸಿಲುಕಿರುವ ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣಿಸಿದ್ದ ಟಿಕೆಟ್ ರಹಿತ ಪ್ರಯಾಣಿಕರಿಗೂ ಪರಿಹಾರ ನೀಡಲಾಗುವುದು ಎಂದು ರೈಲ್ವೆ ಇಲಾಖೆ ಭಾನುವಾರ ತಿಳಿಸಿದೆ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿದೆ ಎಂದು ಅಧಿಕಾರಿಗಳು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. “ಪ್ರಯಾಣಿಕರು ಟಿಕೆಟ್ ಇಲ್ಲದೇ ಪ್ರಯಾಣ ಮಾಡಿದ್ದರೂ ಅವರಿಗೆ ಪರಿಹಾರ ನೀಡಲಾಗುವುದು” ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರೈಲು ದುರಂತ ಬಳಿಕ ಪರಿಹಾರ ಕಾರ್ಯ; ರೈಲ್ವೆ ಸಚಿವರ ನಡೆ ಅನುಕರಣೀಯ
ಅದೇ ರೀತಿ ಸುದ್ದಿಗಾರರೊಂದಿಗೆ ಮಾತನಾಡಿದ ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ ಸದಸ್ಯ ಜಯ ವರ್ಮಾ ಸಿನ್ಹಾ, ಆಸ್ಪತ್ರೆಗಳಲ್ಲಿ ದಾಖಲಾದ ಪ್ರತಿಯೊಬ್ಬ ಗಾಯಾಳುವಿಗೆ ತಮ್ಮ ಸಂಬಂಧಿಕರು ಅಥವಾ ಆಪ್ತರನ್ನು ಪತ್ತೆ ಹಚ್ಚುವುದಕ್ಕೆ ನೆರವಾಲು ಸ್ಕೌಟ್ ಅಥವಾ ಗೈಡ್ಸ್ ನೆರವು ನೀಡಲಾಗಿದೆ ಎಂಬುದಾಗಿ ಹೇಳಿದ್ದಾರೆ.
ಸಹಾಯವಾಣಿ ಸಂಖ್ಯೆ 139 ಲಭ್ಯವಿದೆ. ಈ ಸಂಪರ್ಕ ಸಂಖ್ಯೆ ಮೂಲಕ ಹಿರಿಯ ರೈಲ್ವೆ ಅಧಿಕಾರಿಗಳು ಕರೆಗಳಿಗೆ ಉತ್ತರಿಸುತ್ತಿದ್ದಾರೆ. ಸಾಧ್ಯವಾದಷ್ಟು ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರ್ಮಾ ಇದೇ ವೇಳೆ ಮಾಹಿತಿ ನೀಡಿದ್ದಾರೆ.