ಗುಜರಾತ್ನ ಪೋರಬಂದರ್ ಕರಾವಳಿ ತೀರದಲ್ಲಿದ್ದ ಐಎಸ್ (ಇಸ್ಲಾಮಿಕ್ ಸ್ಟೇಟ್ಸ್) ಘಟಕದ ಮೇಲೆ ಅಲ್ಲಿನ ಭಯೋತ್ಪಾದನಾ ನಿಗ್ರಹ ದಳ(ATS)ದ ಸಿಬ್ಬಂದಿ ದಾಳಿ (Islamic State module)ನಡೆಸಿದ್ದಾರೆ. ಐಎಸ್ ಘಟಕವನ್ನು ಭೇದಿಸುವ ಜತೆ, ಮಹಿಳೆ ಸೇರಿ ಒಟ್ಟು ನಾಲ್ವರು ಶಂಕಿತರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಮೂವರು ಯುವಕರು ಜಮ್ಮು-ಕಾಶ್ಮೀರದ ಶ್ರೀನಗರದವರಾಗಿದ್ದು, ಮಹಿಳೆ ಗುಜರಾತ್ನ ಸೂರತ್ನವಳು ಎಂದು ವರದಿಯಾಗಿದೆ.
ಪೋರ್ಬಂದರ್ನಲ್ಲಿದ್ದ ಇಸ್ಲಾಮಿಕ್ ಸ್ಟೇಟ್ನ ಘಟಕದಲ್ಲಿ ಇದ್ದ ನಾಲ್ವರು, ಐಸಿಸ್ ತರಬೇತಿ ಪಡೆಯಲು ಅಫ್ಘಾನಿಸ್ತಾನಕ್ಕೆ ಹೋಗುವ ಯೋಜನೆ ರೂಪಿಸಿದ್ದರು. ಅಲ್ಲಿ ಹೋಗಿ ಐಸಿಸ್ನ ಸಹ ಸಂಘಟನೆಯಾದ ಖೊರಾಸನ್ ಇಸ್ಲಾಮಿಕ್ ಸ್ಟೇಟ್ಗೆ ಸೇರುವುದು ಇವರ ಮುಂದಿನ ಪ್ಲ್ಯಾನ್ ಆಗಿತ್ತು. ಅಫ್ಘಾನ್ಗೆ ತೆರಳಲು ಒಂದು ಬೋಟ್ನ್ನು ಬಾಡಿಗೆ ಪಡೆಯಲು ಮಾತುಕತೆ ನಡೆಸುತ್ತಿದ್ದರು. ಇದೇ ವೇಳೆ ಭಯೋತ್ಪಾದನಾ ನಿಗ್ರಹ ದಳದ ಕೈಯಿಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: NIA Raid: ಮಧ್ಯಪ್ರದೇಶದಲ್ಲಿ ಐಸಿಸ್ ಉಗ್ರರ ಜಾಲ ಬಯಲು; ಮಸೀದಿಗಳಲ್ಲೇ ಸಂಚು ರೂಪಿಸುತ್ತಿದ್ದ ಮೂವರ ಬಂಧನ
ಈ ಘಟಕದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಹಲವು ಪ್ರಮುಖ ದಾಖಲೆಗಳನ್ನು ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಕಾಶ್ಮೀರದ ಆ ಮೂವರು ಯುವಕರ ಬಳಿ ಜಿಹಾದ್ಗೆ ಸಂಬಂಧಪಟ್ಟ ಹಲವು ಕೃತಿಗಳು ಇದ್ದವು ಎಂದು ಎಟಿಎಸ್ ತಿಳಿಸಿದೆ. ಅಷ್ಟೇ ಅಲ್ಲ, ಖೊರಾಸನ್ ಇಸ್ಲಾಮಿಕ್ ಸ್ಟೇಟ್ನ ಬ್ಯಾನರ್, ಧ್ವಜ, ಕೆಲವು ವಿಡಿಯೊಗಳು, ಜಿಹಾದಿ ನಾಯಕರುಗಳ ಭಾಷಣದ ತುಣುಕುಗಳುಳ್ಳ ಮೊಬೈಲ್ ಫೋನ್ಗಳು, ಟ್ಯಾಬ್ಲೆಟ್ಗಳು ಸಿಕ್ಕಿವೆ ಎಂದು ಮಾಹಿತಿ ನೀಡಿದೆ.
ಇವರೆಲ್ಲರೂ ಪೋರ್ಬಂದರ್ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಇದ್ದರು. ಅದೂ ಕೂಡ ಮೀನುಗಾರಿಕಾ ದೋಣಿಯಲ್ಲಿ ಕೆಲಸ ಮಾಡುವವರೇ ಆಗಿದ್ದರು. ಬರಿ ಮೊಬೈಲ್, ಟ್ಯಾಬ್ಲೆಟ್, ಇಸ್ಲಾಮಿಕ್ ಜಿಹಾದ್ಗೆ ಸಂಬಂಧಪಟ್ಟ ಕೃತಿ-ಪುಸ್ತಕಗಳು ಮಾತ್ರವಲ್ಲದೆ, ಕೆಲವು ಶಸ್ತ್ರಗಳನ್ನೂ ಭಯೋತ್ಪಾದನಾ ನಿಗ್ರಹ ದಳ ವಶಪಡಿಸಿಕೊಂಡಿದೆ. ಇವರೆಲ್ಲ ಕಳೆದ ಒಂದು ವರ್ಷದಿಂದಲೂ ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗೆ ಸಂಪರ್ಕದಲ್ಲಿದ್ದರು ಎಂದೂ ಹೇಳಲಾಗಿದೆ.