ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಉಗ್ರರು ಸಕ್ರಿಯರಾಗಿದ್ದಾರೆ ಮತ್ತು ತಮಿಳುನಾಡಿನ ಕೊಯಮತ್ತೂರು ಕಾರು ಸ್ಫೋಟ ಮತ್ತು ಮಂಗಳೂರು ಆಟೋ ರಿಕ್ಷಾ ಸ್ಫೋಟದ ಕೃತ್ಯದಲ್ಲಿ ಇವರ ಕೈವಾಡ ಇದೆ ಎಂಬುದನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಸಹ ಸಂಘಟನೆಯಾದ ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ (ಐಎಸ್ಕೆಪಿ) ಒಪ್ಪಿಕೊಂಡಿದೆ. ಐಎಸ್ಕೆಪಿ ಭಯೋತ್ಪಾದಕ ಸಂಘಟನೆ ತನ್ನ ಮುಖವಾಣಿಯಾದ ವೈಸ್ ಆಫ್ ಖೊರಾಸನ್ ಪತ್ರಿಕೆಯಲ್ಲಿ ಈ ವಿಷಯವನ್ನು ಬರೆದುಕೊಂಡಿದೆ.
ಇಸ್ಲಾಮಿಕ್ ಸ್ಟೇಟ್ (ಖೊರಾಸಾನ್ ಪ್ರಾಂತ್ಯ)ನ ಅಲ್-ಅಜೈಮ್ ಮೀಡಿಯಾ ಫೌಂಡೇಶನ್ ತನ್ನ ವೈಸ್ ಆಫ್ ಖೊರಾಸನ್ ನಿಯತಕಾಲಿಕದ 23ನೇ ಆವೃತ್ತಿಯನ್ನು ಇಂಗ್ಲಿಷ್ನಲ್ಲಿ ಬಿಡುಗಡೆ ಮಾಡಿದ್ದು, ಇದು 68 ಪುಟಗಳನ್ನು ಒಳಗೊಂಡಿದೆ. ಅದರಲ್ಲಿ ಎಲ್ಲ ವಿಷಯಗಳನ್ನೂ ಉಲ್ಲೇಖಿಸಿದೆ. ಈ ಮೂಲಕ ತನಗೆ ತಾನೇ ಪ್ರಚಾರ ಕೊಟ್ಟುಕೊಂಡಿದೆ. ಇನ್ನು ದಕ್ಷಿಣ ಭಾರತದಲ್ಲಿ ತಮ್ಮ ಸಂಘಟನೆಯ ಉಗ್ರರು ಸಕ್ರಿಯರಾಗಿದ್ದಾರೆ ಎಂದಷ್ಟೇ ಈ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಸಹ ಸಂಘಟನೆ ಹೇಳಿಕೊಂಡಿದ್ದು, ನಿರ್ದಿಷ್ಟವಾಗಿ ಯಾವ ರಾಜ್ಯದಲ್ಲಿ ಇದ್ದಾರೆ ಎಂದು ತಿಳಿಸಿಲ್ಲ. ಆದರೆ ಅವರು ಕೇರಳದಲ್ಲಿ ಸಂಪೂರ್ಣವಾಗಿ ಸಕ್ರಿಯರಾಗಿದ್ದು, ತಮಿಳುನಾಡು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಅವರ ವ್ಯಾಪ್ತಿ ಹರಡಿರಬಹುದು ಎಂದು ಅಂದಾಜಿಸಲಾಗಿದೆ.
