ಪುಲ್ವಾಮಾದಲ್ಲಿ 2019ರ ಫೆ.14ರಂದು ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕನೊಬ್ಬ ನಡೆಸಿದ್ದ ಆತ್ಮಾಹುತಿ ದಾಳಿ (Pulwama Attack) ಯಲ್ಲಿ ಸಿಆರ್ಪಿಎಫ್ನ 40 ಯೋಧರು ಮೃತಪಟ್ಟಿದ್ದರು. ಅದಾಗಿ 10ನೇ ದಿನಕ್ಕೆ ಮತ್ತೊಂದು ಅದೇ ಮಾದರಿಯ ದಾಳಿ ನಡೆಸಲು ಉಗ್ರರು ರೂಪಿಸಿದ್ದ ಸಂಚನ್ನು ಭಾರತೀಯ ಭದ್ರತಾ ಪಡೆ ಸಿಬ್ಬಂದಿ ವಿಫಲಗೊಳಿಸಿದ್ದರು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ. ಫೆ.24ರಂದು ಮತ್ತೊಂದು ಆತ್ಮಾಹುತಿ ದಾಳಿಗೆ ಭಯೋತ್ಪಾದಕರು ಸಜ್ಜಾಗಿದ್ದರು. ಈ ಸಂಚಿನಲ್ಲಿ ಭಾಗಿಯಾಗಿದ್ದ ಇಬ್ಬರು ಪಾಕಿಸ್ತಾನಿ ಉಗ್ರರು ಸೇರಿ, ಮೂವರು ಉಗ್ರರನ್ನು ಭಾರತೀಯ ಸೇನಾ ಸಿಬ್ಬಂದಿ ಹತ್ಯೆಗೈಯುವ ಮೂಲಕ ದೊಡ್ಡಮಟ್ಟದ ದಾಳಿ ತಪ್ಪಿಸಿದ್ದಾರೆ ಎಂಬ ವಿಷಯವನ್ನು ಚಿನಾರ್ ಕಾರ್ಪ್ಸ್ನ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ದಿಲ್ಲಾನ್ ಅವರು ತಮ್ಮ ‘ಕಿತನೆ ಗಾಜಿ ಆಯೆ, ಕಿತನೆ ಗಾಜಿ ಗಯೆ’ ಪುಸ್ತಕದಲ್ಲಿ ಬರೆದಿದ್ದಾರೆ.
ಫೆ.14ರ ದಾಳಿಯ ಹತ್ತು ದಿನಗಳ ನಂತರ ಮತ್ತೊಂದು ದಾಳಿಯನ್ನು ನಡೆಸಲು ಉಗ್ರರು ಸಂಚು ರೂಪಿಸಿದ್ದು, ಅದು ವಿಫಲಗೊಂಡಿರುವ ವಿಷಯ ಅದೆಷ್ಟೋ ಜನರಿಗೆ ಗೊತ್ತೇ ಇಲ್ಲ. ಪುಲ್ವಾಮಾ ದಾಳಿಯ ನಂತರ ಆತ್ಮಾಹುತಿ ಬಾಂಬರ್ವೊಬ್ಬ ವಿಡಿಯೊ ಮಾಡಿದ್ದ. ಅದರಲ್ಲಿ ಸ್ಫೋಟಕ, ಮಾರಕಾಸ್ತ್ರಗಳನ್ನು ಪ್ರದರ್ಶಿಸುತ್ತ, ಮತ್ತೊಂದು ದಾಳಿಯ ಸುಳಿವು ಕೊಟ್ಟಿದ್ದ. ಅದರ ಬೆನ್ನಲ್ಲೇ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದರು. ಉಗ್ರರ ಮತ್ತೊಂದು ದಾಳಿಯ ವಿಷಯ ಬಹಿರಂಗವಾಗುವುದನ್ನು ಗುಪ್ತಚರ ಇಲಾಖೆ ಅಧಿಕಾರಿಗಳು ಪ್ರತಿಬಂಧಿಸಿದ್ದರು. ಅದಾದ ಬಳಿಕವೇ ಸಂಚುಕೋರ ಭಯೋತ್ಪಾದಕ ಘಟಕದ ಮೇಲೆ ದಾಳಿ ನಡೆಸಿ, ಕೊಲ್ಲಲಾಯಿತು. ಈ ಮೂಲಕ ಮತ್ತೊಂದು ಸೂಸೈಡ್ ಬಾಂಬ್ ದಾಳಿ ತಪ್ಪಿತ್ತು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Pulwama Attack: ಪುಲ್ವಾಮಾ ದಾಳಿಯಲ್ಲಿ ಮಡಿದ ಇಬ್ಬರು ಯೋಧರ ಮಕ್ಕಳಿಗೆ ಟೀಮ್ ಇಂಡಿಯಾ ಮಾಜಿ ಆಟಗಾರ ಶಿಕ್ಷಣದ ವ್ಯವಸ್ಥೆ
ಪುಲ್ವಾಮಾದಲ್ಲಿ ದಾಳಿ ಮುಗಿದ ಬೆನ್ನಲ್ಲೇ, ಅದೇ ಜೈಷೆ ಮೊಹಮ್ಮದ್ ಸಂಘಟನೆಯ ಉಗ್ರರು ಮತ್ತೊಂದು ದಾಳಿಯನ್ನು ಜಮ್ಮು-ಕಾಶ್ಮೀರದ ತುರಿಗಮ್ ಗ್ರಾಮದಲ್ಲಿ ಮಾಡಲು ಯೋಜನೆ ರೂಪಿಸಿದ್ದರು. ಅದೇ ಗ್ರಾಮದಲ್ಲೇ ಉಗ್ರ ಘಟಕ ಇತ್ತು. ಗುಪ್ತಚರ ಇಲಾಖೆಯಿಂದ ಮಾಹಿತಿ ಬರುತ್ತಿದ್ದಂತೆ, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಭಾರತೀಯ ಸೇನೆ ಸಿಬ್ಬಂದಿ ಜಂಟಿಯಾಗಿ, ತ್ವರಿತವಾಗಿ ಕಾರ್ಯಾಚರಣೆ ನಡೆಸಿದರು ಎಂದು ಕೆಜೆಎಸ್ ದಿಲ್ಲಾನ್ ಬರೆದಿದ್ದಾರೆ.