Site icon Vistara News

Vani Jayaram: ಸಂಗೀತಕ್ಕಾಗಿ ಬ್ಯಾಂಕ್​ ಉದ್ಯೋಗವನ್ನೇ ಬಿಟ್ಟವರು ವಾಣಿ ಜಯರಾಂ; ಸಾಧನೆಗೆ ಬೆಂಬಲವಾಗಿ ನಿಂತಿದ್ದರು ಪತಿ

Vani Jayaram Post Mortem

#image_title

ಕನ್ನಡ, ಹಿಂದಿ, ತೆಲುಗು, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ, 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ (Vani Jayaram) ಇಂದು ಚೆನ್ನೈನ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಹಳೇ ಸಿನಿಮಾಗಳನ್ನು ನೋಡಿದವರಿಗೆ ವಾಣಿ ಜಯರಾಂ ಧ್ವನಿ ಚಿರಪರಿಚಿತ. ಅದೆಷ್ಟೋ ಜನ ವಾಣಿ ಜಯರಾಂ ಅವರು ಕರ್ನಾಟಕದವರೇ ಎಂದುಕೊಂಡವರೂ ಇದ್ದಾರೆ. ವಾಣಿ ಜಯರಾಂ ಎಲ್ಲಿಯವರು? ಅವರ ತಂದೆ-ತಾಯಿ, ಪತಿ-ಮಕ್ಕಳ ಬಗೆಗಿನ ವಿವರ ಇಲ್ಲಿದೆ.

ವಾಣಿ ಜಯರಾಂ ಮೂಲತಃ ತಮಿಳುನಾಡಿನವರು. ಇಲ್ಲಿನ ವೆಲ್ಲೂರಿನಲ್ಲಿ 1945ರ ನವೆಂಬರ್​ 30ರಂದು ಜನಿಸಿದ್ದಾರೆ. ಅಪ್ಪ ದೊರೆಸ್ವಾಮಿ-ಅಮ್ಮ ಪದ್ಮಾವತಿ. ಇವರ ಮೊದಲ ಹೆಸರು ಕಲೈವಾಣಿ. ಈ ದಂಪತಿಯ ಆರು ಮಂದಿ ಪುತ್ರಿಯರು ಮತ್ತು ಮೂವರು ಪುತ್ರರಲ್ಲಿ ಐದನೇಯವರಾಗಿ ವಾಣಿ ಜಯರಾಂ (ಕಲೈವಾಣಿ) ಜನಿಸಿದರು. ಸಂಗೀತ ಕುಟುಂಬದಲ್ಲಿ ಜನಿಸಿದ ಅವರಿಗೆ ಸಹಜವಾಗಿಯೇ ಸಂಗೀತಾಸಕ್ತಿ ಇತ್ತು. ಅದರಂತೆ ಬಾಲ್ಯದಿಂದಲೇ ಪ್ರಮುಖ ಸಂಗೀತ ದಿಗ್ಗಜರಿಂದ ಸಂಗೀತಾಭ್ಯಾಸವನ್ನೂ ಮಾಡಿದರು. 8ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮದ್ರಾಸ್​ ಆಕಾಶವಾಣಿಯಲ್ಲಿ ಹಾಡಿದರು. ಮದ್ರಾಸ್​ ಯೂನಿವರ್ಸಿಟಿಯ ಕ್ವೀನ್​ ಮೇರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ, ತಮಿಳುನಾಡಿನಲ್ಲಿ ಇರುವ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ಶಾಖೆಯಲ್ಲಿ ಕೆಲಸ ಮಾಡಿದರು. 1967ರಲ್ಲಿ ಅಲ್ಲಿಂದ ಹೈದರಾಬಾದ್​ಗೆ ಟ್ರಾನ್ಸ್​ಫರ್​ ಆದರು.

