Site icon Vistara News

ಚಾಲಕ ಕುಡಿದಿದ್ದರೂ, ಅಪಘಾತದಲ್ಲಿ ಸಂತ್ರಸ್ತರಾದ ಉಳಿದವರಿಗೆ ಪರಿಹಾರ ಕೊಡುವುದು ವಿಮಾ ಕಂಪನಿಗಳ ಹೊಣೆ: ಕೇರಳ ಹೈಕೋರ್ಟ್​

Kerala Highcourt 1

#image_title

ಅಪಘಾತದಲ್ಲಿ ಸಂತ್ರಸ್ತರಾದವರಿಗೆ ಆಯಾ ಇನ್ಶೂರೆನ್ಸ್​ ಕಂಪನಿಗಳು ಪರಿಹಾರ ಕೊಡುವ ಸಂಬಂಧ ಕೇರಳ ಹೈಕೋರ್ಟ್ (Kerala High Court ಒಂದು ಮಹತ್ವದ ತೀರ್ಪು ಹೊರಹಾಕಿದೆ. ಒಂದು ವಾಹನದಲ್ಲಿ ಅದರ ಚಾಲಕ ಮದ್ಯಪಾನ ಮಾಡಿ ಗಾಡಿ ಓಡಿಸಿ ಅಪಘಾತವಾದಾಗ ಅಥವಾ ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದಾಗ ಆ ವಾಹನಗಳಲ್ಲಿ ಇದ್ದ ಉಳಿದವರಿಗೆ ಆಯಾ ವಿಮಾ ಕಂಪನಿಗಳು ಪರಿಹಾರ ನೀಡಲೇಬೇಕು ಎಂದು ನ್ಯಾಯಾಲಯ ಹೇಳಿದೆ.

ಅಂದರೆ ಯಾವುದೋ ವಾಹನ ಅಪಘಾತಕ್ಕೀಡಾಗುತ್ತದೆ. ಅಥವಾ ಎರಡು ವಾಹನಗಳು ಪರಸ್ಪರ ಡಿಕ್ಕಿಹೊಡೆದುಕೊಳ್ಳುತ್ತವೆ. ಅದರಲ್ಲಿದ್ದವರು ಗಾಯಗೊಳ್ಳುತ್ತಾರೆ ಅಥವಾ ಸಾಯುತ್ತಾರೆ. ಎಲ್ಲ ಪರೀಕ್ಷೆಯ ಬಳಿಕ ಅಪಘಾತಕ್ಕೀಡಾದ ವಾಹನದ/ ಡಿಕ್ಕಿಯಾದ ವಾಹನಗಳಲ್ಲಿ ಒಂದು ವಾಹನದ ಚಾಲಕ ಮದ್ಯಪಾನ ಮಾಡಿದ್ದ ಎಂದು ಗೊತ್ತಾಗುತ್ತದೆ. ಆಗ ವಿಮಾ ಕಂಪನಿಗಳು ಡ್ರೈವರ್​ ಕುಡಿದಿದ್ದ. ನಮ್ಮ ಪಾಲಿಸಿಯ ಷರತ್ತು ಮತ್ತು ನಿಯಮಗಳ ಉಲ್ಲಂಘನೆಯಾಗಿದೆ ಎಂಬ ಕಾರಣ ಹೇಳಿ, ಅಪಘಾತದಲ್ಲಿ ಸಂತ್ರಸ್ತರಾದ ಉಳಿದವರಿಗೆ ಪರಿಹಾರ ನಿರಾರಕಣೆ ಮಾಡುವಂತಿಲ್ಲ. ಪ್ರಾಥಮಿಕವಾಗಿ ಅವರಿಗೆ ಏನು ಪರಿಹಾರ ಸಲ್ಲಬೇಕೋ ಅದನ್ನು ಕೊಡಲೇಬೇಕು. ಆದರೆ ಬಳಿಕ ಕುಡಿದು ಅಪಘಾತ ಮಾಡಿದ ಚಾಲಕನಿಂದ ಪರಿಹಾರ ಮೊತ್ತದ ಹಣ ವಸೂಲು ಮಾಡಬಹುದು ಎಂದು ಕೇರಳ ಹೈಕೋರ್ಟ್​ ಆದೇಶದಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ISRO Spying Case | ನಂಬಿ ನಾರಾಯಣನ್‌ ವಿರುದ್ಧದ ಆರೋಪ ಸುಳ್ಳು, ಇದು ಜಾಗತಿಕ ಪಿತೂರಿ, ಕೇರಳ ಹೈಕೋರ್ಟ್‌ಗೆ ಸಿಬಿಐ ಮಾಹಿತಿ

2013ರಲ್ಲಿ ನಡೆದಿದ್ದ ಕೇಸ್​ವೊಂದರ ವಿಚಾರಣೆ ನಡೆಸಿದ ಹೈಕೋರ್ಟ್​ ನ್ಯಾಯಾಧೀಶ ಸೋಫಿ ಥಾಮಸ್​ ಈ ತೀರ್ಪು ನೀಡಿದ್ದಾರೆ. ‘2013ರ ಡಿಸೆಂಬರ್​ 1ರಂದು ಕೇರಳದ ಮಲಪ್ಪುರಂ ನಿವಾಸಿ ಮೊಹಮ್ಮದ್​ ರಶೀದ್​ ಎಂಬುವರು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ ಅವರ ಆಟೋಕ್ಕೆ ಕಾರೊಂದು ಬಂದು ಡಿಕ್ಕಿ ಹೊಡೆದಿತ್ತು. ಇದರಲ್ಲಿ ಮೊಹಮ್ಮದ್​ ರಶೀದ್​ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಪರಿಹಾರಕ್ಕಾಗಿ ಕ್ಲೇಮ್​​ ಮಾಡಿದಾಗ, ಇನ್ಶೂರೆನ್ಸ್​ ಕಂಪನಿ ‘ಡಿಕ್ಕಿ ಹೊಡೆದ ಕಾರಿನ ಚಾಲಕ ಮದ್ಯಪಾನ ಮಾಡಿದ್ದ. ಹೀಗಾಗಿ ಈ ಪ್ರಕರಣದಲ್ಲಿ ಯಾರಿಗೂ ಪರಿಹಾರ ನೀಡಲು ಸಾಧ್ಯವಿಲ್ಲ’ ಎಂದು ವಾದಿಸಿತ್ತು. ವಿಮಾ ಕಂಪನಿಯ ವಿರುದ್ಧ ಮೊಹಮ್ಮದ್​ ರಶೀದ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಈಗ ತೀರ್ಪು ಹೊರಬಿದ್ದಿದೆ. ಚಾಲಕ ಕುಡಿದಿದ್ದ ಎಂದು ಅದರಲ್ಲಿ ಪ್ರಯಾಣಿಸುತ್ತಿದ್ದವರಿಗೆ ಗೊತ್ತಿರಲೇಬೇಕು ಎಂದೇನೂ ಇಲ್ಲ. ಹೀಗಾಗಿ ಆತ ಮದ್ಯಪಾನ ಮಾಡಿದ್ದ ಎಂಬ ಕಾರಣಕ್ಕೆ ಉಳಿದವರಿಗೆ ಪರಿಹಾರ ನಿರಾಕರಿಸುವಂತಿಲ್ಲ ಎಂದು ಹೇಳಿದೆ.

Exit mobile version