ನವ ದೆಹಲಿ: ಬಾಲಿವುಡ್ ನಟಿ ಕಾಜೋಲ್ (Actor Kajol) ಭಾರತದ ರಾಜಕೀಯ ನಾಯಕರ ಬಗ್ಗೆ ಕಾಮೆಂಟ್ ಮಾಡುವ ವೇಳೆ ಅನಕ್ಷರಸ್ಥರು ಎಂಬುದನ್ನು ಉಲ್ಲೇಖಿಸುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ. ಭಾರತ ಹಿಂದುಳಿವುದಕ್ಕೆ ಅನಕ್ಷರಸ್ಥ ನಾಯಕರೇ ಕಾರಣ ಎಂದು ಅವರು ನೀಡಿರುವ ಹೇಳಿಕೆಗೆ ವಿರೋಧ ಹಾಗ ಬೆಂಬಲ ಏಕಕಾಲಕ್ಕೆ ವ್ಯಕ್ತಗೊಂಡಿವೆ. ಅವರ ಮಾತುಗಳು ಹಲವಾರು ಜನರಿಂದ ಮತ್ತು ರಾಜಕೀಯ ವ್ಯಕ್ತಿಗಳಿಂದ ಟೀಕೆಗೆ ಗುರಿಯಾಗಿವೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಕಾಜೋಲ್, ಜನರು ಸಂಪ್ರದಾಯಗಳಲ್ಲೇ ಮುಳುಗಿರುವುದರಿಂದ ಮತ್ತು ಸರಿಯಾದ ಶಿಕ್ಷಣ ಪಡೆಯದ ಕಾರಣ ಭಾರತದಲ್ಲಿ ಪ್ರಗತಿ ನಿಧಾನವಾಗಿದೆ ಎಂದು ಹೇಳಿದರು. ಅವರು ತಮ್ಮ ಹೇಳಿಕೆಯಲ್ಲಿ ರಾಜಕೀಯ ನಾಯಕರನ್ನು ಸಹ ಸೇರಿಸಿದ್ದಾರೆ. ಅವರ ಮುಂಬರುವ ಕಾರ್ಯಕ್ರಮ ದಿ ಟ್ರಯಲ್ ನ ಪ್ರಚಾರ ಸಂದರ್ಶನದ ವೇಳೆ ಈ ಮಾತನ್ನು ಉಲ್ಲೇಖಿಸಿದ್ದರು.
ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ ಬಳಕೆದಾರರೊಬ್ಬರು, ಸ್ವಜನಪಕ್ಷಪಾತದ ಫಲ ಪಡೆದುಕೊಂಡಿರುವ ಕಾಜೋಲ್ ಸ್ವತಃ ಅನಕ್ಷರಸ್ಥೆ. ಅರ್ಧಕ್ಕೆ ಶಾಲೆ ಬಿಟ್ಟವರು. ಆಕೆಯ ಪತಿ ಕ್ಯಾನ್ಸರ್ ಮಾರುವವರು ಎಂದು ಬರೆದುಕೊಂಡಿದ್ದಾರೆ. ಕಾಜೋಲ್ ಸ್ವತಃ 8 ನೇ ತರಗತಿಯ ನಂತರ ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ..
ಕಾಜೋಲ್ ತಾವು ಉನ್ನತ ಶಿಕ್ಷಣ ಪಡೆದವರು ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಅವರು ಸೀಮಿತ ಶಿಕ್ಷಣವನ್ನು ಹೊಂದಿದ್ದರು ಒಪ್ಪುತ್ತಾರೆ. ಅವರು ನಕಲಿ ಪದವಿಗಳನ್ನು ಹೊಂದಿಲ್ಲ. ಕಾಜೋಲ್ ಯಾವಾಗಲೂ ನನ್ನ ನೆಚ್ಚಿನ ನಟಿ. “ಅವಳು ಸಾಕಷ್ಟು ವಿದ್ಯಾವಂತಳಲ್ಲ ಆದರೆ ಅವಳು ದೇಶವನ್ನು ನಡೆಸುತ್ತಿಲ್ಲ. ಅವಳು ತನ್ನ ಸ್ವಂತ ವ್ಯವಹಾರ ಮತ್ತು ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ತನ್ನ ಶಿಕ್ಷಣವನ್ನು ಮುಂದುವರಿಸಿದ್ದಾರೆ. ಅವಿದ್ಯಾವಂತ ರಾಜಕಾರಣಿಗಳು ಮಾಡುತ್ತಿರುವಂತೆ ದೇಶದ ಜನರಿಗೆ ಸುಳ್ಳು ಭರವಸೆಗಳನ್ನು ಹೇಳುತ್ತಿಲ್ಲ, ಅವಳ ಖ್ಯಾತಿಯನ್ನು ಹಾಳುಮಾಡಲು ಪ್ರಯತ್ನಿಸಬೇಡಿ” ಎಂದು ಬಳಕೆದಾರರೊಬ್ಬರು ಅವರ ಬೆಂಬಲಕ್ಕೆ ನಿಂತಿದ್ದಾರೆ.