ಜಯರಾಂ ಕೈಹಿಡಿದ ವಾಣಿ
ಅದಾಗಿ ಎರಡೇ ವರ್ಷಕ್ಕೆ, 1969ರಲ್ಲಿ ಜಯರಾಂ ಅವರನ್ನು ಮದುವೆಯಾದರು. ಜಯರಾಂ ತಾಯಿ ಪದ್ಮಾಸ್ವಾಮಿನಾಥನ್​ ಕೂಡ ಕರ್ನಾಟಕ್​ ಸಂಗೀತ ಗಾಯಕಿಯಾಗಿದ್ದರು. ಹಾಗೇ, ಸಾಮಾಜಿಕ ಹೋರಾಟ ಕಾರ್ಯಕರ್ತೆಯಾಗಿದ್ದರು. ಹೀಗಾಗಿ ವಾಣಿ ಅವರಿಗೆ ಪತಿಯ ಮನೆಯಲ್ಲೂ ಅವರ ಗಾಯನಕ್ಕೆ ಸಂಪೂರ್ಣ ಬೆಂಬಲ ಸಿಕ್ಕಿತು. ಇನ್ನು ಮದುವೆಯಾದ ವರ್ಷವೇ ಅವರು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಮುಂಬಯಿ ಶಾಖೆಗೆ ವರ್ಗಾವಣೆ ಮಾಡಿಸಿಕೊಂಡು, ಕುಟುಂಬ ಸಮೇತ ಅಲ್ಲಿಗೆ ಹೋದರು. ಪತಿ ಜಯರಾಂ ಸಹಕಾರದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದರು. ನಂತರ ತಮ್ಮ ಬ್ಯಾಂಕ್​ ಕೆಲಸವನ್ನು ಬಿಟ್ಟು, ಸಂಗೀತವನ್ನೇ ವೃತ್ತಿಯನ್ನಾಗಿ ತೆಗೆದುಕೊಂಡರು. ಮೊದಲಿಗೆ ಸಂಗೀತ ಸಂಯೋಜಕ ವಸಂತ ದೇಸಾಯಿ ಅವರ ಮರಾಠಿ ಅಲ್ಬಂನಲ್ಲಿ ಹಾಡಿದರು. ಆದರೆ ಹಿನ್ನೆಲೆ ಗಾಯಕಿಯಾಗಿ ಅವರ ಜೀವನ ಶುರುವಾಗಿದ್ದು 1973ರಲ್ಲಿ, ತೆಲುಗು ಚಿತ್ರರಂಗದಲ್ಲಿ. ವಾಣಿ -ಜಯರಾಂ ದಂಪತಿಗೆ ಒಬ್ಬ ಮಗ ಹುಟ್ಟಿ, ಅವರ ಮದುವೆಯೂ ಆಗಿದೆ. ವಾಣಿ ಸುಮಾರು 50 ವರ್ಷಗಳ ಕಾಲ ಹಿನ್ನೆಲೆ ಗಾಯಕಿಯಾಗಿ, ಅನೇಕಾನೇಕ ಹಾಡು ಹಾಡಿದ್ದಾರೆ.

ಇದನ್ನೂ ಓದಿ: Vani Jayaram Passes Away: ಕನ್ನಡದಲ್ಲಿ 600 ಸೇರಿ 10 ಸಾವಿರಕ್ಕೂ ಅಧಿಕ ಹಾಡು ಹಾಡಿದ್ದ ವಾಣಿ ಜಯರಾಮ್‌

ಇಲ್ಲಿವೆ ನೋಡಿ ವಾಣಿ ಜಯರಾಮ್​ ಬಗೆಗಿನ ಕೆಲವು ಸಂಗತಿಗಳು
1.ವಾಣಿ ಜಯರಾಂ ಹಲವು ಹಾಡುಗಳನ್ನು ಹಾಡಿದ್ದರೂ, ಹಿನ್ನೆಲೆ ಗಾಯಕಿಯಾಗಿ ಹೆಚ್ಚಾಗಿ ತೊಡಗಿಸಿಕೊಂಡಿದ್ದು ದಕ್ಷಿಣ ಭಾರತದ ಚಿತ್ರರಂಗದಲ್ಲಿ.
2. ಎಲ್ಲ ಭಾಷೆಗಳಲ್ಲಿ ಸೇರಿ 10 ಸಾವಿರಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಹಾಡಿದ್ದಾರೆ.
3. ಚಲನಚಿತ್ರ ಗೀತೆಗಳಷ್ಟೇ ಅಲ್ಲ, ಅದರೊಂದಿಗೆ ಸಾವಿರಾರು ಭಕ್ತಿಗೀತೆಗಳಲ್ಲಿ, ಖಾಸಗಿ ಅಲ್ಬಂಗಳಲ್ಲೂ ಹಾಡಿದ್ದಾರೆ. ಅದರೊಂದಿಗೆ ದೇಶ ಮತ್ತು ವಿದೇಶಗಳಲ್ಲಿ ಸಂಗೀತ ಕಚೇರಿಗಳನ್ನೂ ನಡೆಸಿದ್ದಾರೆ.
4. ಅತ್ಯುತ್ತಮ ಹಿನ್ನೆಲೆ ಗಾಯಕಿ ಎಂಬ ವಿಭಾಗದಡಿ ಮೂರು ಬಾರಿ ಅವರು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದರೊಂದಿಗೆ ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಗುಜರಾತ್​ ರಾಜ್ಯ ಸರ್ಕಾರಗಳು ನೀಡುವ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. 2023ನೇ ಸಾಲಿನ ಪದ್ಮ ಭೂಷಣ ಪ್ರಶಸ್ತಿಗೆ ವಾಣಿ ಜಯರಾಂ ಭಾಜನರಾಗಿದ್ದರೂ ಅವರು ಸ್ವೀಕರಿಸುವ ಮೊದಲನೇ ನಿಧನರಾಗಿದ್ದಾರೆ.
5.ಮೊಟ್ಟಮೊದಲು ಹಿನ್ನೆಲೆ ಗಾಯಕಿಯಾಗಿ ಅಭಿಮಾನವಂತುಲು ಎಂಬ ತೆಲುಗು ಸಿನಿಮಾಲದಲ್ಲಿ ‘ಎಪ್ಪತಿವಾಲೆ ಕಡೂರ ನಾ ಸ್ವಾಮಿ’ ಎಂಬ ಹಾಡನ್ನು ಹಾಡಿದ್ದಾರೆ. ಇದು ಶಾಸ್ತ್ರೀಯ ನೃತ್ಯಕ್ಕಾಗಿ ರೆಕಾರ್ಡ್ ಮಾಡಲಾದ ಹಾಡು ಆಗಿತ್ತು.

Exit mobile version