ನವ ದೆಹಲಿ: ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ, ಬಿಜೆಪಿ ಹಿರಿಯ ನಾಯಕ ನಿತಿನ್ ಗಡ್ಕರಿ (Nitin Gadkari) ಮತ್ತು ಬಿಜೆಪಿ ಹೈಕಮಾಂಡ್ನ ಮಧ್ಯೆ ಒಳ್ಳೆಯ ಬಾಂಧವ್ಯ ಇಲ್ಲವೆಂಬ ವಿಷಯ ಕಳೆದ ಒಂದೂವರೆ-2ವರ್ಷದಿಂದಲೂ ಕೇಳಿಬರುತ್ತಿದೆ. ಅದರಲ್ಲೂ ಈಗ ಒಂದೆರಡು ದಿನಗಳ ಹಿಂದೆ ನಿತಿನ್ ಗಡ್ಕರಿಯವರು ಆಡಿದ್ದ ಕೆಲವು ಮಾತುಗಳು, ಅವರು ರಾಜಕೀಯ ನಿವೃತ್ತಿ ಪಡೆಯಲಿದ್ದಾರಾ? ಪಕ್ಷದ ಉನ್ನತ ನಾಯಕರೊಂದಿಗೆ ಮುನಿಸು ಮಿತಿಮೀರಿದೆಯಾ? ಎಂಬ ಅನುಮಾನವನ್ನು ಹುಟ್ಟಿಸಿದ್ದವು. ಅದಕ್ಕೀಗ ಸ್ವತಃ ಕೇಂದ್ರ ಸಚಿವ ನಿತಿನ್ ಗಡ್ಕರಿಯವರೇ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ರಾಜಕೀಯ ನಿವೃತ್ತಿ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಅದರಲ್ಲೂ 2022ರ ಆಗಸ್ಟ್ನಲ್ಲಿ ನಿತಿನ್ ಗಡ್ಕರಿಯವರನ್ನು ಪಕ್ಷದ ಸಂಸದೀಯ ಮಂಡಳಿಯಿಂದ ಕೈಬಿಡಲಾಗಿತ್ತು. ಅದಾದ ಮೇಲೆ ನಾಗ್ಪುರದಲ್ಲಿ ಉದ್ಯಮಕ್ಕೆ ಸಂಬಂಧಪಟ್ಟಂತೆ ನಡೆದ ಸಮಾರಂಭದಲ್ಲಿ ಮಾತನಾಡಿದ್ದ ಅವರು ‘ಬೇಕಾದಾಗಷ್ಟೇ ಬಳಸಿ, ಬೇಡವೆಂದಾಗ ಬಿಸಾಡುವ ಪ್ರವೃತ್ತಿ ಬೆಳೆಸಿಕೊಳ್ಳಬಾರದು. ನೀವು ಒಬ್ಬರ ಕೈ ಹಿಡಿದಿದ್ದೀರಿ, ಅವರು ನಿಮ್ಮ ಸ್ನೇಹಿತ ಎಂದಾದರೆ, ಕಷ್ಟವೇ ಇರಲಿ, ಸಂತೋಷದ ಸಮಯವೇ ಇರಲಿ ಆ ಕೈಯನ್ನು ಗಟ್ಟಿಯಾಗಿ ಹಿಡಿದೇ ಇರಿ. ಎಂದಿಗೂ ಬಿಡಬೇಡಿ’ ಎಂದು ಹೇಳಿದ್ದರು. ಅಂದು ನಿತಿನ್ ಗಡ್ಕರಿ ಆಡಿದ್ದ ಮಾತುಗಳು, ಬಿಜೆಪಿ ವರಿಷ್ಠರಿಗೆ ಒಂದು ಸಂದೇಶ ಎಂದೇ ವಿಮರ್ಶಿಸಲಾಗಿತ್ತು.
