ನವ ದೆಹಲಿ: ಇಂಡಿಗೋ ವಿಮಾನಯಾನ ಸಂಸ್ಥೆ ವಿರುದ್ಧ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ತೀವ್ರ ಅಸಮಾಧಾನಗೊಂಡಿದೆ. ಈ ಸಂಸ್ಥೆಗೆ ನೋಟಿಸ್ ಕೊಟ್ಟಿರುವ ಡಿಜಿಸಿಎ, ʼಪ್ರಯಾಣಿಕರು ನಿಮ್ಮಿಂದಾಗಿ ತೊಂದರೆ ಅನುಭವಿಸುವಂತಾಯಿತು. ಈ ಬಗ್ಗೆ ನೀವು ವಿವರಣೆ ಮತ್ತು ಸ್ಪಷ್ಟನೆ ನೀಡಲೇಬೇಕುʼ ಎಂದು ಸೂಚಿಸಿದೆ. ಅಷ್ಟಕ್ಕೂ ಇಂಡಿಗೋ ಮಾಡಿದ್ದೇನು? ಅಂಥ ದೊಡ್ಡ ಪ್ರಮಾದ ಏನಾಯ್ತು? ಇದು ಸಿಬ್ಬಂದಿಯೇ ತಮ್ಮ ಸಂಸ್ಥೆಗೆ ಮುಜುಗರ ತಂದಿಟ್ಟ ಸನ್ನಿವೇಶ!
ಶನಿವಾರ ದೇಶಾದ್ಯಂತ ಇಂಡಿಗೋ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನಗಳ ಹಾರಾಟದಲ್ಲಿ ತುಂಬ ವಿಳಂಬವಾಗಿವೆ. ಅಂದರೆ ಬಹುಪಾಲು ವಿಮಾನಗಳು ಸರಿಯಾದ ಸಮಯಕ್ಕೆ ಟೇಕ್ ಆಫ್ ಆಗಲಿಲ್ಲ. ಸೂಕ್ತ ಸಮಯದಲ್ಲಿ ಲ್ಯಾಂಡ್ ಕೂಡ ಆಗಲಿಲ್ಲ. ಬರೀ ಒಂದೆರಡು ಕಡೆಯಲ್ಲ, ದೇಶಾದ್ಯಂತ ಹೀಗಾಗಿತ್ತು. ಜುಲೈ 2ರಂದು ಶೇ.45ರಷ್ಟು ಇಂಡಿಗೋ ವಿಮಾನಗಳು ಮಾತ್ರ ಸರಿಯಾದ ಸಮಯಕ್ಕೆ ಹಾರಾಟ ನಡೆಸಿದ್ದು ಬಿಟ್ಟರೆ ಇನ್ನು ಶೇ.55ರಷ್ಟು ಅಂದರೆ 900ಕ್ಕೂ ಅಧಿಕ ಫ್ಲೈಟ್‌ಗಳು ವಿಳಂಬವಾಗಿವೆ ಎಂದು ಕೇಂದ್ರ ವಿಮಾನಯಾನ ಸಚಿವಾಲಯ ಹೇಳಿದೆ. ಅದರ ಬೆನ್ನಲ್ಲೇ DGCA ನೋಟಿಸ್ ಕೊಟ್ಟಿದೆ.
ಯಾಕೆ ಹೀಗಾಗಿದ್ದು?
ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಜುಲೈ 3ರಂದು ಹೀಗೆ ವಿಳಂಬವಾಗಲು ಕಾರಣ ಸಿಬ್ಬಂದಿಯ ಕೊರತೆ ಎಂದು ಪಿಟಿಐ ವರದಿ ಮಾಡಿದೆ. ಅಂದರೆ ಪೈಲಟ್‌ಗಳು, ಏರ್‌ಹೋಸ್ಟೆಸ್ ಸೇರಿ ಬಹುತೇಕ ಎಲ್ಲ ವಿಭಾಗದಲ್ಲಿ ಕೆಲಸ ಮಾಡುವರು ರಜಾ ಹಾಕಿದ್ದರಂತೆ. ಹೆಚ್ಚಿನ ಸಿಬ್ಬಂದಿ ತಮಗೆ ಅನಾರೋಗ್ಯ ಎಂದೇ ಹೇಳಿ ರಜಾ ಪಡೆದು, ಏರ್ ಇಂಡಿಯಾ ವಿಮಾನ ಸಂಸ್ಥೆಯ ೨ನೇ ಹಂತದ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.
ಪ್ರತಿದಿನ ಇಂಡಿಗೋ ಸಂಸ್ಥೆಯ ಒಟ್ಟು 1600 ವಿಮಾನಗಳು (ದೇಶೀಯ ಮತ್ತು ಅಂತಾರಾಷ್ಟ್ರೀಯ) ಹಾರಾಟ ನಡೆಸುತ್ತವೆ. ಆದರೆ ಶನಿವಾರ ಅರ್ಧಕ್ಕಿಂತಲೂ ಕಡಿಮೆ ವಿಮಾನಗಳು ಸರಿಯಾದ ಸಮಯದಲ್ಲಿ ಹಾರಾಟ ನಡೆಸಿವೆ. ಈ ಸಂಸ್ಥೆಯ ಆಡಳಿತ ಮತ್ತು ಉದ್ಯೋಗಿಗಳ ನಡುವೆ ಭಿನ್ನಾಭಿಪ್ರಾಯವಿದೆ. ಕೊವಿಡ್ 19 ಸಮಯದಲ್ಲಿ ಇಂಡಿಗೋ ಉದ್ಯೋಗಿಗಳಿಗೆ ಸಂಬಳದಲ್ಲಿ ಕಡಿತ ಮಾಡಲಾಗಿತ್ತು. ಆದರೆ ಈಗಲೂ ಅದನ್ನು ಪೂರ್ತಿಯಾಗಿ ಕೊಡುತ್ತಿಲ್ಲ. ಕಡಿತಗೊಳಿಸಿದ ವೇತನವನ್ನೇ ಮುಂದುವರಿಸಲಾಗಿದೆ. ಇದೇ ಕಾರಣಕ್ಕೆ ಅನೇಕರು ಅಸಮಾಧಾನಗೊಂಡಿದ್ದಾರೆ.
ಫ್ಲೈಟ್ ವಿಳಂಬವಾಗಿದ್ದಕ್ಕೆ ಪ್ರಯಾಣಿಕರು ತಮಗಾದ ಕಷ್ಟವನ್ನು ಸೋಷಿಯಲ್ ಮೀಡಿಯಾಗಳಲ್ಲೂ ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಿಲುಕಿ ಪರದಾಡುವಂತಾಯಿತು ಎಂದು ಹಲವರು ಕಿಡಿಕಾರಿದ್ದಲ್ಲದೆ, ಇಂಡಿಗೋ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿದ್ದರು. ಅದರ ಬೆನ್ನಲ್ಲೇ ಇಂಡಿಗೋ ಸಂಸ್ಥೆ ಕ್ಷಮೆ ಕೋರಿದೆ. ನಿಮಗಾದ ತೊಂದರೆಗೆ ವಿಷಾದಿಸುತ್ತೇವೆ ಎಂದು ಹೇಳಿದೆ.
ಇದನ್ನೂ ಓದಿ: ಕುಡುಕನ ಕಾಟ: ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನು ಮುಂಬೈಲಿ ಇಳಿಸಿದ ಪೈಲಟ್