Site icon Vistara News

ಬಂಧಿತ ಉಗ್ರರ ಬಳಿಯಿದ್ದ ದಾಖಲೆಯಲ್ಲಿದೆ ಶಾಕಿಂಗ್‌ ವಿಷಯ; ಪಿಎಫ್‌ಐ ಯೋಜನೆ ಬಹಿರಂಗ !

PFI

ನವ ದೆಹಲಿ: ಇಂದು ಬಿಹಾರದಲ್ಲಿ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಹೀಗೆ ಬಂಧಿತರಾದ ಇಬ್ಬರು ಉಗ್ರರಿಂದ ಪಾಟ್ನಾ ಪೊಲೀಸರು ಎರಡು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಒಂದು ೮ ಪುಟಗಳ ಸುದೀರ್ಘ ಡಾಕ್ಯುಮೆಂಟ್‌ ʼ2047ರ ವೇಳೆಗೆ ಭಾರತದಲ್ಲಿ ಸಂಪೂರ್ಣವಾಗಿ ಇಸ್ಲಾಮಿಕ್‌ ಆಡಳಿತ(Islamic rule in the country by 2047)ʼ ಎಂಬ ತಲೆ ಬರಹ ಹೊಂದಿದೆ. ಅಂದರೆ ಇನ್ನು 25ವರ್ಷಗಳಲ್ಲಿ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಪರಿವರ್ತಿಸುವ ಪ್ರಯತ್ನಗಳ ಬಗ್ಗೆ ಇದರಲ್ಲಿ ಉಲ್ಲೇಖವಿದೆ. ಅದರ ಹೊರತಾಗಿಯೂ ಈ ಉಗ್ರ ಘಟಕದಲ್ಲಿ ಇದ್ದ, ಇಸ್ಲಾಮಿಕ್‌ ಉಗ್ರ ಸಂಘಟನೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾಕ್ಕೆ ಸೇರಿದ ಹಲವು ಧ್ವಜಗಳು, ಪೋಸ್ಟರ್‌ಗಳು, ಕರಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪಿಎಫ್‌ಐ ಸಂಘಟನೆ ಭಾರತದಲ್ಲಿ ಅದೆಷ್ಟು ಉಗ್ರ ಚಟುವಟಿಕೆ ನಡೆಸುತ್ತಿದೆ, ಭಾರತದಲ್ಲಿ ಇಸ್ಲಾಮಿಕ್‌ ಆಡಳಿತ ಸ್ಥಾಪಿಸಲು ಏನೆಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ ಹಾಗೂ ಅದಕ್ಕಾಗಿ ಯಾವೆಲ್ಲ ದೇಶಗಳ ಸಹಕಾರ ಪಡೆಯುತ್ತಿದೆ ಎಂಬುದಕ್ಕೆ ಈ ದಾಖಲೆಗಳು ಕೈಗನ್ನಡಿಯಂತಿವೆ. ʼಒಟ್ಟಾರೆ ಮುಸ್ಲಿಮರಲ್ಲಿ ಶೇ.10ರಷ್ಟು ಜನರು ನಮ್ಮ ಬೆನ್ನ ಹಿಂದೆ ಬೆಂಬಲವಾಗಿ ಇದ್ದರೆ ಸಾಕು. ನಾವು ಈ ಹೇಡಿಗಳಾದ ಬಹುಸಂಖ್ಯಾತ ಸಮುದಾಯವನ್ನು ಸಂಪೂರ್ಣವಾಗಿ ನಿಗ್ರಹಿಸುತ್ತೇವೆ. ಅವರು ನಮ್ಮ ಅಧೀನದಲ್ಲಿ ಇರುವಂತೆ ಮಾಡುತ್ತೇವೆ. ಇಸ್ಲಾಂ ವೈಭವ ಮರುಕಳಿಸುವಂತೆ ಮಾಡುತ್ತೇವೆʼ ಎಂಬ ಸಾಲುಗಳನ್ನು ಕೂಡ ಈ ಡಾಕ್ಯುಮೆಂಟ್‌ನಲ್ಲಿ ಪಿಎಫ್‌ಐ ಬರೆದುಕೊಂಡಿದೆ.

ಪಾಟ್ನಾದಲ್ಲಿ ಇಂದು ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ಒಬ್ಬನ ಹೆಸರು ಮೊಹಮ್ಮದ್‌ ಅಥರ್‌ ಫರ್ವೇಜ್‌ ಮತ್ತು ಇನ್ನೊಬ್ಬಾತ ಮೊಹಮ್ಮದ್‌ ಜಲಾಲುದ್ದೀನ್‌. ಜುಲೈ 12 ರಂದು ಪ್ರಧಾನಿ ನರೇಂದ್ರ ಮೋದಿ ಹತ್ಯೆಗೂ ಇವರು ಸಂಚು ರೂಪಿಸಿದ್ದರು ಎಂಬ ಸತ್ಯ ಹೊರಬಿದ್ದಿದೆ. ಅಷ್ಟೇ ಅಲ್ಲ, ಇಂದು ಬಂಧಿತನಾದ ಮೊಹಮ್ಮದ್‌ ಜಲಾಲುದ್ದೀನ್‌ ಜಾರ್ಖಂಡ್‌ನ ಮಾಜಿ ಪೊಲೀಸ್‌ ಅಧಿಕಾರಿ. ನಂತರ ಪಿಎಫ್‌ಐ ಜತೆ ನಂಟು ಬೆಳೆಸಿಕೊಂಡು ಉಗ್ರ ಚಟುವಟಿಕೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಇವರಿಗೆ ಎಸ್‌ಡಿಪಿಐ, ಸ್ಟುಡೆಂಟ್ಸ್‌ ಇಸ್ಲಾಮಿಕ್‌ ಮೂಮೆಂಟ್‌ ಆಫ್‌ ಇಂಡಿಯಾ ಜತೆಗೂ ಸಂಪರ್ಕದಲ್ಲಿದ್ದರು. ಇವೆಲ್ಲ ಸಂಘಟನೆಗಳೂ ಭಾರತದಲ್ಲಿ ನಿಷೇಧಿತ. ಈ ಉಗ್ರರು ಮಾರ್ಶಲ್‌ ಆರ್ಟ್ಸ್‌ ಕಲಿಸುವ ನೆಪದಲ್ಲಿ ಸ್ಥಳೀಯ ಯುವಕರನ್ನು ಸೆಳೆದು ಮಾರಕಾಸ್ತ್ರಗಳ ಪ್ರಯೋಗ ಹೇಳಿಕೊಡುತ್ತಿದ್ದರು ಎಂಬುದೂ ಗೊತ್ತಾಗಿದೆ.

ಇದನ್ನೂ ಓದಿ: ಪಿಎಫ್‌ಐ ಸಂಘಟನೆಯಿಂದ ಮೋದಿ ಹತ್ಯೆ ಸಂಚು, ಬಿಹಾರದಲ್ಲಿ ಇಬ್ಬರು ಉಗ್ರರ ಸೆರೆ

Exit mobile version