ಜುಲೈನಲ್ಲಿ ಒಮ್ಮೆ ಮಾತನಾಡಿದ್ದ ನಿತಿನ್ ಗಡ್ಕರಿ, ‘ಕೆಲವೊಮ್ಮ ರಾಜಕೀಯ ನಿವೃತ್ತಿ ಪಡೆಯಬೇಕು ಎನ್ನಿಸುತ್ತದೆ’ ಎಂದು ನೇರವಾಗಿಯೇ ಹೇಳಿದ್ದರು. ಇತ್ತೀಚೆಗೆ ಅಂದರೆ ಮಾರ್ಚ್ 26ರಂದು ನಾಗ್ಪುರದಲ್ಲಿ ಮಾತನಾಡುತ್ತ ‘ನಾನು ಎರಡು ಚುನಾವಣೆಗಳನ್ನು ಗೆದ್ದಿದ್ದು ನಿಜ. ಆದರೂ ನಿಜಕ್ಕೂ ನಾನು ಯೋಗ್ಯ ಎನ್ನಿಸಿದರೆ ಮಾತ್ರ ಅವರು ಮುಂದಿನ ಚುನಾವಣೆಯಲ್ಲಿ ವೋಟ್ ಮಾಡಲಿ. ಈ ವಿಚಾರದಲ್ಲಿ ನಾನು ಯಾರನ್ನೂ ಬಲವಂತ ಮಾಡುವುದಿಲ್ಲ. ಒಂದು ಮಿತಿ ದಾಟಿದ ಮೇಲೆ ನಾನು ಯಾರನ್ನೂ ಓಲೈಸುವುದಿಲ್ಲ. ನನ್ನ ಜಾಗಕ್ಕೆ ಇನ್ಯಾರೇ ಬಂದರೂ ನನಗೆ ಅಭ್ಯಂತರವಿಲ್ಲ. ನಾನು ನನ್ನ ಉಳಿದ ಕೆಲಸಕ್ಕೆ ಹೆಚ್ಚು ಒತ್ತು ಕೊಡುತ್ತೇನೆ’ ಎಂದಿದ್ದರು. ಈ ಮಾತುಗಳು ಸಂಚಲನ ಸೃಷ್ಟಿಸಿದ್ದವು. ನಿತಿನ್ ಗಡ್ಕರಿ ರಾಜಕೀಯ ನಿವೃತ್ತಿ ಪಕ್ಕಾ, ಅವರಿಗೆ 2024ರ ಚುನಾವಣೆಯಲ್ಲಿ ಗ್ಯಾರಂಟಿ ಟಿಕೆಟ್ ಇಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ನಿತಿನ್ ಗಡ್ಕರಿ ಏನಂದ್ರು ಈಗ?
ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಈಗ ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡಿದ್ದಾರೆ. ರಾಜಕೀಯ ನಿವೃತ್ತಿ ಪಡೆಯುವ ಆಶಯ ನನಗೆ ಇಲ್ಲ ಎಂದಿದ್ದಾರೆ. ರತ್ನಗಿರಿಯಲ್ಲಿ, ಮುಂಬಯಿ-ಗೋವಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿಯ ಬಗ್ಗೆ ಮಾಧ್ಯಮಗಳ ಜತೆ ಮಾತನಾಡುವ ಸಂದರ್ಭದಲ್ಲಿ ನಿತಿನ್ ಗಡ್ಕರಿಯವರಿಗೆ ಮಾಧ್ಯಮ ಸಿಬ್ಬಂದಿ ಈ ಬಗ್ಗೆ ಪ್ರಶ್ನಿಸಿದರು. ನೀವು ರಾಜಕೀಯ ನಿವೃತ್ತಿ ಪಡೆಯುತ್ತೀರಂತೆ ಹೌದಾ? ಎಂದು ಕೇಳಿದ್ದಕ್ಕೆ ಉತ್ತರಿಸಿದ ಸಚಿವರು ‘ಇಂಥ ವಿಷಯವನ್ನೆಲ್ಲ ಮಾಧ್ಯಮಗಳು ಸ್ವಲ್ಪ ಜವಾಬ್ದಾರಿಯುತವಾಗಿ ವರದಿ ಮಾಡಬೇಕು. ನನಗೆ ರಾಜಕೀಯ ನಿವೃತ್ತಿ ಪಡೆಯುವ ಆಶಯ ಖಂಡಿತವಾಗಿಯೂ ಇಲ್ಲ’ ಎಂದಿದ್ದಾರೆ.
ಎರಡು ದಿನಗಳ ಹಿಂದೆ ನಿತಿನ್ ಗಡ್ಕರಿ ಅವರು ಹಾಗೆಲ್ಲ ಮಾತನಾಡುತ್ತಿದ್ದಂತೆ ಅವರ ರಾಜಕೀಯ ನಿವೃತ್ತಿ, ಬಿಜೆಪಿ ವರಿಷ್ಠರೊಂದಿಗೆ ಭಿನ್ನಾಭಿಪ್ರಾಯದ ಚರ್ಚೆಗಳು ಜೋರಾಗಿದ್ದವು. ಅದರ ಬೆನ್ನಲ್ಲೇ ಅವರ ಆಪ್ತರೊಬ್ಬರು ಹೇಳಿಕೆ ನೀಡಿ, ‘ನಿತಿನ್ ಗಡ್ಕರಿ ಮಾತುಗಳಿಗೆ ತಪ್ಪು ಅರ್ಥ ಕಲ್ಪಿಸುವುದು ಬೇಡ. ನಾನು ಚೆನ್ನಾಗಿ ಕೆಲಸ ಮಾಡಿದ್ದೇನೆ ಎಂದು ಅನ್ನಿಸಿದರೆ ಮಾತ್ರ ಮತ ಕೊಡಿ ಎಂದು ಸ್ಪಷ್ಟವಾಗಿ ಜನರಿಗೆ ಹೇಳಿದ್ದಾರೆ. ಅಂದರೆ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದೇ ಅರ್ಥವಲ್ಲವೇ? ಅಷ್ಟಕ್ಕೂ ಅವರೇನು ಹೇಳಿದರು ಎಂದು ಸರಿಯಾಗಿ ತಿಳಿದುಕೊಳ್ಳಿ. ಒಂದೊಮ್ಮೆ ಚುನಾವಣೆಯಲ್ಲಿ ಸೋತರೂ ಕೂಡ ತಾನು ರೈತರ ಒಳಿತಿಗಾಗಿ ಕೆಲಸ ಮಾಡುತ್ತಲೇ ಇರುತ್ತೇನೆ ಎಂಬ ಸಂದೇಶ ಕೊಟ್ಟಿದ್ದಾರಷ್ಟೇ’ ಎಂದು ಹೇಳಿದ್ದರು.
