Site icon Vistara News

Indore Temple Tragedy: ಇಂದೋರ್​ ದೇವಸ್ಥಾನದ ಮೆಟ್ಟಿಲು ಬಾವಿ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆ

Indore Temple Tragedy Death toll reach to 35

#image_title

ಭೋಪಾಲ್​: ಇಂದೋರ್​​ನಲ್ಲಿರುವ ಶ್ರೀ ಬೆಳೆಶ್ವರ ಮಹಾದೇವ ಜುಲೇಲಾಲ್​ ದೇವಸ್ಥಾನದಲ್ಲಿ ಮೆಟ್ಟಿಲು ಬಾವಿ ಕುಸಿದ ಅವಘಡದಲ್ಲಿ (Indore Temple Tragedy) ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಈ 35 ಶವಗಳನ್ನು ಹೊರತೆಗೆಯಲಾಗಿದೆ. ಈ ದೇವಸ್ಥಾನದ ಒಳಭಾಗದಲ್ಲಿರುವ ಈ ಮೆಟ್ಟಿಲು ಬಾವಿಯನ್ನು ಸಿಮೆಂಟ್ ಸ್ಲ್ಯಾಬ್​​ನಿಂದ ಮುಚ್ಚಿಡಲಾಗಿತ್ತು. ಮಾ.30ರಂದು ಶ್ರೀರಾಮನವಮಿ ಆಚರಣೆ ಪ್ರಯುಕ್ತ ಇದೇ ಸ್ಲ್ಯಾಬ್​​ ಮೇಲೆ ಕುಳಿತು ಹವನ ನಡೆಸಲಾಗುತ್ತಿತ್ತು. ಅದೇ ವೇಳೆ ಆ ಭಾಗ ಕುಸಿದುಬಿದ್ದಿದೆ ಎಂದು ಹೇಳಲಾಗಿದೆ. ಮೆಟ್ಟಿಲು ಬಾವಿ ಕುಸಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಪ್ರಾರಂಭದಲ್ಲಿ 13 ಮೃತದೇಹಗಳು ಸಿಕ್ಕಿದ್ದವು. ಅದೀಗ 35ಕ್ಕೆ ಏರಿಕೆಯಾಗಿದೆ.

ದೇವಸ್ಥಾನದಲ್ಲಿರುವ ಈ ಕಲ್ಯಾಣಿ ಅಥವಾ ಮೆಟ್ಟಿಲು ಬಾವಿಯನ್ನು ಸಿಮೆಂಟ್​ ಸ್ಲ್ಯಾಬ್​​ನಿಂದ ಮುಚ್ಚಲಾಗಿತ್ತು. ಅದಕ್ಕೆ ಕಬ್ಬಿಣದ ಸರಳುಗಳು, ರಾಡ್​​ಗಳ ಬೆಂಬಲಕೊಟ್ಟು ಭದ್ರ ಮಾಡಲಾಗಿತ್ತು. ಆದರೆ ದೇವಸ್ಥಾನ ಸುಮಾರು 60ವರ್ಷ ಹಳೆಯದ್ದು ಎನ್ನಲಾಗಿದೆ. ಅಷ್ಟಕ್ಕೂ ಈ ಮೆಟ್ಟಿಲ ಬಾವಿಗೆ ಮುಚ್ಚುಗೆ ಮಾಡಿದ್ದು ಯಾವಾಗ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಶ್ರೀರಾಮನವಮಿ ದಿನ ಅಪಾರಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಇದೇ ಸ್ಲ್ಯಾಬ್​​ ಅನೇಕರು ಕುಳಿತಿದ್ದರು. ಇದರಿಂದ ಭಾರ ತಾಳಲಾರದೆ ಕುಸಿದುಬಿದ್ದಿದೆ. ಬಾವಿಗೆ ಬಿದ್ದವರು ಒಂದಷ್ಟು ಜನರಾದರೆ, ಕೆಲವರು ಆ ಕಬ್ಬಿಣದ ಸರಳು ತಾಗಿ, ಗಾಯಗೊಂಡು ಮೃತಪಟ್ಟಿದ್ದಾಗಿ ವರದಿಯಾಗಿದೆ.

ಸ್ಥಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಇಂದೋರ್​ ವಲಯದ ಪೊಲೀಸ್​ ಆಯುಕ್ತ ‘ಇದುವರೆಗೆ 18 ಮಂದಿಯನ್ನು ರಕ್ಷಿಸಲಾಗಿದೆ. ಅದರಲ್ಲಿ 16 ಜನರು ತೀವ್ರ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 35 ಮೃತದೇಹಗಳು ಪತ್ತೆಯಾಗಿದೆ. ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಲಾಗುತ್ತಿದೆ’ ಎಂದು ಹೇಳಿದ್ದಾರೆ. 75 ಸೇನಾ ಸಿಬ್ಬಂದಿ ಸೇರಿ ಒಟ್ಟು 140 ಜನರನ್ನು ಒಳಗೊಂಡ ತಂಡ ಸ್ಥಳದಲ್ಲಿ ಬೀಡುಬಿಟ್ಟು, ಅವಿರತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​​ ಅವರು ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಈ ಬಾವಿಯಿದ್ದಂತೆ ಅಲ್ಲಿ ದೇವಸ್ಥಾನ ಕಟ್ಟಿದ್ದು ಹೇಗೆ ಎಂದೂ ಪ್ರಶ್ನಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಮತ್ತು ಗಾಯಾಳುಗಳ ಕುಟುಂಬಕ್ಕೆ 50 ಸಾವಿರ ರೂ. ಘೋಷಿಸಿದ್ದಾರೆ. ದೇವಸ್ಥಾನದಲ್ಲಿ ಭಕ್ತರನ್ನು ರಕ್ಷಣೆ ಮಾಡುತ್ತಿರುವ ವಿಡಿಯೊ, ಫೋಟೋಗಳೆಲ್ಲ ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಘಟನೆಯ ವರದಿ ಪಡೆದಿದ್ದು, ಸಂತಾಪ ಸೂಚಿಸಿದ್ದಾರೆ. ಇಂದೋರ್​ ದೇವಸ್ಥಾನ ದುರಂತದ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Indore Temple Tragedy: ಇಂದೋರ್‌ ದೇಗುಲದಲ್ಲಿ ಮೆಟ್ಟಿಲುಬಾವಿ ಕುಸಿದು 13 ಜನ ಸಾವು; ಮೋದಿ ಸಂತಾಪ

Exit mobile version