ಮುಂಬೈ: ಎಲ್ಲ ತಂದೆ ತಾಯಿಗೂ ತಮ್ಮ ಮಕ್ಕಳನ್ನು ಎತ್ತರದ ಸ್ಥಾನದಲ್ಲಿ ನೋಡಬೇಕು ಎನ್ನುವ ಮನಸ್ಸು ಇರುತ್ತದೆ. ಅದರಂತೆ ಪುಣೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ರೋಶನ್ ಅವರಿಗೆ ತಮ್ಮ ಮಗಳು ಖಾಕಿ ತೊಡುವ ಪೊಲೀಸ್ ಅಧಿಕಾರಿಯಾಗಬೇಕು ಎನ್ನುವ ಕನಸು ಇತ್ತಂತೆ. ಅಪ್ಪನ ಕನಸನ್ನು ಗಂಭೀರವಾಗಿ ಪರಿಗಣಿಸಿದ ಮಗಳು ಇದೀಗ ಅದನ್ನು ನನಸು ಮಾಡಿ(Inspiring Story) ತೋರಿಸಿದ್ದಾಳೆ.
ಶಯಾದಾ(22) ಮಾರ್ಚ್ ತಿಂಗಳಲ್ಲಿ ಪೊಲೀಸ್ ಪೇದೆ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಇದೀಗ ಲಿಖಿತ ಪರೀಕ್ಷೆಯಲ್ಲೂ ತೇರ್ಗಡೆಯಾಗಿದ್ದಾಳೆ. ಒಟ್ಟಾರೆಯಾಗಿ 8000 ಮಂದಿ ಈ ಪರೀಕ್ಷೆ ಬರೆದಿದ್ದು, ಅದರಲ್ಲಿ ತೇರ್ಗಡೆಯಾದ 700 ಮಂದಿಯಲ್ಲಿ ಶಯಾದಾ ಕೂಡ ಒಬ್ಬರು. ಇನ್ನು ಕೆಲ ದಿನಗಳಲ್ಲಿ ಶಯಾದಾ ಅವರಿಗೆ 9 ತಿಂಗಳ ತರಬೇತಿ ಆರಂಭವಾಗಲಿದೆ. ಮುಂದೆ ಆಕೆಗೆ ಪೊಲೀಸ್ ಅಧಿಕಾರಿಯಾಗಿ ಬೆಳೆಯುವ ಗುರಿ ಹೊಂದಿದ್ದಾಳೆ.
ಇದನ್ನೂ ಓದಿ: Viral Video: 2000 ರೂ. ನೋಟು ಕೊಟ್ಟ ಗ್ರಾಹಕ; ಸ್ಕೂಟರ್ನಿಂದ ಪೆಟ್ರೋಲ್ ವಾಪಸ್ ತೆಗೆದ ಬಂಕ್ ಸಿಬ್ಬಂದಿ
ಈ ಶಯಾದಾ ಮನೆಗೆ ಮೊದಲನೇ ಮಗಳು. ಪುಣೆಯ ಕಡಿಮೆ ಆದಾಯದ ಜನರು ವಾಸಿಸುವ ಜೈಹಿಂದ್ ನಗರದಲ್ಲಿ ಇವರ ಕುಟುಂಬವಿದೆ. ಶಯಾದಾ ಸ್ವರಾಜ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಪದವಿಯ ಎರಡನೇ ವರ್ಷದ ಅಭ್ಯಾಸ ಮಾಡುತ್ತಿದ್ದರೆ ಇಬ್ಬರು ತಮ್ಮಂದಿರು ಪ್ರಥಮ ಪಿಯು ಮತ್ತು ಎಸ್‌ಎಸ್‌ಎಲ್‌ಸಿ ಅಧ್ಯಯನ ಮಾಡುತ್ತಿದ್ದಾರೆ. “ನನ್ನ ಮಗಳು ಮುಂದೊಂದು ದಿನ ಆ ಖಾಕಿ ಸಮವಸ್ತ್ರವನ್ನು ಧರಿಸಬೇಕು ಎಂಬುದು ನನ್ನ ಕನಸಾಗಿತ್ತು. ಪದೇ ಪದೇ ನಿಂದನೆಗಳು ಮತ್ತು ಟೀಕೆಗಳ ಹೊರತಾಗಿಯೂ ನಾನು ಅವಳ ಬೆಂಬಲಕ್ಕೆ ನಿಂತೆ. ಇಂದು, ನನ್ನ ಎಲ್ಲಾ ವರ್ಷಗಳ ಹೋರಾಟವು ಅಂತಿಮವಾಗಿ ಸಾರ್ಥಕವಾಗಿದೆ ಎಂದು ಭಾಸವಾಗುತ್ತಿದೆ” ಎಂದು ಹೇಳುತ್ತಾರೆ ಶಯಾದಾ ತಂದೆ ರೋಶನ್.
