Site icon Vistara News

Aditya L1 Mission: ಸೂರ್ಯಯಾನಕ್ಕೆ ಆದಿತ್ಯ ಎಲ್‌ 1 ಮಿಷನ್‌ ರೆಡಿ; ತಾಲೀಮು ಅಂತ್ಯ, ಉಡಾವಣೆಯೊಂದೇ ಬಾಕಿ

Aditya L1 Mission

ಹೈದರಾಬಾದ್:‌ ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಕೈಗೊಳ್ಳುತ್ತಿರುವ ಆದಿತ್ಯ ಎಲ್‌ 1 ಮಿಷನ್‌ (Aditya L1 Mission) ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್‌ 2ರಂದು ಉಡಾವಣೆ ಮಾಡಲು ಇಸ್ರೋ ತೀರ್ಮಾನಿಸಿದ್ದು, ಇದಕ್ಕಾಗಿ ಉಡಾವಣೆ ಪೂರ್ವ ಸಿದ್ಧತೆ, ಅಭ್ಯಾಸ ಹಾಗೂ ಆಂತರಿಕ ತಪಾಸಣೆ ಕೈಗೊಂಡಿದೆ. ಇದರ ಫೋಟೊಗಳನ್ನೂ ಇಸ್ರೋ ಎಕ್ಸ್‌ ಸಾಮಾಜಿಕ ಜಾಲತಾಣಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ: Chandrayaan 3: ಸ್ಮೈಲ್‌ ಪ್ಲೀಸ್;‌ ಚಂದ್ರನೂರಿನಿಂದ ವಿಕ್ರಮ್‌ ಲ್ಯಾಂಡರ್‌ ಫೋಟೊ ಕಳುಹಿಸಿದ ಪ್ರಜ್ಞಾನ್‌

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಮಿಷನ್‌ ಇದೆ. ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್‌ ಇದನ್ನು ಹೊತ್ತುಕೊಂಡು ಸಾಗಲಿದೆ. ಸೆಪ್ಟೆಂಬರ್‌ 2ರಂದು ಬೆಳಗ್ಗೆ 11.50ಕ್ಕೆ ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತದೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್‌ ದೂರದಲ್ಲಿ ಎಲ್‌ 1 ಮಿಷನ್‌ ಸೂರ್ಯನ ಮೇಲ್ಮೈ ವಾತಾವರಣದ ಅಧ್ಯಯನ ಮಾಡಲಿದೆ.

ಸೂರ್ಯನ ಲ್ಯಾಗ್ರೇಂಜ್‌ ಪಾಯಿಂಟ್‌ನಲ್ಲಿ (L Point) ಆದಿತ್ಯ ಎಲ್‌ 1 ಮಿಷನ್‌ನ ಉಪಗ್ರಹವು ಅಧ್ಯಯನ ನಡೆಸಲಿದೆ. ಈ ಲ್ಯಾಗ್ರೇಂಜ್‌ ಪಾಯಿಂಟ್‌ ತಲುಪಲು ಉಪಗ್ರಹಕ್ಕೆ 4 ತಿಂಗಳು ಬೇಕಾಗುತ್ತದೆ ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಭಾರತವು ಸೂರ್ಯನ ಅಧ್ಯಯನ ಕೈಗೊಳ್ಳುತ್ತಿರುವ ಮೊದಲ ಮಿಷನ್‌ ಇದಾಗಿರುವುದರಿಂದ ಹಾಗೂ ಇಸ್ರೋ ಚಂದ್ರಯಾನ 3 ಯಶಸ್ವಿಯಾಗಿರುವುದರಿಂದ ಆದಿತ್ಯ ಎಲ್‌ 1 ಮಿಷನ್‌ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಮಿಷನ್‌ ಉದ್ದೇಶ

ಆದಿತ್ಯ ಎಲ್‌ 1 ಮಿಷನ್‌ ಸೂರ್ಯನ ಕುರಿತು ಅಧ್ಯಯನ ಮಾಡಲಿರುವ ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್‌ ಆಗಿದೆ. ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್‌ ದೂರದಲ್ಲಿ ಇದು ಅಧ್ಯಯನ ಮಾಡಲಿದೆ. ಅಂದರೆ, ಚಂದ್ರನಿಗಿಂತ ನಾಲ್ಕು ಪಟ್ಟು ಹೆಚ್ಚು ದೂರದಲ್ಲಿ ಮಿಷನ್‌ ಕಾರ್ಯನಿರ್ವಹಿಸಲಿದೆ. ಗ್ರಹಣ ಸೇರಿ ಯಾವುದೇ ಸಂದರ್ಭದಲ್ಲಿಯೂ ಮಿಷನ್‌ ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ ಎಂಬುದಾಗಿ ಇಸ್ರೋ ಮಾಹಿತಿ ನೀಡಿದೆ. ಸೂರ್ಯನ ಮೇಲ್ಮೈ ವಾತಾವರಣ, ತಾಪಮಾನ, ಉಷ್ಣಗಾಳಿ, ಸೂರ್ಯನ ಪ್ರಭಾವಲಯದ ಭೌತವಿಜ್ಞಾನ (Physics Of Solar Corona), ಉಷ್ಣವಲಯದ ಪ್ರಭಾವ ಸೇರಿ ಹಲವು ಅಂಶಗಳ ಕುರಿತು ಉಪಗ್ರಹವು ಅಧ್ಯಯನ ನಡೆಸಲಿದೆ.

Exit mobile version