ಪ್ರಧಾನಿ ನರೇಂದ್ರ ಮೋದಿ (PM Modi) ವಿಶ್ವದ ಜನಪ್ರಿಯ ವ್ಯಕ್ತಿ. ಶೇ.78ರಷ್ಟು ಅಪ್ರೂವಲ್ ರೇಟಿಂಗ್ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಕಳೆದವಾರವಷ್ಟೇ ವರದಿಯಾಗಿತ್ತು. ಇದೀಗ ಭಾರತದಲ್ಲಿ ಅದಾನಿ ಸಮೂಹದ ಷೇರು ಕುಸಿತಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿಯನ್ನೇ ಟಾರ್ಗೆಟ್ ಮಾಡಿ ಪ್ರತಿಪಕ್ಷಗಳು ಟೀಕಿಸುತ್ತಿವೆ. ನರೇಂದ್ರ ಮೋದಿಯವರೇ ಗೌತಮ್ ಅದಾನಿಯನ್ನು ರಕ್ಷಿಸುತ್ತಿದ್ದಾರೆ ಎಂದು ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಹಾಗೆ, ಇತ್ತೀಚೆಗೆ ಬಿಬಿಸಿ ಡಾಕ್ಯುಮೆಂಟರಿ ಕೂಡ ಪ್ರಧಾನಿ ನರೇಂದ್ರ ಮೋದಿಯನ್ನು ನಕಾರಾತ್ಮಕವಾಗಿ ಬಿಂಬಿಸಿದೆ. ಪ್ರಧಾನಿ ಮೋದಿ ವಿರುದ್ಧ ಒಂದರ ಬೆನ್ನಿಗೆ ಒಂದರಂತೆ ಆರೋಪಗಳು ಬರುತ್ತಿರುವ ಈ ಹೊತ್ತಲ್ಲಿ, ಅವರ ಜನಪ್ರಿಯತೆ ಕಡಿಮೆಯಾಗಿರಬಹುದಾ? ಹೀಗೊಂದು ಪ್ರಶ್ನೆ ಉದ್ಭವ ಆಗಿದೆ.
ಇಷ್ಟೆಲ್ಲ ಆರೋಪಗಳ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಅದಾನಿ ವಿಷಯವಾಗಲೀ, ಬಿಬಿಸಿ ಡಾಕ್ಯುಮೆಂಟರಿಯಾಗಲೀ ಯಾವವೂ ಅವರ ಪ್ರಸಿದ್ಧಿಗೆ ಬಾಧಿಸಿಲ್ಲ ಎನ್ನುತ್ತಿದೆ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್. ಮಾರ್ನಿಂಗ್ ಕನ್ಸಲ್ಟ್ ಕಂಪನಿಯು ಜನವರಿ 26ರಿಂದ 31ರವರೆಗೆ ವಿಶ್ವದ ಜನಪ್ರಿಯ ವ್ಯಕ್ತಿ ಯಾರೆಂಬ ಬಗ್ಗೆ ಸಮೀಕ್ಷೆ ನಡೆಸಿತ್ತು. ಬಳಿಕ ನೀಡಿದ ವರದಿಯ ಪಟ್ಟಿಯಲ್ಲಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿ ಇದ್ದರು. ಅದಾದ ಮೇಲೆಯೇ ಈ ಬಿಬಿಸಿ ಡಾಕ್ಯುಮೆಂಟರಿ, ಅದಾನಿ ವಿಷಯಗಳು ಮುನ್ನೆಲೆಗೆ ಬಂದಿವೆ.
ಇಷ್ಟಾದ ಮೇಲೆ ನಡೆಸಿದ ಸಮೀಕ್ಷೆಯಲ್ಲೂ ಮೋದಿಯೇ ಬಹುಪಾಲು ಜನರಿಗೆ ಮೋದಿಯೇ ಫೆವರಿಟ್ ಎಂದು ಮತದಾನ ಸಮೀಕ್ಷಾ ಏಜೆನ್ಸಿ ಸಿ-ವೋಟರ್ ಹೇಳಿದೆ. ಶೇ.70ರಷ್ಟು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕೆಲಸದ ಬಗ್ಗೆ ತೃಪ್ತಿಯಿದೆ. ಇನ್ನು ಶೇ.30ರಷ್ಟು ಮಂದಿಗೆ ಅಷ್ಟೊಂದು ತೃಪ್ತಿಯಿಲ್ಲ’ ಎಂದಿದೆ. 2022ರ ನವೆಂಬರ್ನಿಂದಲೂ ಇದೇ ರೇಟಿಂಗ್ ಮುಂದುವರಿಯುತ್ತಿದೆ ಎಂದು ಸಿ ವೋಟರ್ ತಿಳಿಸಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ. ಜನವರಿಯಲ್ಲಿ ಇದೇ ಸಿ ವೋಟರ್ ಜನಾಭಿಪ್ರಾಯದ ಸಮೀಕ್ಷೆ ನಡೆಸಿತ್ತು. ಆಗಲೂ ಕೂಡ ಸರ್ವೇದಲ್ಲಿ ಪಾಲ್ಗೊಂಡಿದ್ದ ಶೇ.72ರಷ್ಟು ಜನ ಮೋದಿಗೆ ಗುಡ್ ಎಂದಿದ್ದರು.