ನವ ದೆಹಲಿ: ಬೆಂಗಳೂರಿನಿಂದ ಉತ್ತರ ಪ್ರದೇಶದ ವಾರಾಣಸಿಯತ್ತ ತೆರಳುತ್ತಿದ್ದ ಇಂಡಿಗೊ ವಿಮಾನ (IndiGo Flight) ವೊಂದು ತೆಲಂಗಾಣದ ಶಂಶಾಬಾದ್ನಲ್ಲಿರುವ ರಾಜೀವ್ ಗಾಂಧಿ ಏರ್ಪೋರ್ಟ್ನಲ್ಲಿ ಇಂದು ಮುಂಜಾನೆ ತುರ್ತು ಲ್ಯಾಂಡ್ ಆಗಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಹೀಗೆ ಎಮರ್ಜನ್ಸಿ ಲ್ಯಾಂಡ್ ಮಾಡಲಾಗಿದೆ ಎಂದು ವಿಮಾನಯಾನದ ಡೈರಕ್ಟರೇಟ್ ಜನರಲ್ ತಿಳಿಸಿದ್ದಾರೆ.
ಇಂಡಿಗೊ ಏರ್ಲೈನ್ಸ್ಗೆ ಸೇರಿದ 6E897 ವಿಮಾನ ಬೆಂಗಳೂರಿನಿಂದ ಟೇಕ್ ಆಫ್ ಆಗಿ ಹೊರಟಿತ್ತು. ಇದರಲ್ಲಿ 137 ಪ್ರಯಾಣಿಕರು ಇದ್ದರು. ಆದರೆ ಸ್ವಲ್ಪ ದೂರ ಕ್ರಮಿಸಿದ ನಂತರ ತಾಂತ್ರಿಕ ಸಮಸ್ಯೆ ಎದುರಾದ ಕಾರಣ, ಪೈಲೆಟ್ ವಿಮಾನವನ್ನು ತೆಲಂಗಾಣದ ಶಂಶಾಬಾದ್ ಏರ್ಪೋರ್ಟ್ನತ್ತ ತಿರುಗಿಸಿ, ಅಲ್ಲಿ ಲ್ಯಾಂಡ್ ಮಾಡಿಸಿದ್ದಾರೆ. ಈ ಬಗ್ಗೆ ಡಿಜಿಸಿಎ (ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ)ಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದು, ವಿಮಾನದ ತಾಂತ್ರಿಕ ದೋಷದ ಬಗ್ಗೆ ಡಿಜಿಸಿಎ ತನಿಖೆ ಆರಂಭಿಸಿದೆ.
ಶನಿವಾರ ದೆಹಲಿಯಿಂದ ದುಬೈಗೆ ಹೊರಟಿದ್ದ ಫೆಡ್ಎಕ್ಸ್ ವಿಮಾನವೊಂದಕ್ಕೆ ಹಕ್ಕಿ ಡಿಕ್ಕಿಯಾಗಿ ತುರ್ತು ಲ್ಯಾಂಡ್ ಆಗಿತ್ತು. ದೆಹಲಿ ಏರ್ಪೋರ್ಟ್ನಿಂದ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಅದಕ್ಕೆ ಹಕ್ಕಿ ಡಿಕ್ಕಿಯಾಗಿತ್ತು. ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಮತ್ತೆ ದೆಹಲಿ ವಿಮಾನನಿಲ್ದಾಣದಲ್ಲಿಯೇ ಲ್ಯಾಂಡ್ ಮಾಡಿಸಲಾಗಿತ್ತು. ಹಾಗೇ, ಮಾರ್ಚ್ 11ರಂದು ಏರ್ಏಷ್ಯಾ ವಿಮಾನವೊಂದು ಬೆಂಗಳೂರಿನಿಂದ ಲಖನೌಕ್ಕೆ ಹೊರಟಿತ್ತು. ಆದರೆ ಮಾರ್ಗ ಮಧ್ಯೆ ತಾಂತ್ರಿಕ ದೋಷ ಕಾಣಿಸಿಕೊಂಡು, ಮತ್ತೆ ವಾಪಸ್ ಬಂದು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಲ್ಯಾಂಡ್ ಆಗಿತ್ತು.
ಇದನ್ನೂ ಓದಿ: Air Asia Flight: ಬೆಂಗಳೂರಿನಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷದಲ್ಲಿ ಏರ್ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