ಕಾಂಗ್ರೆಸ್ ಹಿರಿಯ ನಾಯಕಿ, 76 ವರ್ಷದ ಸೋನಿಯಾ ಗಾಂಧಿ (Sonia Gandhi) ಶೀಘ್ರದಲ್ಲೇ ರಾಜಕೀಯ ಜೀವನಕ್ಕೆ ವಿದಾಯ ಹೇಳಿ, ಅಧಿಕೃತವಾಗಿ ತೆರೆಮರೆಗೆ ಸರಿದುಬಿಡುತ್ತಾರಾ? -ರಾಯ್ಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಇಂದು ಅವರು ಮಾಡಿದ ಭಾಷಣ, ನಮ್ಮಲ್ಲಿ ಹೀಗೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. 2004 ಮತ್ತು 2009ರಲ್ಲಿ ಕಾಂಗ್ರೆಸ್ಗೆ ಸಿಕ್ಕ ಗೆಲುವು ನನಗೆ ತೃಪ್ತಿತಂದುಕೊಟ್ಟಿತ್ತು, ಅದಕ್ಕೂ ಮಿಗಿಲಾಗಿ, ಈಗ ಕಾಂಗ್ರೆಸ್ಗೆ ಒಂದು ಮಹತ್ವದ ತಿರುವು ಕೊಟ್ಟ ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ಇನಿಂಗ್ಸ್ ಮುಕ್ತಾಯವಾಗುತ್ತಿರಬಹುದು. ಇದು ನನಗೆ ಅತ್ಯಂತ ತೃಪ್ತಿ-ಸಂತೋಷ ಕೊಟ್ಟ ವಿಷಯ’ ಎಂದು ಅವರು ಹೇಳಿದರು. ಅವರ ಇದೊಂದು ಮಾತು ಸೋನಿಯಾ ರಾಜಕೀಯ ನಿವೃತ್ತಿಯ ಅನುಮಾನ ಹುಟ್ಟುಹಾಕಿದೆ.
ಅದರಾಚೆಗೆ, ಇಂದು ಮಹಾ ಅಧಿವೇಶನದಲ್ಲಿ ಸೋನಿಯಾ ಗಾಂಧಿ ಭಾಷಣದ ಹೊತ್ತು ತುಸು ಭಾವನಾತ್ಮಕವಾಗಿತ್ತು. ಸೋನಿಯಾ ಗಾಂಧಿ ಭಾಷಣಕ್ಕೂ ಪೂರ್ವ ಅವರ ಬಗ್ಗೆ ಒಂದು ಕಿರುಚಿತ್ರ ಪ್ರದರ್ಶಿಸಲಾಯಿತು. ಕಾಂಗ್ರೆಸ್ ಅಧ್ಯಕ್ಷೆಯಾಗಿ 20ವರ್ಷ ಅವರು ಪಕ್ಷವನ್ನು ಮುನ್ನಡೆಸಿದ್ದು, 2004ರಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆದ್ದಾಗ, ಪ್ರಧಾನಿ ಆಗುವ ಅವಕಾಶ ಇದ್ದರೂ ಆ ಹುದ್ದೆಯನ್ನು ಬೇಡ ಎಂದು ಹೇಳಿದ್ದನ್ನೆಲ್ಲ ಈ ಕಿರುಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. ಕಿರುಚಿತ್ರ ಮುಗಿಯುತ್ತಿದ್ದಂತೆ ಕಾಂಗ್ರೆಸ್ನ ಎಲ್ಲ ನಾಯಕರೂ ಎದ್ದುನಿಂತು ಚಪ್ಪಾಳೆ ಹೊಡೆದು, ಸೋನಿಯಾ ಗಾಂಧಿಯವರಿಗೆ ಭಾವನಾತ್ಮಕ ಗೌರವ ಸಲ್ಲಿಸಿದರು. ಬಳಿಕ ಸೋನಿಯಾ ಗಾಂಧಿ ತಮ್ಮ ಭಾಷಣ ಶುರು ಮಾಡಿದರು.
