Site icon Vistara News

Swachh Survekshan 2022 | ಭಾರತದ ಅತ್ಯಂತ ಸ್ವಚ್ಛ ನಗರ ಇಂದೋರ್​; 8ನೇ ಸ್ಥಾನಕ್ಕೆ ಕುಸಿದ ಮೈಸೂರು

Indore is ‘cleanest city

ಕೇಂದ್ರ ಸರ್ಕಾರದ ಪ್ರಸಕ್ತ ವರ್ಷದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ವರದಿ (Swachh Survekshan 2022) ಹೊರಬಿದ್ದಿದ್ದು, ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಈ ಬಾರಿಯೂ ಮಧ್ಯಪ್ರದೇಶದ ಇಂದೋರ್​ ಪಾಲಾಗಿದೆ. ಈ ಮೂಲಕ ಇಂದೋರ್ ಸತತ ಆರನೇ ಬಾರಿಗೆ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾದಂತಾಗಿದೆ. ಅಂದಹಾಗೇ, ಭಾರತದ ಟಾಪ್​ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು ಎಂಟನೇ ಸ್ಥಾನದಲ್ಲಿ ಇದೆ. 2020ರಲ್ಲಿ ಮೈಸೂರು 5ನೇ ಸ್ಥಾನದಲ್ಲಿ ಇದ್ದಿದ್ದು, ಈಗ ಇನ್ನೂ ಮೂರು ಸ್ಥಾನ ಕೆಳಕ್ಕೆ ಕುಸಿದಿದೆ. 2021ರಲ್ಲಿ ಮೈಸೂರು ಟಾಪ್​ 10 ಪಟ್ಟಿಯಲ್ಲಿ ಇರಲಿಲ್ಲ.

ಸಮಗ್ರ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ದೇಶದ ಎರಡನೇ ಅತ್ಯಂತ ಸ್ವಚ್ಛ ನಗರವಾಗಿ ಗುಜರಾತ್​ನ ಸೂರತ್​ ಹೊರಹೊಮ್ಮಿದ್ದರೆ, ನವಿ ಮುಂಬಯಿ ಮೂರನೇ ಸ್ಥಾನದಲ್ಲಿದೆ. ವಿಶಾಖಪಟ್ಟಣ, ವಿಜಯವಾಡ, ಭೋಪಾಲ್​ಗಳು ಕ್ರಮವಾಗಿ 4,5 ಮತ್ತು 6ನೇ ಸ್ಥಾನದಲ್ಲಿ ಇದ್ದರೆ, ತಿರುಪತಿ ಏಳನೇ ಸ್ಥಾನದಲ್ಲಿದೆ. ಮೈಸೂರು, ನೊಯ್ಡಾ ಮತ್ತು ಅಂಬಿಕಾಪುರಗಳು ಕ್ರಮವಾಗಿ 8, 9 ಮತ್ತು 10ನೇ ಸ್ಥಾನದಲ್ಲಿವೆ. ಇಲ್ಲಿ ಸೂರತ್​ ಕೂಡ ಕಳೆದ ಮೂರು ವರ್ಷಗಳಿಂದಲೂ ಎರಡನೇ ಸ್ಥಾನದಲ್ಲಿಯೇ ಇದೆ. ಆಂಧ್ರಪ್ರದೇಶದ ಮೂರು ನಗರಗಳು ಟಾಪ್​ 10 ಲಿಸ್ಟ್​​ನಲ್ಲಿವೆ.

ವಾರ್ಷಿಕ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ವರದಿ ಪಟ್ಟಿಯನ್ನು ಶನಿವಾರ (ಇಂದು) ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಬಿಡುಗಡೆ ಮಾಡಿದ್ದು, ವಿಜೇತ ನಗರಗಳ ಆಡಳಿತಗಳಿಗೆ ಪ್ರಶಸ್ತಿಯನ್ನೂ ನೀಡಿದ್ದಾರೆ. ಈ ಸಮೀಕ್ಷೆ ವಿವಿಧ ಹಂತಗಳಲ್ಲಿ ನಡೆಯಲಿದೆ. 1 ಲಕ್ಷದಿಂದ 3 ಲಕ್ಷದವರೆಗಿನ ಜನಸಂಖ್ಯೆ ಇರುವ ನಗರಗಳು, 3 ಲಕ್ಷ ಮೇಲ್ಪಟ್ಟು, 10 ಲಕ್ಷದ ಕೆಳಗೆ ಜನಸಂಖ್ಯೆ ಇರುವ ನಗರಗಳು ಮತ್ತು 10 ಲಕ್ಷಕ್ಕೂ ಮೇಲ್ಪಟ್ಟು ಜನರು ಇರುವ ನಗರಗಳು ಎಂಬ ಮೂರು ವಿಭಾಗದಲ್ಲಿ ಸಮೀಕ್ಷೆ ನಡೆಯುತ್ತದೆ. ಇದೀಗ ಹೊರಬಿದ್ದಿದ್ದು, 0 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳ ಸಮೀಕ್ಷೆ ವರದಿ.

2019 ಅಕ್ಟೋಬರ್​ 2ರೊಳಗೆ ಭಾರತವನ್ನು ಸ್ವಚ್ಛ ಮತ್ತು ಬಯಲು ಶೌಚ ಮುಕ್ತ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿತ್ತು. ಅದಕ್ಕಾಗಿಯೇ 2014ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸ್ವಚ್ಛ ಭಾರತ್ ಅಭಿಯಾನ ಪ್ರಾರಂಭ ಮಾಡಿತು. ಅದರ ಒಂದು ಭಾಗವಾಗಿ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯೂ ಶುರುವಾಯಿತು. ದೇಶಾದ್ಯಂತ ಹಳ್ಳಿಗಳು, ನಗರಗಳು, ಪಟ್ಟಣಗಳು, ಪ್ರದೇಶಗಳ ಸ್ವಚ್ಛತೆಯನ್ನು ಸ್ಥಳೀಯ ಆಡಳಿತಗಳು ಎಷ್ಟರ ಮಟ್ಟಿಗೆ ಕಾಪಾಡಿಕೊಂಡಿವೆ ಎಂಬುದನ್ನು ಸಮೀಕ್ಷೆ ಮಾಡಲಾಗುತ್ತದೆ. ಇದು ಜನರನ್ನು ಮತ್ತು ಆಡಳಿತಗಳನ್ನು ಸ್ವಚ್ಛತೆಯೆಡೆಗೆ ಪ್ರೇರೇಪಿಸುವ ಸಮೀಕ್ಷೆಯೂ ಹೌದು.

ಇದನ್ನೂ ಓದಿ: Mann Ki Baat 2022 | ರಸ್ತೆ ಬದಿ ಗೋಡೆಗಳನ್ನು ಸ್ವಚ್ಛಗೊಳಿಸುವ ಬೆಂಗಳೂರಿನ ಯೂತ್‌ ಫಾರ್ ಪರಿವರ್ತನ್‌ಗೆ ಪ್ರಧಾನಿ ಪ್ರಶಂಸೆ

Exit mobile version