ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸಲು ಸ್ಥಳೀಯ ಆಡಳಿತವು ಕಾರ್ಯಾಚರಣೆ ಕೈಗೊಂಡ ಬೆನ್ನಲ್ಲೇ ದೆಹಲಿಯಲ್ಲಿ ರೈಲ್ವೆ ಇಲಾಖೆ ಜಾಗದಲ್ಲಿ ನಿರ್ಮಿಸಿದ ಎರಡು ಮಸೀದಿಗಳನ್ನು (Mosques In Delhi) ತೆರವುಗೊಳಿಸಬೇಕು ಎಂದು ಮಸೀದಿಗಳ ಆಡಳಿತ ಮಂಡಳಿಗಳಿಗೆ ರೈಲ್ವೆ ಇಲಾಖೆ ನೋಟಿಸ್ ನೀಡಿದೆ. ಹಾಗೆಯೇ, ಎರಡೂ ಮಸೀದಿಗಳನ್ನು 15 ದಿನದಲ್ಲಿ ಕೆಡವಬೇಕು ಎಂದು ಗಡುವು ನೀಡಿದೆ.
“ಬೆಂಗಾಲಿ ಮಾರ್ಕೆಟ್ ಮಸೀದಿ ಹಾಗೂ ಟಕಿಯಾ ಬಬ್ಬರ್ ಶಾಹ್ ಮಸೀದಿಯನ್ನು ರೈಲ್ವೆ ಇಲಾಖೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ. ಎರಡೂ ಮಸೀದಿಗಳನ್ನು 15 ದಿನದಲ್ಲಿ ಕೆಡವಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಮಸೀದಿ ಸಮಿತಿಗಳಿಗೆ ಜುಲೈ 22ರಂದು ರೈಲ್ವೆ ಇಲಾಖೆ ನೋಟಿಸ್ ನೀಡಿದೆ. ಆದರೆ, ರೈಲ್ವೆ ಇಲಾಖೆ ನೋಟಿಸ್‌ಗೆ ಮಸೀದಿ ಸಮಿತಿಗಳು ಆಕ್ಷೇಪ ವ್ಯಕ್ತಪಡಿಸಿವೆ. “ಎರಡೂ 100 ವರ್ಷಕ್ಕಿಂತ ಹಳೆಯ ಮಸೀದಿಗಳಾಗಿವೆ. ದೇಶದ ಸ್ಮಾರಕಗಳನ್ನು ತೆರವುಗೊಳಿಸುವುದು ಸರಿಯಲ್ಲ” ಎಂದು ಪ್ರತಿಕ್ರಿಯಿಸಿವೆ.
ಕಳೆದ ಏಪ್ರಿಲ್‌ನಲ್ಲಿಯೇ ದೆಹಲಿಯ ಬೆಂಗಾಲಿ ಮಾರುಕಟ್ಟೆ ಪ್ರದೇಶವನ್ನು ನಾಶಪಡಿಸಲಾಗಿತ್ತು. ಎಲ್ಲ ಕಟ್ಟಡ, ಮಳಿಗೆಗಳನ್ನು ತೆರವುಗೊಳಿಸಲಾಗಿತ್ತು. ಅಕ್ರಮವಾಗಿ ಸರ್ಕಾರದ ಜಾಗವನ್ನು ಅತಿಕ್ರಮಣ ಮಾಡದ ಹಿನ್ನೆಲೆಯಲ್ಲಿ ದೆಹಲಿ ಮಹಾನಗರ ಪಾಲಿಕೆಯು ತೆರವು ಕಾರ್ಯಾಚರಣೆ ಕೈಗೊಂಡಿತ್ತು. ಆದರೆ, ನೋಟಿಸ್ ಇಲ್ಲದ ಕಾರಣ ಮಸೀದಿಗಳನ್ನು ತೆರವುಗೊಳಿಸಲು ಆಗಿರಲಿಲ್ಲ. ಈಗ ರೈಲ್ವೆ ಇಲಾಖೆಯು ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Gyanvapi Case: ಜ್ಞಾನವಾಪಿ ಮಸೀದಿಯಲ್ಲಿ ವೈಜ್ಞಾನಿಕ ಸಮೀಕ್ಷೆಗೆ ಕೋರ್ಟ್ ಅಸ್ತು; ಹಿಂದುಗಳಿಗೆ ಭಾರಿ ಮುನ್ನಡೆ
ಸರ್ಕಾರದ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಮಸೀದಿ ನಿರ್ಮಿಸಲಾಗಿದೆ. 1947ರ ಬಳಿಕ ಮಸೀದಿಯನ್ನು ಹಲವು ಬಾರಿ ನವೀಕರಿಸಲಾಗಿದೆ. ಇದು ಸುಮಾರು 250 ವರ್ಷಗಳಷ್ಟು ಹಳೆಯ ಮಸೀದಿ ಎಂದು ತಿಳಿದುಬಂದಿದೆ. ಆದಾಗ್ಯೂ, ಮಸೀದಿಯ ಸಮಿತಿಗಳು ತೆರವುಗೊಳಿಸಲು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ರೈಲ್ವೆ ಇಲಾಖೆ ಹಾಗೂ ದೆಹಲಿ ನಗರ ಪಾಲಿಕೆಯ ಕ್ರಮ ಏನಿರುತ್ತದೆ ಎಂಬುದು ಕುತೂಹಲ ಕೆರಳಿಸಿದೆ.