ಏನು ಹೇಳಿದ್ದರು ಕಾಜೋಲ್
ಕಾಜೋಲ್ ದಿ ಕ್ವಿಂಟ್ ಜೊತೆ ಮಾತನಾಡುತ್ತಾ ಬದಲಾವಣೆ, ವಿಶೇಷವಾಗಿ ಭಾರತದಂತಹ ದೇಶದಲ್ಲಿ ನಿಧಾನವಾಗಿದೆ. ಇದು ತುಂಬಾ ನಿಧಾನ. ಏಕೆಂದರೆ ನಾವು ನಮ್ಮ ಸಂಪ್ರದಾಯಗಳಲ್ಲಿ ಮುಳುಗಿದ್ದೇವೆ. ಆಲೋಚನಾ ಕ್ರಮಗಳಿಂದ ದೂರ ಉಳಿದಿದ್ದೇವೆ. ಅದುವೇ ಶಿಕ್ಷಣಕ್ಕೆ ಸಂಬಂಧಿಸಿದ್ದು.
ಇದನ್ನೂ ಓದಿ : Lust Stories 2: ಹೆಣ್ಣಿನ ʻಕಾಮ ಸಂತೃಪ್ತಿʼಯನ್ನು ಸಹಜವಾಗಿ ನೋಡಿ ಎಂದ ನಟಿ ಕಾಜೋಲ್
ಶಿಕ್ಷಣ ವ್ಯವಸ್ಥೆಯ ಹಿನ್ನೆಲೆಯಿಲ್ಲದ ರಾಜಕೀಯ ನಾಯಕರನ್ನು ನಾವು ಹೊಂದಿದ್ದೇವೆ. ಯಾವುದೇ ದೂರದೃಷ್ಟಿ ಇಲ್ಲದ ನಾಯಕರಿಂದ ನಾವು ಆಳಿಸಿಕೊಳ್ಳುತ್ತಿದ್ದೇವೆ. ಒಳ್ಳೆಯ ದೃಷ್ಟಿಕೋನವನ್ನು ಶಿಕ್ಷಣ ನೀಡುತ್ತದೆ ಎಂಬುದು ನನ್ನ ನಂಬಿಕೆ. ಕನಿಷ್ಠ ಶಿಕ್ಷಣ ವಿಭಿನ್ನ ದೃಷ್ಟಿಕೋನವನ್ನು ನೋಡುವ ಅವಕಾಶವನ್ನು ಕೊಡುತ್ತದೆ ” ಎಂದು ಅವರು ಹೇಳಿದ್ದಾರೆ.
ಕಾಜೋಲ್ ಸ್ಪಷ್ಟನೆ
ವಿವಾದ ಉಂಟಾಗುತ್ತಿದ್ದಂತೆ ನಟಿ ತನ್ನ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ. “ನಾನು ಶಿಕ್ಷಣ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಕೇವಲ ಒಂದು ಅಂಶವನ್ನು ಹೇಳುತ್ತಿದ್ದೆ. ನನ್ನ ಉದ್ದೇಶ ಯಾವುದೇ ರಾಜಕೀಯ ನಾಯಕರನ್ನು ಅವಮಾನಿಸುವುದು ಅಲ್ಲ. ದೇಶವನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸುತ್ತಿರುವ ಕೆಲವು ಮಹಾನ್ ನಾಯಕರನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.