ಪಕ್ಷಕ್ಕೆ ಮುಜುಗರ ತರುವ ಹೇಳಿಕೆಗಳು
ನಿತಿನ್ ಗಡ್ಕರಿ ಅವರು ಆರ್ಎಸ್ಎಸ್ನೊಂದಿಗೆ ಪ್ರಬಲ ನಂಟು ಹೊಂದಿದ್ದಾರೆ. 2009ರಿಂದ 2013ರವರೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಬಿಜೆಪಿ ಪಕ್ಷಕ್ಕೆ ಮುಜುಗರ ತರುವ ಹೇಳಿಕೆಗಳನ್ನು ಆಗಾಗ ನೀಡುತ್ತಿದ್ದರು. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಾಗ ‘ಇಷ್ಟೆಲ್ಲ ಸೀಟು ಬರುತ್ತದೆ ಎಂಬುದು ಯಾರಿಗೂ ನಿರೀಕ್ಷೆ ಇರಲಿಲ್ಲ’ ಎಂದು ಹೇಳಿಬಿಟ್ಟಿದ್ದರು. ಮತ್ತೆ ಅದೇ ವರ್ಷ ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್‌ಗಢಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಸೋತಾಗ ‘ರಾಜಕಾರಣಿಗಳು ತಾವು ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸದೆ ಇದ್ದರೆ, ಅದೇ ಜನ ಸಾರ್ವಜನಿಕವಾಗಿ ಅವರಿಗೆ ಪಾಠ ಕಲಿಸುತ್ತಾರೆ’ ಎಂದು ಹೇಳಿದ್ದರು. ಇದೂ ಕೂಡ ಬಿಜೆಪಿಗೆ ಮುಜುಗರ ತಂದಿತ್ತು. ಅದಾದ ಮೇಲೆ ಅವರು ಪದೇಪದೆ ತಮ್ಮದೇ ಪಕ್ಷದ ವಿರುದ್ಧ ಪರೋಕ್ಷವಾಗಿ ಹೇಳಿಕೆಗಳನ್ನು ಕೊಡುತ್ತಿದ್ದರು.
ಮಾತು ಕೇಳದ ಪರಿಣಾಮ!
ನಿತಿನ್ ಗಡ್ಕರಿಯವರನ್ನು ಆಗಸ್ಟ್ನಲ್ಲಿ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿಯಿಂದ ತೆಗೆದು ಹಾಕುವುದಕ್ಕೆ ಕಾರಣ ಅವರು ಹೀಗೆ ಪಕ್ಷದ ವಿರುದ್ಧ ನಿರಂತರಾವಾಗಿ ನೀಡುತ್ತಿದ್ದ ಹೇಳಿಕೆಗಳು ಎಂದು ಹೇಳಲಾಗಿದೆ. ಅದೂ ಕೂಡ ಆರ್ಎಸ್ಎಸ್ ಈ ವಿಚಾರವಾಗಿ ನಿತಿನ್ ಗಡ್ಕರಿಯವರಿಗೆ ಎಚ್ಚರಿಕೆ ಕೊಟ್ಟಿತ್ತು. ಹಾಗಿದ್ದಾಗ್ಯೂ ಗಡ್ಕರಿ ತಮ್ಮ ಮಾತು ಹರಿಬಿಟ್ಟಿದ್ದರಿಂದ, ಸಂಸದೀಯ ಮಂಡಳಿಯಿಂದ ಅವರನ್ನು ತೆಗೆಯುವಂತೆ ಆರ್ಎಸ್ಎಸ್ ಬಿಜೆಪಿ ವರಿಷ್ಠರಿಗೆ ಸೂಚಿಸಿತ್ತು. ಹಾಗಾಗೇ ತೆಗೆಯಲಾಗಿದೆ ಎಂಬ ಮಾತುಗಳೂ ಇವೆ. ಸದ್ಯ ಅವರು ತಾವು ರಾಜಕೀಯ ನಿವೃತ್ತಿ ಪಡೆಯೋಲ್ಲ ಎಂದಿದ್ದಾರೆ. ಆದರೆ ಪಕ್ಷದೊಂದಿಗೆ ಅವರ ನಂಟು ಗಟ್ಟಿಯಾಗಿಲ್ಲ ಎಂಬುದಂತೂ ಗೋಚರಿಸುತ್ತಿದೆ.