ಇನ್ಫೋಸಿಸ್ ಸಹ ಸಂಸ್ಥಾಪಕ, UIDAI (ಆಧಾರ್ಕಾರ್ಡ್) ಮಾಜಿ ಮುಖ್ಯಸ್ಥ ನಂದನ್ ನೀಲೇಕಣಿ (Nandan Nilekani) ಅವರು ಐಐಟಿ ಬಾಂಬೆ ಶಿಕ್ಷಣ ಸಂಸ್ಥೆಗೆ (IIT Bombay: Indian Institute of Technology Bombay) ದೊಡ್ಡಮೊತ್ತದ ಹಣವನ್ನು ದೇಣಿಗೆ ನೀಡಿದ್ದಾರೆ. ಇದೇ ಐಐಟಿ ಬಾಂಬೆಯಲ್ಲಿ 1973ರ ಸಮಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಓದಿರುವ ನಂದನ್ ನೀಲೇಕಣಿ ಈಗ ಕೋಟ್ಯಾಧೀಶರು.
1973ರಿಂದ ಐಐಟಿ ಬಾಂಬೆಯೊಂದಿಗೆ ಶುರುವಾದ ಅವರ ಪ್ರಯಾಣಕ್ಕೀಗ 50ವರ್ಷ ತುಂಬಿದೆ. ವಿದ್ಯಾರ್ಥಿಯಾಗಿ ನೀಲೇಕಣಿ ಅಲ್ಲಿಗೆ ಸೇರಿದ್ದರು. ಬಳಿಕ 2011ರಿಂದ 15ರವರೆಗೆ ಬಾಂಬೆ ಐಐಟಿ ಆಡಳಿತ ಮಂಡಳಿಯಲ್ಲಿ ಇದ್ದರು. ಒಟ್ಟಿನಲ್ಲಿ ತಾವು ಕಲಿತ ಯೂನಿವರ್ಸಿಟಿಯೊಂದಿಗಿನ ನಂಟನ್ನು ಗಟ್ಟಿಯಾಗಿ ಹಿಡಿದುಕೊಂಡಿರುವ ಅವರು ಹಿಂದೆಯೂ 85 ಕೋಟಿ ರೂ.ದೇಣಿಗೆ ಕೊಟ್ಟಿದ್ದರು. ಈ ಸಲ 315 ಕೋಟಿ ರೂ. ನೀಡಿದ್ದಾರೆ ಎಲ್ಲ ಸೇರಿ ಒಟ್ಟು 400 ರೂಪಾಯಿ ದೇಣಿಗೆ ನೀಡಿದಂತೆ ಆಗಿದೆ. ಈ ಬಗ್ಗೆ ನಂದನ್ ನೀಲೇಕಣಿ ಟ್ವೀಟ್ ಮಾಡಿ ವಿಷಯ ತಿಳಿಸಿದ್ದಾರೆ.
To mark 50 years of my association with @iitbombay, I am donating ₹315 crores to my alma mater. I am grateful to be able to do this🙏
— Nandan Nilekani (@NandanNilekani) June 20, 2023
Full release: https://t.co/q6rvuMf2jn pic.twitter.com/f8OEfZ1UTq
‘ಐಐಟಿ ಬಾಂಬೆ ನನ್ನ ಜೀವನದ ಮೂಲಾಧಾರ. ನನ್ನ ಜೀವನದ ಅಮೂಲ್ಯ ಘಟ್ಟಕ್ಕೆ ಅಡಿಪಾಯ ಹಾಕಿ, ನನ್ನ ಬೆಳವಣಿಗೆಯ ಹಂತವನ್ನು ರೂಪಿಸಿಕೊಟ್ಟಿದ್ದೇ ಈ ಶಿಕ್ಷಣ ಸಂಸ್ಥೆ. ನಾನು ಈ ಹಣವನ್ನು ಬರೀ ಹಣವನ್ನಾಗಿ ನೀಡಿಲ್ಲ. ನನ್ನ ಜೀವನಕ್ಕೆ ತುಂಬ ಸಂಗತಿಗಳನ್ನು ಒದಗಿಸಿಕೊಟ್ಟ ಕೊಟ್ಟ ಸಂಸ್ಥೆಗೆ ನಾನು ತೋರಿಸುತ್ತಿರುವ ಗೌರವ. ನಾಳೆ ನಮ್ಮ ಜಗತ್ತನ್ನು ರೂಪಿಸಲಿರುವ ವಿದ್ಯಾರ್ಥಿಗಳಿಗಾಗಿ ನನ್ನ ಬದ್ಧತೆ ಇದು’ ಎಂದು ನಂದನ್ ನೀಲೇಕಣಿ ತಿಳಿಸಿದ್ದಾರೆ. ಈ ದೇಣಿಗೆ ಸಂಬಂಧಪಟ್ಟ ಜ್ಞಾಪನಾ ಪತ್ರಕ್ಕೆ ನಂದನ್ ನೀಲೇಕಣಿ ಮತ್ತು ಐಐಟಿ ಬಾಂಬೆಯ ನಿರ್ದೇಶಕ ಸುಭಾಸಿಸ್ ಚೌಧರಿ ಅವರು ಇಂದು ಬೆಂಗಳೂರಿನಲ್ಲಿ ಸಹಿ ಹಾಕಿದ್ದಾರೆ.
ಇನ್ನು ಐಐಟಿ ಬಾಂಬೆ ಬರುವ ಐದು ವರ್ಷಗಳಿಗಾಗಿ ಹತ್ತುಹಲವು ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಸುಮಾರು 4106 ಕೋಟಿ ರೂಪಾಯಿಗಳಷ್ಟು ಹಣ ಅಗತ್ಯವೂ ಇದೆ. ಇದೇ ಹೊತ್ತಲ್ಲಿ ನಂದನ್ ನೀಲೇಕಣಿ ಅವರು ನೀಡಿದ 315 ಕೋಟಿ ರೂ. ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಣ ಸಂಸ್ಥೆ ಐಐಟಿ ಯೋಜನೆಗಳನ್ನು ಶುರು ಮಾಡಬಹುದಾಗಿದೆ. ನಂದನ್ ನೀಲೇಕಣಿ ಅವರು ಕೊಟ್ಟ ದೇಣಿಗೆ ಬಗ್ಗೆ ಶಿಕ್ಷಣ ಸಂಸ್ಥೆ ನಿರ್ದೇಶಕ ಸುಭಾಸಿಸ್ ಚೌಧರಿ ಪ್ರತಿಕ್ರಿಯೆ ನೀಡಿ ‘ನಮ್ಮ ಹಳೇ ವಿದ್ಯಾರ್ಥಿ ನಂದನ್ ನೀಲೇಕಣಿ ಅವರು ಸಂಸ್ಥೆಗೆ ನೀಡಿದ ಕೊಡುಗೆಯಿಂದ ನಮಗೆ ಅತ್ಯಂತ ಸಂತೋಷವಾಗಿದೆ. ಐಐಟಿ ಬಾಂಬೆ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ’ ಎಂದಿದ್ದಾರೆ.