ನವ ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದು ಮೊದಲು ಕರೆದವರು ಯಾರು ಗೊತ್ತಿಲ್ಲ. ಆದರೆ ಅದನ್ನೀಗ ಬಿಜೆಪಿ ನಾಯಕರೂ ರೂಢಿಸಿಕೊಂಡಿದ್ದಾರೆ. ತಿಳಿವಳಿಕೆ ಇಲ್ಲದವರು, ಅಜ್ಞಾನಿ ಎಂಬ ಅರ್ಥದಲ್ಲಿ ರಾಹುಲ್ ಗಾಂಧಿಗೆ ಪಪ್ಪು ಎಂದು ಕರೆದು ಟೀಕಿಸುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲೂ ಕೂಡ ರಾಹುಲ್ ಗಾಂಧಿಯ ಕೆಲವು ವಿಡಿಯೊ-ಭಾಷಣಗಳ ತುಣುಕನ್ನು ಶೇರ್ ಮಾಡಿಕೊಂಡು ಪಪ್ಪು ಎಂದು ಟ್ರೋಲ್ ಮಾಡುವುದುಂಟು. ಹೀಗೆ ತಮ್ಮನ್ನು ಪಪ್ಪು ಎಂದು ಕರೆಯುವ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ ‘ಇದರಿಂದ ನನಗೇನೂ ಬೇಸರವಿಲ್ಲ. ನನ್ನ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರ ಅಭಿಯಾನದ ಒಂದು ಭಾಗ ಇದು’ ಎಂದು ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ಮುಂಬಯಿಯಲ್ಲಿ ನಡೆಯುತ್ತಿದ್ದಾಗ ಮಾಧ್ಯಮವೊಂದು ರಾಹುಲ್ ಗಾಂಧಿಯನ್ನು ಸಂದರ್ಶನ ಮಾಡಿತ್ತು. ಅದರಲ್ಲಿ ಮಾತನಾಡಿದ ರಾಹುಲ್ ಗಾಂಧಿ ‘ನನಗೆ ನನ್ನನ್ನು ಏನೇ ಹೆಸರುಗಳಿಂದ ಕರೆದರೂ ಬೇಸರವಿಲ್ಲ. ನನಗೆ ಖುಷಿಯೇ ಆಗುತ್ತದೆ. ಹೀಗೆ ನನ್ನ ಹೆಸರನ್ನು ವಿರೋಧಿಗಳು ಹೆಚ್ಚೆಚ್ಚು ಹೇಳುತ್ತಿರಬೇಕು. ಅದು ಅವರ ಹೃದಯದಲ್ಲೇ ಇರಬೇಕು. ಅವರ ಎದೆಯಲ್ಲಿರುವ ಭಯವನ್ನು ಈ ಮೂಲಕ ತೋರಿಸುತ್ತಿದ್ದಾರೆ. ಅವರೆಲ್ಲ ಅಸಂತುಷ್ಟರಾಗಿದ್ದಾರೆ ಎಂದು ಇದರಲ್ಲೇ ಗೊತ್ತಾಗುತ್ತದೆ’ ಎಂದು ಹೇಳಿದ್ದಾರೆ.
ಇದೇ ವೇಳೆ ತನ್ನ ಅಜ್ಜಿ ಇಂದಿರಾ ಗಾಂಧಿಯನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, ‘ನನ್ನ ಅಜ್ಜಿ ಇಂದಿರಾಗಾಂಧಿಯನ್ನು ಈಗ ‘ಐರನ್ ಲೇಡಿ’ ಎಂದು ಕರೆಯುತ್ತಾರೆ. ಆದರೆ ಅವರಿಗೆ ಈ ಹೆಸರು ಕೊಡುವುದಕ್ಕೂ ಮೊದಲು ಅವರನ್ನು ಗುಂಗಿ ಗುಡಿಯಾ (ಮೂಕ ಗೊಂಬೆ) ಎಂದು ಕರೆಯುತ್ತಿದ್ದರು. ಅಂದು ನನ್ನಜ್ಜಿಯನ್ನು ಮೂಕ ಗೊಂಬೆ ಎನ್ನುತ್ತಿದ್ದವರೆಲ್ಲ ಇಂದು ನನ್ನನ್ನು ಪಪ್ಪು ಎನ್ನುತ್ತಿದ್ದಾರೆ. ಹಾಗೇ, ಅಂದು ಮೂಕ ಗೊಂಬೆಯಾಗಿದ್ದ ಮಹಿಳೆ ಒಮ್ಮೆಲೇ ಐರನ್ ಲೇಡಿ ಆಗಿ ಬದಲಾಗಿದ್ದನ್ನೂ ಅವರು ನೆನಪಿನಲ್ಲಿ ಇಟ್ಟುಕೊಳ್ಳಲಿ’ ಎಂದೂ ರಾಹುಲ್ ಗಾಂಧಿ ತಮ್ಮ ವಿರೋಧಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.
ನಿಮ್ಮ ಅಜ್ಜಿ ಇಂದಿರಾಗಾಂಧಿಯವರನ್ನು ಇಷ್ಟು ಪ್ರೀತಿಸುವ ನೀವು ಅವರದ್ದೇ ಗುಣ-ಸ್ವಭಾವಗಳು ಇರುವ ಮಹಿಳೆಯೊಂದಿಗೆ ಜೀವನಲ್ಲಿ ಸೆಟ್ಲ್ ಆಗಲು ಬಯಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ‘ಈ ಪ್ರಶ್ನೆ ಚೆನ್ನಾಗಿದೆ. ನನ್ನ ಅಜ್ಜಿ ಇಂದಿರಾ ಗಾಂಧಿ ನನ್ನ ಜೀವನದ ಪ್ರೀತಿ. ಅವರು ನನ್ನ ಎರಡನೇ ಅಮ್ಮ. ಹಾಗೇ, ನನ್ನ ತಾಯಿ ಸೋನಿಯಾ ಗಾಂಧಿಯಲ್ಲಿರುವ ಸ್ವಭಾವಗಳು ಮತ್ತು ಅಜ್ಜಿ ಇಂದಿರಾಗಾಂಧಿ ಗುಣಗಳನ್ನು ಮಿಶ್ರವಾಗಿ ಹೊಂದಿರುವ ಮಹಿಳೆ ಇಷ್ಟವಾಗುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ‘ನನ್ನ ಅಜ್ಜಿ, ನನ್ನ ಅಮ್ಮನ ಬಗ್ಗೆ ಆಡಿದ್ದ ಮಾತು ಸತ್ಯ‘; ಇಂದಿರಾ ಗಾಂಧಿಯವರ ಆ ಮಾತು ನೆನಪಿಸಿಕೊಂಡ ರಾಹುಲ್ ಗಾಂಧಿ