ಇನ್ನು ಸೋನಿಯಾ ಗಾಂಧಿ ನನ್ನ ಇನಿಂಗ್ಸ್ ಮುಕ್ತಾಯ ಆಗಬಹುದು ಎಂದು ಹೇಳಿದ್ದು ಯಾವ ಅರ್ಥದಲ್ಲಿ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆ ಬಗ್ಗೆ ಈಗ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಸೋನಿಯಾ ಗಾಂಧಿ 2024ರ ಲೋಕಸಭಾ ಚುನಾವಣೆಯಿಂದ ದೂರ ಉಳಿಯುತ್ತಾರಾ? ಚುನಾವಣಾ ರಾಜಕೀಯದಿಂದಷ್ಟೇ ದೂರವಿದ್ದು, ಪಕ್ಷದಲ್ಲಿ ಸಕ್ರಿಯರಾಗಿರುತ್ತಾರಾ? ಅಥವಾ ಒಟ್ಟಾರೆ ರಾಜಕೀಯ ಕ್ಷೇತ್ರದಿಂದಲೇ ಅಂತರ ಕಾಯ್ದುಕೊಳ್ಳುತ್ತಾರಾ?-ಹೀಗೆ ಹಲವು ಪ್ರಶ್ನೆಗಳು ಚರ್ಚೆಯಾಗುತ್ತಿವೆ.
ಇದನ್ನೂ ಓದಿ: ‘ನನ್ನ ಇನಿಂಗ್ಸ್ ಮುಕ್ತಾಯವಾಗಬಹುದು’: ರಾಜಕೀಯ ನಿವೃತ್ತಿ ಸುಳಿವು ನೀಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ
ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ವಾದ್ರಾ?
ಸೋನಿಯಾ ಗಾಂಧಿಯವರು ತಮ್ಮ ಇನಿಂಗ್ಸ್ ಮುಗಿಸಿ, ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಚುನಾವಣಾ ರಾಜಕೀಯಕ್ಕೆ ಇಳಿಸುತ್ತಿರಬಹುದಾ ಎಂಬ ಅನುಮಾನವೂ ಇಂದಿನ ಭಾಷಣ ಕೇಳಿದ ಮೇಲೆ ಎದ್ದಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಪಕ್ಷ ಸಂಘಟನೆ, ಚುನಾವಣಾ ಸಮೀಪದ ಪ್ರಚಾರಗಳಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸಿಲ್ಲ. ಆದರೆ 2024ರ ಚುನಾವಣೆಯಲ್ಲಿ ಪ್ರಿಯಾಂಕಾ ತನ್ನ ಅಮ್ಮನ ಕ್ಷೇತ್ರ ರಾಯ್ಬರೇಲಿಯನ್ನು ಪ್ರತಿನಿಧಿಸಬಹುದು ಎನ್ನಲಾಗಿದೆ. ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ಇನಿಂಗ್ಸ್ ಮುಗಿಯಿತು ಎಂದ ಸೋನಿಯಾ ಗಾಂಧಿ 2024ರ ಚುನಾವಣೆಯಲ್ಲಿ ಮತ್ತೆ ಕಣಕ್ಕೆ ಇಳಿಯಲಾರರು. ರಾಜಕಾರಣದ ಹಾದಿಯಲ್ಲಿ ತಾವು ಪಕ್ಕಕ್ಕೆ ಸರಿದು, ಮಗಳು ಪ್ರಿಯಾಂಕಾಗೆ ಮುನ್ನಡೆಯಲು ಅವಕಾಶ ಕಲ್ಪಿಸಿಕೊಡಲಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ.
ಅಂದಹಾಗೇ. ಇಂದಿನ ಸನ್ನಿವೇಶ ಕೂಡ ಹಾಗೇ ಇತ್ತು. ಬೆಳಗ್ಗೆಯೇ ರಾಯ್ಪುರಕ್ಕೆ ಬಂದ ಪ್ರಿಯಾಂಕಾ ಗಾಂಧಿ ವಾದ್ರಾಗೆ ಭರ್ಜರಿ ಸ್ವಾಗತ ಸಿಕ್ಕಿತು. ಗುಲಾಬಿ ಹೂವಿನ ದಳಗಳ ಕಾರ್ಪೆಟ್ ಮೇಲೆ ಅವರನ್ನು ಮಹಾ ಅಧಿವೇಶನಕ್ಕೆ ಕರೆತರಲಾಯಿತು. ಹಾಗೇ, ಮಧ್ಯಾಹ್ನದ ಹೊತ್ತಿಗೆ ಸೋನಿಯಾ ಗಾಂಧಿಯರ ಎರಡು ದಶಕಗಳ ರಾಜಕೀಯ ಜೀವನವನ್ನು ಸ್ಮರಿಸುವಂಥ ಕಿರುಚಿತ್ರ ಪ್ರದರ್ಶಿಸಿ, ಅವರಿಗೆ ಭಾವನಾತ್ಮಕ ಗೌರವ ಸಲ್ಲಿಸಲಾಯಿತು. ಇದು ಅವರ ವಿದಾಯದ ಸೂಚನೆಯೇ ಆಗಿರಬಹುದಾ?