ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಭಾರತದ ಅತಿದೊಡ್ಡ ಉಡಾವಣಾ ವಾಹಕ ಮಾರ್ಕ್ 111 (ಎಲ್ವಿಎಂ3) ರಾಕೆಟ್/ಒನ್ವೆಬ್ ಇಂಡಿಯಾ-2 ಮಿಷನ್ನ್ನು 36 ಉಪಗ್ರಹಗಳೊಂದಿಗೆ ಯಶಸ್ವಿಯಾಗಿ ಉಡಾವಣೆ ಮಾಡಿತು. ಇಂದು ಬೆಳಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ಮಾಡಲಾಯಿತು.
ಯುನೈಟೆಡ್ ಕಿಂಗ್ಡಮ್ನ ನೆಟ್ವರ್ಕ್ ಆ್ಯಕ್ಸೆಸ್ ಅಸೋಸಿಯೇಶನ್ ಲಿಮಿಟೆಡ್ (ಒನ್ ವೆಬ್ ಗ್ರೂಪ್ ಕಂಪನಿ) ಭಾರತದ ಇಸ್ರೋದ ವಾಣಿಜ್ಯಾತ್ಮಕ ಅಂಗಸಂಸ್ಥೆಯಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ನೊಂದಿಗೆ ಸೇರಿ ಒಟ್ಟು 72 ಉಪಗ್ರಹಗಳನ್ನು ಭೂಮಿಯ ಕೆಳಹಂತದ ಕಕ್ಷೆಗೆ (LEO) ಸೇರಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಅದರ ಅನ್ವಯ 2022ರ ಅಕ್ಟೋಬರ್ನಲ್ಲಿ ಇಸ್ರೋದಿಂದ 36 ಉಪಗ್ರಹಗಳನ್ನು ಒಳಗೊಂಡ ಎಲ್ವಿಎಂ3 ರಾಕೆಟ್ನ್ನು ಉಡಾವಣೆ ಮಾಡಲಾಗಿತ್ತು. ಇದೇ ಒನ್ವೆಬ್ ಇಂಡಿಯಾ ಮಿಷನ್ನ ಮುಂದುವರಿದ ಭಾಗವಾಗಿ ಈಗ ಮತ್ತೆ 36 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.
ಯುಕೆಯ ಒನ್ವೆಬ್ ಎಂಬುದು ಒಂದು ಬಾಹ್ಯಾಕಾಶ ಚಾಲಿತ, ಜಾಗತಿಕ ಸಂವಹನ ಜಾಲ. ಸರ್ಕಾರಗಳು ಮತ್ತು ಉದ್ಯಮಗಳ ಮಧ್ಯೆ ಸಂಪರ್ಕವನ್ನು ಸಾಧ್ಯವಾಗಿಸುತ್ತದೆ. ಅದೇ ನಿಟ್ಟಿನಲ್ಲಿ, ಬ್ರಾಡ್ಬ್ಯಾಂಡ್ ಉಪಗ್ರಹಗಳನ್ನು ಭೂಮಿಯ ಕೆಳಹಂತದ ಕಕ್ಷೆಗೆ ಕಳಿಸುವ ಕಾರ್ಯವನ್ನು ಭಾರತಿ ಎಂಟರ್ಪ್ರೈಸಸ್ ಕಂಪನಿಯು ಈ ಒನ್ವೆಬ್ನಲ್ಲಿ ದೊಡ್ಡಮಟ್ಟದಲ್ಲಿ ಹೂಡಿಕೆ ಮಾಡಿದೆ.
ಒನ್ವೆಬ್ ಇದುವರೆಗೆ ಒಟ್ಟು 17 ಬಾರಿ ಹೀಗೆ ಉಪಗ್ರಹಗಳನ್ನು ಉಡಾವಣೆ ಮಾಡಿ, ಭೂಮಿಯ ಕೆಳಹಂತದ ಕಕ್ಷೆಗೆ ಸೇರಿಸಿದ್ದು, ಇಂದು ನಡೆದ ಉಪಗ್ರಹ ಉಡಾವಣೆ 18ನೇ ಬಾರಿಯದ್ದು. ಈ ವರ್ಷದಲ್ಲಿಯೇ ಇದು ಮೂರನೇಯದಾಗಿದೆ. ಅಂದಹಾಗೇ, ಒನ್ವೆಬ್ ಒಟ್ಟಾರೆ 616 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದ್ದು, ಅದರಲ್ಲಿ 72 ಉಪಗ್ರಹಗಳ ಉಡಾವಣೆಯನ್ನು ಜಂಟಿಯಾಗಿ ನಡೆಸಲು ಇಸ್ರೋ ಮತ್ತು ಒನ್ವೆಬ್ ನಡುವೆ ಒಪ್ಪಂದವಾಗಿತ್ತು.
ಇಂದು ಉಡಾವಣೆಯಾದ ರಾಕೆಟ್ 43.3 ಮೀಟರ್ ಉದ್ದವಿದ್ದು, ಅದು ಒಳಗೊಂಡ 36 ಉಪಗ್ರಹಗಳ ಒಟ್ಟು ತೂಕ 5805 ಕೆಜಿ. ಇವುಗಳನ್ನು ಭೂ ಕೆಳಹಂತದ, 450 ಕಿಮೀ ವೃತ್ತಾಕಾರದ ಕಕ್ಷೆಯಲ್ಲಿ, 87.4 ಡಿಗ್ರಿ ಬಾಗಿಕೊಂಡಿರುವಂತೆ ಸೇರಿಸಲಾಗುವುದು ಎಂದು ಇಸ್ರೋ ತಿಳಿಸಿದೆ.
ಇದನ್ನೂ ಓದಿ: ISRO YUVIKA: ಇಸ್ರೋ ಯುವ ವಿಜ್ಞಾನಿ ಕಾರ್ಯಕ್ರಮ ಯುವಿಕಾಗೆ ನೋಂದಣಿ ಶುರು, ಯಾವ ವಿದ್ಯಾರ್ಥಿಗಳು ಅರ್ಹರು?