ತಮಿಳುನಾಡು ಮತ್ತು ಮಂಗಳೂರು ಎರಡೂ ಸ್ಫೋಟಗಳನ್ನೂ ಇಲ್ಲಿ ಉಲ್ಲೇಖಿಸಲಾಗಿದೆ. 2022ರ ಅಕ್ಟೋಬರ್ನಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಾರು ಸ್ಫೋಟವಾಗಿತ್ತು. ನವೆಂಬರ್ನಲ್ಲಿ ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಸ್ಫೋಟವಾಗಿತ್ತು. ಇವೆರಡೂ ಕೃತ್ಯಗಳ ಹಿಂದೆ ಉಗ್ರ ಲಿಂಕ್ ಇರುವುದು ಈಗಾಗಲೇ ಸ್ಪಷ್ಟವಾಗಿದೆ. ಕೊಯಮತ್ತೂರು ಸ್ಫೋಟಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ ಈಗಾಗಲೇ ಹಲವು ಕಡೆ ಶೋಧ ಕಾರ್ಯ ನಡೆಸುತ್ತಿದೆ. ಇದೀಗ ವೈಸ್ ಆಫ್ ಖೊರಾಸಾನ್ನಲ್ಲಿ ಈ ಬಗ್ಗೆ ಬರೆಯಲಾಗಿದೆ. ‘ತಮಿಳುನಾಡಿನ ಕೊಯಮತ್ತೂರು ಮತ್ತು ಕರ್ನಾಟಕದ ಬೆಂಗಳೂರು (ಇಲ್ಲಿ ಮಂಗಳೂರು ಬದಲಿಗೆ ಬೆಂಗಳೂರು ಎಂದು ಬರೆಯಲಾಗಿದೆ) ನಗರಗಳಲ್ಲಿ ದಾಳಿ ನಡೆಸಿದ್ದು ನಮ್ಮ ಸಹೋದರರು. ಅವರು ನಮ್ಮ ಧರ್ಮವನ್ನು ಅಗೌರವಿಸುವವುದರ ವಿರುದ್ಧ ಸೇಡು ತೀರಿಸಿಕೊಂಡರು. ಮುಸ್ಲಿಮೇತರರಲ್ಲಿ ಮತ್ತು ಇಸ್ಲಾಂ ನಂಬದವರಲ್ಲಿ ಭಯಹುಟ್ಟಿಸಿದರು’ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ISIS Leader Killed: ಸೊಮಾಲಿಯಾದಲ್ಲಿ ಐಸಿಸ್ ಪ್ರಮುಖ ಉಗ್ರ ಬಿಲಾಲ್ ಮತ್ತು ಆತನ 10 ಸಹಚರರನ್ನು ಕೊಂದ ಅಮೆರಿಕ ಸೇನೆ
ಅದಷ್ಟೇ ಅಲ್ಲ ‘ಐಎಸ್ಕೆಪಿಯ ಈ ಹೊಸ ನಿಯತಕಾಲಿಕದಲ್ಲಿ ಹಿಂದುಗಳು, ಬಿಜೆಪಿ ಪಾರ್ಟಿ, ಭಾರತೀಯ ಸೇನೆ ವಿರುದ್ಧ ಕಟುವಾಗಿ ಬರೆಯಲಾಗಿದೆ. ಇವೆಲ್ಲವೂ ನಮ್ಮನ್ನು ದಾಳಿಗೆ ಪ್ರಚೋದಿಸುತ್ತಿವೆ ಎಂದೂ ಹೇಳಲಾಗಿದೆ. ಹಿಂದುಗಳು ಅಲ್ಲಾ ಮತ್ತು ಅವನ ಪ್ರವಾದಿಯ ಶತ್ರುಗಳು ಎಂದು ಲೇಖನದಲ್ಲಿ ಹೇಳಲಾಗಿದ್ದು, ಅವರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಇಂಗಿತವನ್ನು ಲೇಖನದಲ್ಲಿ ವ್ಯಕ್ತಪಡಿಸಲಾಗಿದೆ. ಹಾಗೇ, ಕಾಶ್ಮೀರ, ಬಾಬ್ರಿ ಮಸೀದಿ, ಗುಜರಾತ್ ಗಲಭೆ ವಿಷಯದ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ. ಭಾರತದ ಉಲ್ಲಂಘನೆ ಮಿತಿಮೀರಿದೆ. ನೀವು ಇಸ್ಲಾಂ ಧರ್ಮ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಹೆಚ್ಚುತ್ತಿದೆ ಎಂದು ಬರೆಯಲಾಗಿದೆ.