ನವದೆಹಲಿ: ಎಲ್ಲ ಕಳ್ಳರ ಸರ್ನೇಮ್ಗಳೂ ಮೋದಿ ಎಂದೇ ಯಾಕೆ ಇರುತ್ತದೆ ಎಂದು, 2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಶ್ನಿಸಿದ್ದ ಕೇಸ್ನಲ್ಲಿ ರಾಹುಲ್ ಗಾಂಧಿ (Rahul Gandhi)ದೋಷಿ ಎಂದು ಗುಜರಾತ್ನ ಸೂರತ್ ಕೋರ್ಟ್ ತೀರ್ಪು ನೀಡಿದೆ. ನಾಲ್ಕು ವರ್ಷಗಳ ಹಿಂದಿನ ಈ ಕೇಸ್ನ ವಿಚಾರಣೆಯನ್ನು ಫೆಬ್ರವರಿಯಲ್ಲಿ ಕೋರ್ಟ್ ಪೂರ್ಣಗೊಳಿಸಿ, ತೀರ್ಪನ್ನು ಇಂದು (ಮಾ.23) ಕಾಯ್ದಿರಿಸಿತ್ತು. ಇಂದು ಅಂತಿಮ ತೀರ್ಪು ಹೊರಬೀಳಲಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಕೂಡ ಕೋರ್ಟ್ಗೆ ಹಾಜರಾಗಿದ್ದರು. ಅವರಿಂದು ವಿಚಾರಣೆ ವೇಳೆ ಕೋರ್ಟ್ನಲ್ಲಿ ‘ನಾನು ಲೋಕಸಭೆ ಚುನಾವಣೆ ವೇಳೆ ಈ ಹೇಳಿಕೆ ಕೊಡುವಾಗ ನನ್ನ ಮನಸಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ’ ಎಂದು ಹೇಳಿದ್ದಾಗಿ ವರದಿಯಾಗಿದೆ. ಅಂದರೆ ಎಲ್ಲ ಕಳ್ಳರ ಸರ್ನೇಮ್ಗಳೂ ಮೋದಿ ಎಂದೇ ಇರುತ್ತದೆ ಎಂಬುದನ್ನು ಯಾವುದೇ ಕೆಟ್ಟ ಭಾವನೆಯಲ್ಲಿ ಹೇಳಿಲ್ಲ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯನ್ನು ವ್ಯಂಗ್ಯ ಮಾಡುವ ಭರದಲ್ಲಿ ಇಂಥದ್ದೊಂದು ಹೇಳಿಕೆ ನೀಡಿದ್ದರು. ಭಾರತದಲ್ಲಿ ಹಗರಣ ಮಾಡಿ, ಪರದೇಶಕ್ಕೆ ಪರಾರಿಯಾಗಿರುವ ಲಲಿತ್ ಮೋದಿ, ನೀರವ್ ಮೋದಿ ಹೆಸರನ್ನು ಉಲ್ಲೇಖಿಸಿ, ತನ್ಮೂಲಕ ಪ್ರಧಾನಿಯವರನ್ನು ಟೀಕಿಸಿದ್ದರು. ಆದರೆ ಮೋದಿ ಸರ್ನೇಮ್ ಬಗ್ಗೆ ಅವಹೇಳನ ಮಾಡಿದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಕೋರ್ಟ್ ಮೆಟ್ಟಿಲೇರಿದ್ದರು. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿಯಾಗಿದ್ದು, ಅವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂಪಾಯಿ ದಂಡವನ್ನು ಕೋರ್ಟ್ ವಿಧಿಸಿದೆ. ಸದ್ಯ ರಾಹುಲ್ ಗಾಂಧಿ ಜಾಮೀನು ಪಡೆದು ಶಿಕ್ಷೆಯಿಂದ ಪಾರಾಗಿದ್ದಾರೆ.
ಇನ್ನು ತಾವು ದೋಷಿ ಎಂದು ಕೋರ್ಟ್ ತೀರ್ಪು ನೀಡಿದ ಬಳಿಕ ಟ್ವೀಟ್ ಮಾಡಿದ ರಾಹುಲ್ ಗಾಂಧಿ ಮಹಾತ್ಮ ಗಾಂಧಿಯವರ ಹೇಳಿಕೆಯೊಂದನ್ನು ಬರೆದುಕೊಂಡಿದ್ದಾರೆ. ’ನನ್ನ ಧರ್ಮ ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದೆ. ಸತ್ಯವೇ ನನ್ನ ದೇವರು. ಅದನ್ನ ಪಡೆಯಲು ಅಹಿಂಸೆಯೇ ಸಾಧನ’ ಎಂಬ ವಾಕ್ಯವನ್ನು ಬರೆದಿದ್ದಾರೆ.
ರಾಹುಲ್ ಗಾಂಧಿಯವರ ಪರ ವಕೀಲರು ವಾದ ಮಂಡಿಸಿ ‘ರಾಹುಲ್ ಗಾಂಧಿ ವಿರುದ್ಧ ಪೂರ್ಣೇಶ್ ಮೋದಿ ಅವರು ಕೇಸ್ ಹಾಕಲು ಸಾಧ್ಯವೇ ಇಲ್ಲ. ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟಾರ್ಗೆಟ್ ಮಾಡಿದ್ದರು. ಹೀಗಾಗಿ ನರೇಂದ್ರ ಮೋದಿಯವರು ದೂರು ಕೊಡಬೇಕಿತ್ತು. ಹಾಗೊಮ್ಮೆ ಅವರು ದೂರು ಕೊಟ್ಟರೆ ಮಾತ್ರ ಮಾನ್ಯಮಾಡಬೇಕು. ಪೂರ್ಣೇಶ್ ಮೋದಿ ನೀಡಿದ ದೂರನ್ನು ಮಾನ್ಯ ಮಾಡಬಾರದು’ ಎಂದು ಹೇಳಿದ್ದರು. ಇದೇ ಕೇಸ್ಗೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿಯವರು ತಮ್ಮ ಹೇಳಿಕೆ ದಾಖಲಿಸಲು, 2021ರ ಅಕ್ಟೋಬರ್ನಲ್ಲಿ ಸೂರತ್ ಕೋರ್ಟ್ಗೆ ಭೇಟಿ ಕೊಟ್ಟಿದ್ದರು. ಅದಾದ ಮೇಲೆ ಅವರು ಇಲ್ಲಿಗೆ ಬಂದಿರಲಿಲ್ಲ.