ತನ್ನ ಈ ಸಾಧನೆ ಬಗ್ಗೆ ಮಾತನಾಡಿರುವ ಶಯಾದಾ, ತನಗೆ ಸಹಾಯ ಮಾಡಿದ ಎರಡು ಸಂಸ್ಥೆಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ತ್ಯಾಜ್ಯ ತೆಗೆಯುವವರ ಟ್ರೇಡ್ ಯೂನಿಯನ್ ಆಗಿರುವ ಕಾಗದ ಕಚ್ ಪತ್ರ ಕಷ್ಟಕಾರಿ ಪಂಚಾಯತ್ (ಕೆಕೆಪಿಕೆಪಿ) ಹಾಗೂ ಪೊಲೀಸ್ ನೇಮಕಾತಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳನ್ನು ಸಿದ್ಧಪಡಿಸುವ ಖಾಸಗಿ ಅಕಾಡೆಮಿಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: Viral News : ನಾನು ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಟ್ವೀಟ್; ಕನ್ನಡಿಗರ ಆಕ್ರೋಶಕ್ಕೆ ಡಿಲೀಟ್
ಈ ಬಗ್ಗೆ ಕೆಕೆಪಿಕೆಪಿಯ ಖಜಾಂಚಿ ಆದಿತ್ಯ ವ್ಯಾಸ್ ಮಾತನಾಡಿದ್ದು, “ನಾವು ಒಂದು ಸಹಕಾರಿ ಸಂಘವಾಗಿ, ಒಂದು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ತ್ಯಾಜ್ಯ ತೆಗೆಯುವವರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮಾಡಲು ನೋಟ್‌ಬುಕ್‌ಗಳು ಮತ್ತು ಇತರ ಶೈಕ್ಷಣಿಕ ಸಾಮಗ್ರಿಗಳು ಸೇರಿದಂತೆ ಉಚಿತ ಕಲಿಕಾ ಸಾಧನಗಳನ್ನು ಕೊಡುತ್ತಿದ್ದೇವೆ. ಅದರಂತೆ ಶಯಾದಾಗೆ ಕೂಡ ಸಹಾಯ ಮಾಡಿದ್ದೇವೆ” ಎಂದು ಹೇಳಿದ್ದಾರೆ.
ಶಯಾದಾ ತನ್ನ 12 ನೇ ತರಗತಿಯ ರಾಜ್ಯ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 82 ರಷ್ಟು ಅಂಕಗಳನ್ನು ಗಳಿಸಿದರು. ಇದರಿಂದಾಗಿ ಆಕೆಗೆ ಪುಣೆ ಮುನ್ಸಿಪಲ್ ಕಾರ್ಪೊರೇಶನ್‌ನಿಂದ 25,000 ರೂಪಾಯಿಗಳ ನಗದು ಬಹುಮಾನವನ್ನು ಕೊಡಲಾಯಿತು. ಆ ಹಣದಿಂದಾಗಿ ಪೊಲೀಸ್ ಪರೀಕ್ಷೆಗೆ ಸಿದ್ಧವಾಗುವುದಕ್ಕೆ ಸಹಾಯವಾಯಿತು ಎಂದು ಶಯಾದಾ ಹೇಳಿಕೊಂಡಿದ್ದಾರೆ.