Site icon Vistara News

Amrit Mahotsav | ಪಂಜಾಬ್‌ನಲ್ಲಿ ಉಗ್ರರ ಜಾಲ ಭೇದಿಸಿದ ಪೊಲೀಸರು, ನಾಲ್ವರ ಬಂಧನ

ಚಂಡೀಗಢ: ಸ್ವಾತಂತ್ರ್ಯದ ಅಮೃತ ಮಹೋತ್ಸವ (Amrit Mahotsav)ದ ಆಚರಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಪಂಜಾಬ್‌ನಲ್ಲಿ ಪೊಲೀಸರು ಐಸಿಸ್‌ ಜಾಲವನ್ನು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸೋಮವಾರ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳ ವೇಳೆ ನಡೆಸಲು ಇವರು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.

ಪಂಜಾಬ್‌ ಹಾಗೂ ದೆಹಲಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರ ಬಳಿ ಮೂರು ಹ್ಯಾಂಡ್‌ ಗ್ರೆನೇಡ್‌, ಒಂದು ಸುಧಾರಿತ ಸ್ಫೋಟಕ ಸಾಧನ (ಐಇಡಿ), ಎರಡು ಪಿಸ್ತೂಲ್‌ ಹಾಗೂ 40 ಕ್ಯಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಬಂಧಿತರು ಕೆನಡಾ ಮೂಲದ ಉಗ್ರ ಅರ್ಶ್‌ ದಲ್ಲಾ ಹಾಗೂ ಆಸ್ಟ್ರೇಲಿಯಾ ಮೂಲದ ಗುರ್ಜಂತ್‌ ಸಿಂಗ್‌ ಜತೆ ಸಂಪರ್ಕ ಹೊಂದಿದ್ದರು ಎಂದು ಪಂಜಾಬ್‌ ಪೊಲೀಸರು ತಿಳಿಸಿದ್ದಾರೆ.

ದೆಹಲಿಯಲ್ಲಿ ಬಿಗಿ ಬಂದೋಬಸ್ತ್‌

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಯ ಕೆಂಪುಕೋಟೆ ಸೇರಿ ಎಲ್ಲೆಡೆ ಭಾರಿ ಭದ್ರತೆ ಒದಗಿಸಲಾಗಿದೆ. ಅಪಾರ ಪ್ರಮಾಣದ ಭದ್ರತಾ ಸಿಬ್ಬಂದಿ, ಪೊಲೀಸರು, ಡ್ರೋನ್‌ಗಳನ್ನು ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ದೆಹಲಿಯ ಎಂಟೂ ಗಡಿಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ.

ಇದನ್ನೂ ಓದಿ | Terrorist Arrest | ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಉಗ್ರ ಕೃತ್ಯ; ದೆಹಲಿಯಲ್ಲಿ ಐಎಸ್‌ ಭಯೋತ್ಪಾದಕ ಬಂಧನ

Exit mobile version